ವಿಧಾನಮಂಡಲದ ಅಧಿವೇಶನ ಕರೆಯಲು ಒತ್ತಾಯಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸದನಕ್ಕೆ ಬರಲ್ಲ ಎಲ್ಲಿದ್ಯಪ್ಪಾ ಕುಮಾರಸ್ವಾಮಿ ಎಂದು ಹೇಳಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥ ನಾರಾಯಣ ವಿರುದ್ಧ ಕಿಡಿಕಾರಿ ನಕಲಿಸರ್ಟಿಫಿಕೇಟ್ ರಾಜಾ, ನಕಲಿ ಸರ್ಟಿಫಿಕೇಟ್ ಶೂರ, ನನ್ನನ್ನು ಹುಡುಕುತ್ತಿದ್ದಾರೆ. ಸದನದಲ್ಲೂ ಕಾಣಿಸಿಲ್ಲವಂತೆ, ರಾಮನಗರದಲ್ಲೂ ಕಂಡಿಲ್ಲವಂತೆ, ಕಣ್ಣಿಗೆ ಕಾಮಾಲೆಯಾದರೂ ಬಂದಿರಬೇಕು, ಜಾಣಕುರುಡಾದರೂ ಇರಬೇಕು ಎಂದು ತಿರುಗೇಟು ನೀಡಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು ಕರಾವಳಿ ಕೊಲೆಗಳು, ಮಳೆ-ನೆರೆ, ಚರ್ಚೆಗೆ ಅಧಿವೇಶನ ಕರೆಯಬೇಕೆಂದು ಒತ್ತಾಯಿಸಿರುವುದು ನಿಜ. ಇದರಿಂದ ಉನ್ನತ ಶಿಕ್ಷಣ ಸಚಿವರಿಗೇಕೆ ಉರಿ, ತಮ್ಮ ಇಲಾಖೆಯ ಹುಳುಕು ಹೊರ ಬಂದಾವು ಎಂಬ ಭಯವೇ? ನನ್ನಲ್ಲೂ ದಾಖಲೆಗಳಿವೆ, ಬಿಚ್ಚಿದರೆ ಅವೇ ಸರ್ಟಿಫಿಕೇಟ್ ಕೋರ್ಸ್‌ಗಿಂತ ಬೃಹತ್ ಚಾಪ್ಟರ್ ಬಿಚ್ಚಲೆ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.
ಕಲಾಪವೆಂದರೆ ಉನ್ನತ ಶಿಕ್ಷಣ ಸಚಿವರಿಗೆ ಮೈ ಬೆಚ್ಚಗಾಗುತ್ತದಾ? ಅವರ ಕೌಶಲ್ಯ ಗೊತ್ತಿದೆ. ಅಕ್ರಮ ಮುಚ್ಚಿ ಹಾಕಿಕೊಳ್ಳಲು ಅಕ್ರಮ ದಾಖಲೆಗಳಿದ್ದ ಬಿಬಿಎಂಪಿ ಕಟ್ಟಡಕ್ಕೆ ಬೆಂಕಿ ಹಾಕಿಸಿದ್ದು, ಆಪರೇಷನ್ ಕಮಲದಲ್ಲೂ ಕೋಟಿ ಕೋಟಿ ಹಣ ಶಾಸಕರ ಮನೆಗಳಲ್ಲೇ ಇಟ್ಟು ಬರುವುದು ಕುಶಲತೆಯೇ? ಕೌಶಲ್ಯ ಮಂತ್ರಿಯಾಗಿದ್ದಕ್ಕೂ ಸಾರ್ಥಕ ಎಂದು ಕುಮಾರಸ್ವಾಮಿ ಟ್ವೀಟ್‌ನಲ್ಲ ವ್ಯಂಗ್ಯವಾಡಿದ್ದಾರೆ.
ವಿರೋಧ ಪಕ್ಷದ ನಾಯಕನಾಗಿ ಅಧಿವೇಶನಕ್ಕೆ ಆಗ್ರಹಿಸುವುದು ನನ್ನ ಹಕ್ಕು, ಕಲಾಪದಲ್ಲಿ ನನ್ನ ಮೌಲಿಕ ಎಷ್ಟು, ನಿಮ್ಮದೆಷ್ಟು ತುಲನೆ ಮಾಡಿಕೊಳ್ಳಿ. ಕಾಮಾಲೆ ಕಣ್ಣುಗಳ ಪೊರೆ ತೆಗೆದು ನೋಡಿ ಅಶ್ವತ್ತನಾರಾಯಣ ಎಂದು ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
ನನ್ನ ಸರ್ಕಾರವನ್ನು ತೆಗೆಯಲು ಸಮಾಜಘಾತುಕ ಶಕ್ತಿಗಳ ಜತೆ ಕೈ ಮಿಲಾಯಿಸಿದ್ದು, ಟಿಕೆಟ್ ಬೆಟ್ಟಿಂಗ್ ದಂಧೆಕೋರರ ಜತೆ ಶಾಮೀಲಾಗಿದ್ದು, ಹಣದ ಹೊಳೆ ಹರಿಸಿದ್ದು, ಎಲ್ಲವೂ ಗೊತ್ತಿದೆ. ಧೈರ್ಯವಿದ್ದರೆ ಬಹಿರಂಗ ಚರ್ಚೆಗೆ ಬನ್ನಿ ಎಲ್ಲವನ್ನೂ ಬಿಚ್ಚಿಸುತ್ತೇನೆ ಎಂದು ಕುಮಾರಸ್ವಾಮಿ ಸಚಿವ ಅಶ್ವತ್ಥನಾರಾಯಣ ವಿರುದ್ಧ ಹರಿಹಾಯ್ದರು.
ಪಠ್ಯ ಪರಿಷ್ಕರಣೆ ಮಾಡಿದ್ದೀರಲ್ಲ ಅದರಲ್ಲಿ ದಾದಿಯರ ನಕಲಿ ನಕಲಿ ಸರ್ಟಿಫಿಕೇಟ್ ಸೃಷ್ಟಿ ಹೇಗೆ? ಆಪರೇಷನ್ ಕಮಲ ಮಾಡುವುದು ಹೇಗೆ? ಕದ್ದುಮುಚ್ಚಿ ಹಣ ಸಾಗಿಸಿ ಶಾಸಕರ ಮನೆಯಲ್ಲಿ ಇಟ್ಟು ಬರುವುದು ಹೇಗೆ? ಇದೆಲ್ಲವನ್ನೂ ಪಠ್ಯದಲ್ಲಿ ಸೇರಿಸಿದ್ದರೆ ಮುಂದಿನ ಯುವ ಜನರಿಗೂ ನಿಮ್ಮಂತೆಯೇ ಆಗುವ ಭಾಗ್ಯ ಸಿಗುತ್ತಿತ್ತು ಅಲ್ಲವೆ ಆಪರೇಷನ್ ಅಶ್ವತ್ಥನಾರಾಯಣ ಎಂದು ಕುಮಾರಸ್ವಾಮಿ ಗೇಲಿ ಮಾಡಿದ್ದಾರೆ. ಜೆಡಿಎಸ್ ಕಂಪನಿ ಎನ್ನುತ್ತೀರಿ, ನಿಮ್ಮ ಕಂಪನಿಗಳ ಕತೆ ಬಿಚ್ಚಬೇಕೆ? ಹೊರಗೆ ಸಾಚಾತನ, ಒಳಗೆ ಸೋಗಲಾಡಿತನ ಎರಡೂ ತಲೆಯ ಕುಶಲತೆಯನ್ನು ಎಲ್ಲಿಂದ ಕಲಿತಿರಿ? ಸಂಘದಿಂದ ಬಂದ ಸಂಸ್ಕಾರವೆ ಅಥವಾ ತಮ್ಮ ಹಿನ್ನೆಲೆಯೇ ಇದಾ? ನಿಮ್ಮ ನೈಜ ಹಿನ್ನೆಲೆಯ ಪೂರಾಣ ಗೊತ್ತಿದ್ದವರಿಗೆ ಇದೇನು ಅಚ್ಚರಿಯಿಲ್ಲ ಬಿಡಿ ಎಂದು ವ್ಯಂಗ್ಯವಾಡಿದ್ದಾರೆ.
ಪಿಎಸ್‌ಐ ಅಕ್ರಮ ಪ್ರಾಧಪಕರ ನೇಮಕ ಕರ್ಮಕಾಂಡ, ಕಟ್ಟಡದ ಹೆಸರಿನಲ್ಲಿ ಕಮಿಷನ್ ಕಾಂಚಾಣ, ಅಧಿಕಾರಿಗಳನ್ನು ಒಳಕ್ಕೆ ಹಾಕಿಕೊಂಡು ಡೀಲ್ ಮಾಡುವ ಅಶ್ವತ್ಥನಾರಾಯಣ, ಇದೇನಾ ನೀವು ನೀಡುತ್ತಿರುವ ಉನ್ನತ ಶಿಕ್ಷಣ, ಇದೇನಾ ಸಂಘ ಕಲಿಸಿದ ಶಿಕ್ಷಣ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy