ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ನಿರ್ವಾಣ ಹೊಂದಿ ಇವತ್ತಿಗೆ ಮೂರು ವರ್ಷಗಳು ತುಂಬಿದವು. ಮೂರು ವರ್ಷಗಳ ಹಿಂದೆ ಅವರು ನಿರ್ವಾಣ ಹೊಂದಿದ ದಿನದಂದು ನಾನು ಬರೆದಿದ್ದ ಹಳೆಯ ಲೇಖನವನ್ನು ಮತ್ತೊಮ್ಮೆ ಹಂಚಿಕೊಳ್ಳುತ್ತಿದ್ದೇನೆ.
ನಾನು ತುಮಕೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯದ ವಿದ್ಯಾರ್ಥಿಯಾಗಿ ಬಿಎ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ದಿನಗಳು. ಸಿದ್ಧಗಂಗಾ ಮಠದಲ್ಲಿ ಆಗಾಗ ನಡೆಯುತ್ತಿದ್ದ ಶಿವಾನುಭವ ಗೋಷ್ಠಿಗಳಲ್ಲಿ ಪಾಲ್ಗೊಂಡು ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ತುಂಬಾ ಹತ್ತಿರದಿಂದ ಕಂಡುಂಡ ಕೆಲವು ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿಚ್ಚಿಸುತ್ತೇನೆ.
ಶ್ರೀಮಠದ ಹಳೆಯ ಕಲ್ಯಾಣಿ ದಂಡೆಯ ರೂಮಿನಲ್ಲಿ ನನ್ನ ಆತ್ಮೀಯ ಗೆಳೆಯರಾದ ಎಚ್.ಎನ್.ವೆಂಕಟೇಶ್, ಡಿಸ್ಕೋ ಮಲ್ಲಿಕಾರ್ಜುನ, ಶಂಭುಲಿಂಗಯ್ಯ, ಶಿವಶಂಕರ್, ಶಾಂತರಾಜು ಮುಂತಾದ ಮಠದ ವಿದ್ಯಾರ್ಥಿಗಳ ಸಹವಾಸದಿಂದಾಗಿ ನನಗೂ ಶ್ರೀಮಠಕ್ಕೂ ತುಂಬಾ ನಿಕಟ ಬಾಂಧವ್ಯ ಏರ್ಪಟ್ಟಿತು. ಸರ್ಕಾರಿ ಕಲಾ ಕಾಲೇಜಿನ, ಬೆಂಗಳೂರು ಗೇಟಿನ ಸೆಕೆಂಡ್ ಹಾಸ್ಟೆಲಿನಲ್ಲಿ ನಿಲಯಾರ್ಥಿಯಾಗಿದ್ದ ನಾನು, ದಲಿತ ವಿದ್ಯಾರ್ಥಿ ಒಕ್ಕೂಟದ ನಾಯಕನಾಗಿದ್ದೆ. ನಮಗಾಗ ಬೇಸಿಗೆ ರಜೆ ಬಂತೆಂದರೆ ಹಾಸ್ಟೆಲ್ ನಿಲ್ಲಿಸಿಬಿಡುತ್ತಿದ್ದರು. ಹಾಸ್ಟೆಲ್ ನಿಲ್ಲಿಸಿದರೆಂದರೆ ನಿಲಯಾರ್ಥಿಗಳಿಗೆ ಊಟವಿರುತ್ತಿರಲಿಲ್ಲ. ಹಾಸ್ಟೆಲ್ನ ಎಲ್ಲಾ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ಮರಳಿ ಹೋಗಿ ರಜಾ ಕಳೆಯುತ್ತಿದ್ದರು. ನಾನು ಮಾತ್ರ ಊರಿಗೆ ಹೋಗದೆ ಮಠಕ್ಕೆ ಹೋಗಿ ಮಠದ ಗೆಳೆಯರೊಂದಿಗೆ ಮಠದ ಊಟ ಮಾಡುತ್ತಾ ಅಲ್ಲಿಯೇ ಇದ್ದುಬಿಡುತ್ತಿದ್ದೆ. ನೊಸಲಿಗೆ ವಿಭೂತಿ ಭಸಿತ ಬಳಿದುಕೊಂಡು ಕೊರಳಿಗೆ ರುದ್ರಾಕ್ಷಿ ಧರಿಸಿ ಬೆಳಗಿನ ಪ್ರಾರ್ಥನೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ.
ಶ್ರೀ ಶಿವಕುಮಾರ ಸ್ವಾಮೀಜಿಯವರು ನಮಗೆ ನಿತ್ಯವೂ ವಚನ ವ್ಯಾಖ್ಯಾನ, ಆಂಗ್ಲಭಾಷೆಯ ವ್ಯಾಕರಣ, ಸಂಸ್ಕೃತ ಪ್ರಾರ್ಥನೆ, ಹಳಗನ್ನಡ ಸಾಹಿತ್ಯ ಹೇಳಿಕೊಡುತ್ತಿದ್ದರು. ಜೋಸೆಫ್ ಮ್ಯಾಜಿನಿ, ಅಲ್ಬರ್ಟ್ ಐನ್ಸ್ ಟೈನ್, ಷೇಕ್ಸ್ ಪಿಯರ್, ನ್ಯೂಟನ್ ಮುಂತಾದವರ ಬಗ್ಗೆ ನಮಗೆ ತಿಳಿಸಿಕೊಡುತ್ತಿದ್ದರು. ಹಳೆಮಠದ ಅಡುಗೆ ಶಾಲೆಗೆ ಬಂದು ಅಡುಗೆ ದಾಸ್ತಾನುಗಳನ್ನು ಪರಿಶೀಲಿಸುತ್ತಿದ್ದ ಸ್ವಾಮೀಜಿ ಮಕ್ಕಳಿಗೆ ಕೊಡುವ ಊಟದ ಬಗ್ಗೆ ತುಂಬಾ ಕಾಳಜಿವಹಿಸುತ್ತಿದ್ದರು.
ಅವರು ಯಾವಾಗಲೂ ಲಗುಬುಗೆಯಾಗಿ ಮಠದ ಎಲ್ಲಾ ಕಡೆಗೂ ಓಡಾಡುತ್ತಿದ್ದರು.
ಶಿವಾನುಭವ ಗೋಷ್ಠಿಗಳಲ್ಲಿ ಮತ್ತು ವಚನ ವ್ಯಾಖ್ಯಾನದ ಸಂದರ್ಭಗಳಲ್ಲಿ ನಾನು ಕುತೂಹಲದಿಂದ ಕೇಳುತ್ತಿದ್ದ ಕೆಲವು ಪ್ರಶ್ನೆಗಳಿಂದಾಗಿ ಸ್ವಾಮೀಜಿಯವರು ನನ್ನನ್ನು ಹೆಸರನ್ನಿಡಿದು ಮಾತಾಡಿಸಿದ್ದ ಗಳಿಗೆಗಳನ್ನು ನಾನು ಮರೆಯಲಾರೆ.
ಆಯಾ ಹಬ್ಬಕ್ಕೆ ತಕ್ಕ ತಿನಿಸುಗಳನ್ನು ಮಠದ ವಿದ್ಯಾರ್ಥಿಗಳಿಗೆ ಅಟ್ಟುಣ್ಣುವ ವ್ಯವಸ್ಥೆ ಕಲ್ಪಿಸಿದ್ದರು ಸ್ವಾಮೀಜಿ.
ಮಠದ ವಿದ್ಯಾರ್ಥಿಗಳಲ್ಲಿದ್ದ ಶ್ರದ್ಧೆಯನ್ನು ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳಲ್ಲೂ ಇರಬೇಕೆಂದು ನಮ್ಮ ಆಗಿನ ದಲಿತ ನಾಯಕರು ನಮ್ಮಿಂದ ನಿರೀಕ್ಷಿಸುತ್ತಿದ್ದರು. ಅಷ್ಟರಮಟ್ಟಿಗೆ ಮಠದ ವಿದ್ಯಾರ್ಥಿಗಳಲ್ಲಿ ಶ್ರದ್ಧೆಯನ್ನು ಶಿವಕುಮಾರಸ್ವಾಮೀಜಿ ನೆಲೆಗೊಳಿಸಿದ್ದರು.
ಶಿವಕುಮಾರ ಸ್ವಾಮೀಜಿಯವರನ್ನು ನಾನು ಮೊದಲಿಗೆ ನೋಡಿದ್ದು ವಡ್ಡಗೆರೆಯ ನಮ್ಮ ಶಾಲಾ ವಾರ್ಷಿಕೋತ್ಸವಕ್ಕೆ 1979 ರಲ್ಲಿ ಅವರು ಬಂದಿದ್ದಾಗ. ನಮ್ಮ ಹೆಡ್ ಮಾಸ್ಟರ್ ಆಗಿದ್ದ ಜಿ.ಎಂ.ಕರಿಯಣ್ಣ ಸ್ವಾಮೀಜಿಯವರನ್ನು ನಮ್ಮ ಶಾಲೆಗೆ ಕರೆಸಿಕೊಂಡಿದ್ದರು. ಆಗಲೇ ಶಿವಕುಮಾರ ಸ್ವಾಮೀಜಿಯವರ ಕಡೆಗೆ ನನಗೆ ವಿಶೇಷ ಆಕರ್ಷಣೆಯುಂಟಾಗಿತ್ತು. ಸ್ವಾಮೀಜಿಯವರು ಜೋಳಿಗೆ ಜಂಗಮನಾಗಿ ಅಕ್ಷರಶಃ ಕಂತೆಭಿಕ್ಷೆ ಬೇಡಿ ಕಟ್ಟಿದ ಮಠ ಸಿದ್ಧಗಂಗಾ ಮಠ.
ಅಟವಿ ಸಿದ್ಧಲಿಂಗ ಶಿವಯೋಗಿಗಳು ಪ್ರಾರಂಭಿಸಿದ ಅನ್ನ ದಾಸೋಹವನ್ನು ಬಿಡದೆ ಪಾಲಿಸಿದ ಸ್ವಾಮೀಜಿ, ಮಠದ ಒಲೆಯ ಬೆಂಕಿ ಎಂದಿಗೂ ಆರದಂತೆ ನೋಡಿಕೊಂಡರು. “ಶಿವಗಂಗೆ ನೋಟಕ್ಕೆ ಚೆಂದ – ಸಿದ್ಧಗಂಗೆ ಊಟಕ್ಕೆ ಚೆಂದ” ಎಂಬುದು ನಮ್ಮ ಸೀಮೆಯ ಪ್ರಖ್ಯಾತ ನಾಣ್ಣುಡಿ.
ಉದ್ದಾನ ಶಿವಯೋಗಿಗಳು ಪ್ರಾರಂಭಿಸಿದ ಸಂಸ್ಕೃತ ಪಾಠಶಾಲೆಯನ್ನು ಬಲವರ್ಧನೆಗೊಳಿಸಿದ ಶಿವಕುಮಾರ ಸ್ವಾಮೀಜಿಯವರು, ಮಠವನ್ನು ಒಂದರ್ಥದಲ್ಲಿ ಜನಸಂಘದ ಕೇಂದ್ರವನ್ನಾಗಿಸಿಬಿಟ್ಟಿದ್ದರು. ಬಿಜೆಪಿಗೆ ಬಲ ಒದಗಿಸಿದ ಪಾಲು ಈ ಮಠದ್ದೇ ಅಧಿಕವೆನ್ನಬೇಕು. ಅಷ್ಟರಮಟ್ಟಿಗೆ ಮಠದವರು ಬಲಪಂಥೀಯ ಚಿಂತನೆಗಳನ್ನು ಬಿತ್ತಿದ್ದೂ ಉಂಟು. ವಿ.ಪಿ.ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸಬೇಕೆಂದು ಜಾರಿಗೊಳಿಸಲು ಪ್ರಯತ್ನಿಸಿದ ಮಂಡಲ್ ವರದಿ ಶಿಫಾರಸ್ಸಿಗೆ ಪ್ರಬಲ ಪ್ರತಿರೋಧ ಒಡ್ಡಿದ್ದು ಸಿದ್ಧಗಂಗಾ ಮಠ. ಆಗ ಮಠದ ನನ್ನ ಗೆಳೆಯರ ಮಧ್ಯಸ್ಥಿಕೆಯ ಮೂಲಕ, ಸಂಭವಿಸಲಿದ್ದ ಅವಘಡಗಳನ್ನು ನಾವು ಕೆಲವು ದಲಿತ ವಿದ್ಯಾರ್ಥಿಗಳು ತಪ್ಪಿಸಿದೆವೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ರಾಮ ಮಂದಿರ ನಿರ್ಮಾಣವಾಗಬೇಕೆಂಬ ಪವಿತ್ರ ಇಟ್ಟಿಗೆ ರಥಯಾತ್ರೆಯನ್ನು ಬೆಂಬಲಿಸಿದ ಮಠದ ಪಕ್ಷಪಾತಿತನವನ್ನು ಮರೆಯಲಾದೀತೇ?!
ಕರ್ನಾಟಕದ ಬೇರೆ ಬಹುಪಾಲು ಮಠಗಳು ಸಿಲುಕಿದಂತಹ ಗಂಭೀರ ವಿವಾದಗಳಿಗೆ, ಕೋಮುವಾದಿತ್ವಕ್ಕೆ ಮತ್ತು ಭ್ರಷ್ಠಾಚಾರಕ್ಕೆ ಮಠವನ್ನು ಬಲಿಯಾಗದಂತೆ ನೋಡಿಕೊಳ್ಳಲು ಎಚ್ಚರವಹಿಸಿ ಮಠವನ್ನು ಮಹಾ ಕಳಂಕಗಳಿಂದ ಶಿವಕುಮಾರ ಸ್ವಾಮೀಜಿಯವರು ಪಾರುಮಾಡಿದ್ದನ್ನು ಮಾತ್ರ ಮೆಚ್ಚಬೇಕು. ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ಸ್ವಾಮೀಜಿಯವರು ಪಾಲ್ಗೊಂಡದ್ದನ್ನು ವಿರೋಧಿಸಿ ನಾನು ಪತ್ರಿಕೆಗಳಿಗೆ ಬರೆದಾಗ ಕೆಲವು ಮತೀಯವಾದಿಗಳು ನನಗೆ ಬೆದರಿಕೆ ಹಾಕಿದರು. ಸ್ವಾಮೀಜಿಯವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಬಂದಾಗ ಮಠದೊಂದಿಗೆ ನನ್ನ ಸಂಬಂಧವಿದ್ದ ನೆನಪುಗಳನ್ನು ಹಂಚಿಕೊಂಡು ಪತ್ರಿಕೆಗಳಿಗೆ ಬರೆದಾಗ ಪ್ರಗತಿಪರ ಗೆಳೆಯರು ನನ್ನ ಬದ್ಧತೆಯನ್ನು ಪ್ರಶ್ನಿಸಿ ಆಕ್ಷೇಪಿಸಿದರು.
ಆದರೆ ಮಠದ ಉಪ್ಪು ತಿಂದು ಉಸಿರಾಡಿದ ನನಗೆ ಶ್ರೀ ಶಿವಕುಮಾರ ಸ್ವಾಮೀಜಿಯವರು ಆರದ ರಾಗದೀಪವಾಗಿ ನನ್ನೊಳಗೆ ಬೆಳಗುತ್ತಿರುತ್ತಾರೆ. ಮಹಾ ಚೇತನಕ್ಕೆ ಶರಣು ಶರಣಾರ್ಥಿಗಳು.
ಡಾ.ವಡ್ಡಗೆರೆ ನಾಗರಾಜಯ್ಯ
8722724174
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy