ತಿಪಟೂರು: ತಾಲ್ಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾ ಕಚೇರಿಯಲ್ಲಿ ತಿಪಟೂರು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕರಾದ ಪವನ್ ರವರ ಸಮ್ಮುಖದಲ್ಲಿ ತಾಲ್ಲೂಕಿನ ಮಾದರಿ ಕೃಷಿ ರೈತರಿಗೆ ಅನುದಾನ ಮಂಜುರಾತಿ ಪತ್ರದ ವಿತರಣಾ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೃಷಿ ಸಹಾಯಕ ನಿರ್ದೇಶಕರಾದ ಪವನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ವಿಶೇಷವಾಗಿ ಕೃಷಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ ರಾಜ್ಯದ ಎಲ್ಲ ರೈತಾಪಿ ವರ್ಗದವರನ್ನು ಮಾದರಿ ಕೃಷಿ ರೈತರನ್ನಾಗಿ ಬದಲಿಸಲು ಅವಿರತ ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು.
ಇದರೊಟ್ಟಿಗೆ ಕೃಷಿ ಇಲಾಖೆ ವತಿಯಿಂದ ತಾಲ್ಲೂಕಿನ ರೈತರು ಕೃಷಿ ಯಂತ್ರೋಪಕರಣದ ಖರೀದಿಗೆ ಹಾಗೂ ಸಿರಿಧಾನ್ಯ ಬೆಳೆಗಳಿಗೆ ಸಿಗುವ ಅನುದಾನಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.
ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿಗಳಾದ ಉದಯ್ ಕೆ. ಮಾತನಾಡಿ, ಸಂಸ್ಥೆಯು ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಕೃಷಿ ವಿಭಾಗದಲ್ಲಿ ರೈತರನ್ನು ಮಾದರಿ ಕೃಷಿ ರೈತರನ್ನಾಗಿ ಬದಲಿಸಲು ರಾಷ್ಟ್ರೀಕೃತ ಬ್ಯಾಂಕುಗಳ ಮುಖಾಂತರ ಕನಿಷ್ಟ ರೂ. 10 ಸಾವಿರದಿಂದ ಗರಿಷ್ಟ ರೂ. 3 ಲಕ್ಷದವರಿಗೆ ಪ್ರಗತಿನಿಧಿಯನ್ನು ವಿತರಿಸುವುದರೊಟ್ಟಿಗೆ, ರಾಜ್ಯದ ಪ್ರತಿ ತಾಲ್ಲೂಕಿಗೆ ಪ್ರಸ್ತುತ ವರ್ಷ ರೂ 3.45 ಲಕ್ಷದಷ್ಟು ಅನುದಾನವನ್ನು ಮೀಸಲಿಟ್ಟಿದ್ದು, ಇದರಲ್ಲಿ ತಾಲ್ಲೂಕಿನ ಮಾದರಿ ಕೃಷಿ ರೈತಾಪಿ ವರ್ಗದವರಿಗೆ ಉಪಯುಕ್ತವಾದ ಕೃಷಿ ಪೂರಕ ಚಟುವಟಿಕೆಗಳಾದ ಹೈನುಗಾರಿಕೆ,ಹನಿ ನೀರಾವರಿ, ಮಿನಿ ಡೈರಿ ರಚನೆಗೆ ರೂ. 1 ಲಕ್ಷ ಮೊತ್ತ ಕೃಷಿ ಯಂತ್ರೋಪಕರಣಗಳ ಖರೀದಿಗೆ ರೂ. 50 ಸಾವಿರ, ಸಸಿ ವಿತರಣೆ, ಹೂವಿನ ಕೃಷಿ, ಹಣ್ಣಿನ ಕೃಷಿ ಹಾಗೂ ರೇಷ್ಮೆ ಕೃಷಿಗೆ ರೂ 70 ಸಾವಿರ, ನರ್ಸರಿ ರಚನೆಗೆ ರೂ. 25 ಸಾವಿರ, ಕೃಷಿಹೊಂಡ ರಚನೆಗೆ ರೂ 25 ಸಾವಿರ, ಗೋಬರ್ ಗ್ಯಾಸ್ ಅಳವಡಿಕೆಗೆ ರೂ. 25,000 ಹಾಗೂ ಸಿರಿದಾನ್ಯ ಬೆಳೆಗಳಿಗೆ ರೂ. 50 ಸಾವಿರ ಮೊತ್ತವನ್ನು ವಿತರಿಸಿ ರೈತರ ಬಾಳಿಗೆ ಬೆಳಕಾಗಿ ನಿಲ್ಲಲು ಶ್ರಮಿಸುತ್ತಿದೆ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕಾರದ ಪ್ರಮೋದ್ ಮಾತನಾಡಿ, ಸಂಸ್ಥೆಯು ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕಿನ ಪಾಲುದಾರು ಬಂಧುಗಳು ವಿಶೇಷ ಕೃಷಿಗಳನ್ನು ಅನುಷ್ಟಾನಿಸಿರುವ ರೈತರಿಗೆ ಕನಿಷ್ಟ ರೂ. ಒಂದು ಸಾವಿರ ಮೊತ್ತದಿಂದ ಗರಿಷ್ಟ 5 ಸಾವಿರ ಮೊತ್ತದವರಿಗೆ ಒಟ್ಟು 123 ರೈತರಿಗೆ ರೂ.3.45ಲಕ್ಷ ಮೊತ್ತದ ಅನುದಾನವನ್ನು ರೈತರ ಕೃಷಿ ತಾಕುಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ವಿತರಿಸಲಾಗಿದೆ ಎಂದು ತಿಳಿಸಿದರು. ಬಳಿಕ ಅನುದಾನ ವಿತರಣೆಯ ಮಂಜೂರಾತಿ ಪತ್ರವನ್ನು ತಾಲ್ಲೂಕಿನ ಎಲ್ಲ ಮಾದರಿ ಕೃಷಿ ರೈತಾಪಿ ವರ್ಗದವರಿಗೆ ವಿತರಣೆ ಮಾಡಲಾಯಿತು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx