ಸಂತಕವಿ ಕನಕದಾಸರು ಬದುಕಿದ್ದದ್ದು 450 ವರ್ಷಗಳ ಹಿಂದೆ. ನಮಗೆ ಲಭ್ಯವಿರುವ ಬುದ್ಧಗುರು, ಬಸವಣ್ಣ, ಅಶೋಕ, ವಾಲ್ಮೀಕಿ ಮುಂತಾದ ಶ್ರೇಷ್ಠ ವ್ಯಕ್ತಿಗಳ ಚಿತ್ರಪಟಗಳೆಲ್ಲವೂ ಕಲಾವಿದರ ಕಲ್ಪನಾ ಪ್ರತಿಭಾವಿಲಾಸದಿಂದ ಚಿತ್ರಿಸಲಾದ ಚಿತ್ರಪಟಗಳೇ ಆಗಿವೆ.
ಇಲ್ಲಿರುವ ಎರಡೂ ಚಿತ್ರಗಳನ್ನು ನೋಡಿದ ಬಳಿಕ ಪ್ರಶ್ನೆ ಏನೆಂದರೆ ಕನಕದಾಸರು ನುಡಿಸುತ್ತಿದ್ದದ್ದು ನಾಗ ತಂಬೂರಿಯೋ ಅಥವಾ ಏಕತಾರಿ ತಂಬೂರಿಯೋ? ಕನಕ ದಾಸರು ಹಣೆಗೆ ಧರಿಸುತ್ತಿದ್ದ ನಾಮವು ವೈಷ್ಣವರ ಗೂಟನಾಮವೋ ಶೈವದ ವಿಭೂತಿ ಭಸಿತವೋ (ಕುರುಬರು ಶೈವಾರಾಧಕರು)? ಹೆಗಲ ಮೇಲೆ ಧರಿಸುತ್ತಿದ್ದದ್ದು ಕೆಂಪು ಅಥವಾ ವಸ್ತ್ರವೋ (ಅಥವಾ ನಾನು ಧರಿಸುವಂತಹ ಗಿಣಿಗೊಂಡೆ ಚೌಕಳಿಯ ಕೆಂಪು ಗಿಣಿವಸ್ತ್ರವಂತೂ ಅಲ್ಲ ತಾನೆ?) ಅಥವಾ ಕುರಿ ಉಣ್ಣೆಯ ಕರಿಜಾಡಿಯೋ?!
ಕಲಾವಿದರು ರೂಪಿಸಿರುವ ಈ ಚಿತ್ರಗಳಲ್ಲಿರುವ ಉಳಿದ ವ್ಯತ್ಯಾಸಗಳನ್ನು ಗುರುತಿಸಿರಿ. ಮೊದಲ ಚಿತ್ರದ ಕಲಾವಿದನ ಕಲ್ಪನಾ ವಿಲಾಸದಲ್ಲಿ ಅವನ ಕೇಸರಿ ರಾಜಕಾರಣದ ಇಂಗಿತ ಆಶಯಕ್ಕೆ ತಕ್ಕನಾಗಿ ಕನಕದಾಸರ ಹೆಗಲ ಮೇಲೆ ಕೇಸರಿ ವಸ್ತ್ರವನ್ನು ಹಾಕಿದ್ದಾನೆ. ಆದರೆ ಮೈಮೇಲೆ ತೂಗುವಂತೆ ನೂಲುವಾರ ಹಾಕಿ ಚಿತ್ರವನ್ನು ರಚಿಸುವುದನ್ನೇಕೋ ಅವನು ಮರೆತುಬಿಟ್ಟಿದ್ದಾನೆ. ಈ ಕಲಾವಿದನು ಇನ್ನೂ ಮರೆತಿರಬಹುದಾದ ತುಳಸಿಮಾಲೆ, ಪಂಚಪಾತ್ರೆ, ಉದ್ಧರಣೆ, ಕಮಂಡಲ ಮುಂತಾದ ವೈದಿಕಾರ್ಯರ ಲಾಂಛನಗಳನ್ನು ಕನಕದಾಸರ ಕಲಾಚಿತ್ರಕ್ಕೆ ಅಲಂಕರಿಸಿ ಅಲಂಕರಿಸಿ ಪ್ರಸಾರ ಮಾಡಲೂಬಹುದು. ಆಗ ಕೇಸರಿ ರಾಜಕಾರಣಕ್ಕೆ ತಕ್ಕನಾಗಿ ಕನಕದಾಸರು ಹುಟ್ಟಿದ್ದು ಬ್ರಾಹ್ಮಣರ ಮನೆಯಲ್ಲಿ, ಆದರೆ ಬೆಳೆದದ್ದು ಮಾತ್ರ ಕುರುಬರ ರೊಪ್ಪದಲ್ಲಿ ಎಂದು ಕಾಲ್ಪನಿಕ ಕಥೆ ಹೊಸೆದು ಮೆರವಣಿಗೆ ಉರವಣಿಗೆಗಳು ನಡೆಸಲು ಅನುಕೂಲವಾಗುತ್ತದೆ.
ಇಲ್ಲಿಯವರೆಗೆ ನಮ್ಮ ತಳಾದಿ ಸಾಂಸ್ಕೃತಿಕ ನಾಯಕರು ಹೈಜಾಕ್ ಆಗಿರುವುದು ಹೀಗೆಯೇ ತಾನೆ? ಹಾಗಾಗದಿರಲೆಂಬ ಮುನ್ನೆಚ್ಚರಿಕೆಯಿಂದ ನಿಮ್ಮೆಲ್ಲರ ಅವಗಾಹನೆಗಾಗಿ ಈ ಎರಡು ಚಿತ್ರಗಳನ್ನು ನಿಮ್ಮೆದುರು ಇರಿಸಿದ್ದೇನೆ.
ಡಾ.ವಡ್ಡಗೆರೆ ನಾಗರಾಜಯ್ಯ
8722724174