ತುಮಕೂರು: ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಇಂಜಿನಿಯರ್ಸ್ ದಿನ’ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಸ್ ಎಸ್ ಐಟಿ ಕ್ಯಾಂಪಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಲ್ ಎಮ್ ವಿಂಡ್ ಪವರ್ ನ ಹಿರಿಯ ಸ್ಥಾವರ ನಿರ್ದೇಶಕ ರಾಜೇಶ್ ಲೋಬೊ ಮಾತನಾಡಿ, ‘ಶಿಕ್ಷಕರ ದಿನಾಚರಣೆ ಜೊತೆಗೆ ಇಂಜಿನಿಯರ್ಸ್ ದಿನವನ್ನುಆಚರಿಸುತ್ತಿರುವುದು ಖುಷಿಯ ಸಂಗತಿ. ವಿದ್ಯಾದಾನದ ಮೂಲಕ ದೇಶಕ್ಕೆ ನಿಜವಾದ ಸೇವೆಯನ್ನು ಸಲ್ಲಿಸುತ್ತಿರುವ ಶಿಕ್ಷಕರ ದಿನವನ್ನು ದಿನಕ್ಕೆ ಮಾತ್ರ ಸೀಮಿತವಲ್ಲದೆ ಪ್ರತಿದಿನವು ಶಿಕ್ಷಕರ ದಿನವೆಂದು ಭಾವಿಸಬೇಕು ಎಂದರು.
ವಿಶ್ವೇಶ್ವರಯ್ಯನವರ ಇಂಜಿನಿಯರ್ ಆಗಿ ನಾಡಿಗೆ ಕೊಟ್ಟ ಕೊಡುಗೆ ಅಪಾರ. ಕೆಆರ್‌ಎಸ್ ಅಣೆಕಟ್ಟು ಕಟ್ಟುವುದರ ಮೂಲಕ ಲಕ್ಷಾಂತರ ಜನರ ಬದುಕಿಗೆ ಬೆಳಕಾಗಿದ್ದಾರೆ. ಇಂತಹ ಮಹನೀಯ ರೀತಿಯಲ್ಲಿ ನಮ್ಮ ನಾಡಿಗೆ ನಾವು ಕೊಡುಗೆ ನೀಡುವ ಕೆಲಸ ನಿರ್ವಹಿಸಬೇಕಿದೆ ಎಂದು ರಾಜೇಶ್ ಲೋಬೊ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಮಾತನಾಡಿದ ಸಾಹೇ ಉಪಕುಲಪತಿ ಡಾ.ಕೆ.ಬಿ ಲಿಂಗೇಗೌಡ ಅವರು, ಶಿಕ್ಷಕ ವೃತ್ತಿ ಎಂಬುದು ಮೌಲ್ಯಯುತವಾದುದ್ದು, ಮುಂದಿನ ದಿನಗಳಲ್ಲಿ ಅದರ ಮಹತ್ವ ಇನ್ನು ಹೆಚ್ಚಾಗಲಿದೆ. ಸಮಾಜದಲ್ಲಿ ಶಿಕ್ಷಕರನ್ನು ಉತ್ತಮ ವ್ಯಕ್ತಿಗಳಾಗಿ ಗುರುತಿಸುತ್ತೇವೆ. ಹಾಗೇಯೇ ಇಂಜಿನಿಯರ್ಸ್ ದಿನದದಂದು ವಿಶ್ವೇಶ್ವೇರಯ್ಯನವರನ್ನು ನೆನಪುಮಾಡಿಕೊಳ್ಳಬೇಕು. ಅವರ ಕೊಡುಗೆ ನಮ್ಮ ನಾಡಿಗೆ ಅಪಾರವಾದದ್ದು ಎಂದು ನುಡಿದರು.
ಇನ್ನೋರ್ವ ಅತಿಥಿಯಾದ ಶಿಕ್ಷಕ ಟಿ.ಎಸ್.ರವಿಶಂಕರ್ ಮಾತನಾಡಿ, ಸರ್ವಪಲ್ಲಿ ರಾಧಕೃಷ್ಣನ್ ಮತ್ತು ವಿಶ್ವೇಶ್ವರಯ್ಯ ಅವರಂತ ಮೇಧಾವಿಗಳ ಸ್ಮರಿಸುವುದು ಇಂದಿನ ಅಗತ್ಯವಾಗಿದೆ. ಶಿಕ್ಷಕರು ಹೆಚ್ಚು ಬುದ್ಧಿಶಕ್ತಿಯನ್ನು ಹೆಚ್ಚು ಬಳಸಿದರೆ ಇನ್ನುಷ್ಟು ಸಂಶೋಧನೆಗಳು ಆಗಬಹುದು. ತಂತ್ರಜ್ಞಾನದ ಜೊತೆಗೆ ಜಗತ್ತು ಕೂಡ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿದೆ. ಹಾಗಾಗಿ ಮಕ್ಕಳಿಗೆ ಹೊಸ ಹೊಸ ವಿಷಯವನ್ನು ತಿಳಿಸುವುದು ಸೂಕ್ತ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಐಎಸ್ ಟಿಇ ವಿಭಾಗದ ವತಿಯಿಂದ ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಪ್ರಾಧ್ಯಾಪಕರಾದ ಪ್ರೊ. ಸುನಿಲ್ ಮತ್ತು ಪ್ರೊ. ಜಯಪ್ರಕಾಶ್ ಅವರನ್ನು ಗುರುತಿಸಿ `ಉತ್ತಮ ಶಿಕ್ಷಕ’ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಶ್ರೀ ಸಿದ್ಧಾರ್ಥ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಮ್. ಎಸ್ ರವಿಪ್ರಕಾಶ್ ಮಾತನಾಡಿದರು. ಸಾಹೇ ವಿವಿ ರಿಜಿಸ್ಟ್ರಾರ್ ಡಾ.ಎಂ.ಝಡ್. ಕುರಿಯನ್, ಡೀನ್ ಡಾ.ರೇಣುಕಲತಾ ಎಸ್, ಐಎಸ್ ಟಿಇ ವಿಭಾಗದ ಕಾರ್ಯದರ್ಶಿ ಡಾ.ಪುನಿತ್ ಕುಮಾರ್, ಖಚಾಂಚಿ ಡಾ. ಶೋಭ ಸೇರಿದಂತೆ ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಕಿ ಡಾ. ರಶ್ಮಿ ಎಚ್ ಸಿ ಕಾರ್ಯಕ್ರಮ ನಿರೂಪಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q