ಲೇಖನ : ಜೆ ರಂಗನಾಥ ತುಮಕೂರು
ನಿಡಗಲ್ ದುರ್ಗ ತುಮಕೂರು ಜಿಲ್ಲೆ, ಪಾವಗಡ ತಾಲೂಕಿನ ,ಐತಿಹಾಸಿಕ ತಾಣ ಇದನ್ನ “ದಕ್ಷಿಣದ ಹಂಪಿ” ಎಂದೆಲ್ಲ ಕರೆಯುತ್ತಾರೆ.
ಈ ಕ್ಷೇತ್ರಕ್ಕೆ ನೀಲಾಂಜನಗಿರಿ ,ನೀಲಾವತಿ, ಕಾಳಂಜನ ಗಿರಿ ಹಾಗೂ ಕಾಳಂಜನ ದುರ್ಗಕರೆಯುತ್ತಿದ್ದರು. ಐತಿಹಾಸಿಕ ನಿಡಗಲ್ ಬೆಟ್ಟ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ಹಲವು ರಾಜ ಮನೆತನಗಳ ರಾಜಧಾನಿಯಾಗಿ ಮೆರೆದು ಇಂದು ಹಾಳು ಕೊಂಪೆಯಾಗಿದೆ.
ಸಮುದ್ರಮಟ್ಟದಿಂದ 2,669 ಆಡಿಗಳು,(1149 ಮೀಟರ್ ಗಳು) ಎತ್ತರದಲ್ಲಿರುವ ಈ ಪ್ರದೇಶವನ್ನು ನೊಳಂಬರು, ಚೋಳರು, ಚಾಲುಕ್ಯರು, ವಿಜಯನಗರ ಅರಸರು, ಹೊಯ್ಸಳರು, ಹೈದರಾಲಿ –ಟಿಪ್ಪು ಸುಲ್ತಾನ್, ಹರತಿ — ನಿಡಗಲ್ ಪಾಳೆಗಾರರು ,ಆಳ್ವಿಕೆ ನಡೆಸಿದ್ದಾರೆ. ಇವರು ಹಲವಾರು ದೇಗುಲಗಳು, ಕೋಟಿ ಕೊತ್ತಲುಗಳು, ಕಲ್ಯಾಣಿ ಗಳನ್ನು ಕೊಟ್ಟು ಪಾವನರಾಗಿದ್ದಾರೆ.
ನಿಡುಗಲ್ಲು ಬೆಟ್ಟ ನಿಡಿದಾದ ಕೊಡುಗಲ್ಲಿನಂತೆ ಚೂಪಾಗಿರುವ ಈ ಬೆಟ್ಟ ಬಿಸಿಲಿನಲ್ಲಿ ಮಿಂಚುತ್ತಿರುತ್ತದೆ. ಸುತ್ತಲು ಆಚ್ಚಹಸಿರು, ಗಿರಿ ಕಂದರಗಳು, ಪಾಳು ಬಿದ್ದ ದೇಗುಲಗಳು ,ಕೋಟೆ ಕೊತ್ತಲುಗಳು, ಮಾಸ್ತಿ ಗಲ್ಲುಗಳು ,ವೀರಗಲ್ಲುಗಳು , ನಿಷದಿ ಕಲ್ಲುಗಳು, ಫಿರಂಗಿಗಳು, ಕಲ್ಯಾಣಿಗಳು ಶಾಸನಗಳಿದ್ದು ಇವು ಇತಿಹಾಸವನ್ನೇ ಹೇಳುತ್ತವೆ. ಇದೊಂದು ತುಮಕೂರು ಜಿಲ್ಲೆಯಲ್ಲಿರುವ ದಕ್ಷಿಣದ ಹಂಪಿಯಾಗಿದೆ.
ಇಲ್ಲಿನ ಶ್ರೀ ಕಷ್ಟ ಹರಣ ಪಾರ್ಶ್ವನಾಥ ಬಸದಿ ಪುರಾತನವಾದದ್ದು , ನೆಲಮಟ್ಟದಿಂದ 10 ಅಡಿಗಳ ಎತ್ತರದ ಬೆಟ್ಟದ ಮೇಲೆ ಮೂರು ಅಡಿಗಳ ಎತ್ತರದ ಜಕತಿಯ ಮೇಲೆ ನಿರ್ಮಿಸಲಾಗಿದೆ. ಎರಡು ಗರ್ಭಗುಡಿಗಳಿಂದ ನಿರ್ಮಾಣವಾಗಿರುವ ಈ ಬಸದಿ ಸುಖನಾಸಿ, ನವರಂಗಗಳನ್ನ ಹೊಂದಿದೆ ಪ್ರಧಾನ ಬಿಂಬ ಶ್ರೀ ಕಷ್ಟ ಹರಣ ಪಾರ್ಶ್ವನಾಥ ವಿಗ್ರಹ ಸುಮಾರು ಐದು ಅಡಿಗಳ ಎತ್ತರವಿದ್ದು, ಇದನ್ನ ಪುನರ್ ಪ್ರತಿಷ್ಠಾಪಿಸಲಾಗಿದೆ ಹಾಗೂ ಮತ್ತೊಂದು ಗರ್ಭಗುಡಿಯಲ್ಲಿ ಶ್ರೀ ಪದ್ಮಾವತಿ ಅಮ್ಮನವರ ನೂತನ ಬಿಂಬವನ್ನ ಪ್ರತಿಷ್ಠಾಪನೆ ಮಾಡಲಾಗಿದೆ.
ಪ್ರಾಚೀನ ಶ್ರೀ ಪಾರ್ಶ್ವನಾಥ ಸ್ವಾಮಿ ವಿಗ್ರಹ 7 ಎಡೆ ಸರ್ಪ ಗಳಿಂದ ಕೂಡಿದ್ದು, ಕರಿ ಕಲ್ಲಿನ ಮೂರ್ತಿ ಮನಮೋಹಕವಾಗಿದೆ .ಬಸದಿಯ ಮುಂಭಾಗ ಸುಮಾರು 30 ಅಡಿ ಎತ್ತರದ ಮಾನಸ್ತಂಭ ವಿದೆ ಅದರ ಮೇಲೆ ಚತುರ್ಮುಖ ಬಿಂಬಗಳಿವೆ.
ಚೋಳರ ದೊರೆ ಇಮ್ಮಡಿ ಈರಂಗೋಳನ ಕಾಲದಲ್ಲಿ ಗಂಗಯ್ಯ, ಮಾರಯ್ಯ ಹಾಗೂ ಬಚ್ಚಲದೇವಿ ತಮ್ಮ ಗುರುಗಳಾದ ಶ್ರೀ ನೇಮೀನಾಥ ಪಂಡಿತರ ಸಲಹೆಯಂತೆ ಕ್ರಿಸ್ತ.ಶಕ 1232 ರಲ್ಲಿ ಈ ಜೈನ ಬಸದಿ ನಿರ್ಮಾಣ ಮಾಡಿದರೆoದು ಶಾಸನಗಳಲ್ಲಿ ಉಲ್ಲೇಖವಿದೆ .ಇದನ್ನು ಜೋಗ ವಟ್ಟಿಗೆಯ ಬಸದಿ, ಶ್ರೀ ಪಾರ್ಶ್ವನಾಥ ಬಸದಿ, ಶ್ರೀ ಕಷ್ಟಹರಣ ಪಾರ್ಶ್ವನಾಥ ಬಸದಿ ಎಂದೆಲ್ಲ ಕರೆಯುತ್ತಾರೆ.
ನಿಡಗಲ್ ಬೆಟ್ಟದ ಶ್ರೀ ಕಷ್ಟಹರಣ ಪಾರ್ಶ್ವನಾಥ ಜೈನಬಸದಿ ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಆಡಳಿತ ವ್ಯಾಪ್ತಿಗೆ ಸೇರಿದೆ.
ಈ ಪುರಾತನ ಜೈನ ಬಸದಿ ರಾಜರ ಆಳ್ವಿಕೆ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು .ತದನಂತರ ಹಾಳು ಕೊಂಪೆಯಾಗಿ ಶಿಥಿಲವಸ್ತೆ ತಲುಪಿದೆ. ಈ ಭಾಗದ ಶ್ರಾವಕರೆಲ್ಲ ಊರು ತೊರೆದು ಬೇರೆಡೆಗೆ ಹೋಗಿ ನೆಲೆಸಿದ್ದಾರೆ. ಕೆಲ ದಶಕಗಳ ಹಿಂದೆ ಜೈನಮುನಿ ಬೆಳಗಾವಿ ಜಿಲ್ಲೆ ಶಮನೇವಾಡ ದ ಮುನಿಶ್ರೀ ಧರ್ಮ ಭೂಷಣ ಮಹಾರಾಜರು 1986 ರಲ್ಲಿ ವಿಹಾರ ಅರ್ಥವಾಗಿ ಈ ಭಾಗದಲ್ಲಿ ಸಂಚರಿಸುವಾಗ ಇಲ್ಲಿ ಜೈನ ಬಸದಿ ಇರುವ ವಿಷಯ ತಿಳಿದು ಈ ಬಸದಿಗೆ ಕಾಯಕಲ್ಪ ನೀಡಲು ಶ್ರಮಿಸಿದರು.
1998ರಲ್ಲಿ ಮಾತೆ ಶ್ರೀ ಕಾಂಚನಮತಿ ಮಾತಾಜಿಯವರು ಈ ಬಸದಿಯ ದರ್ಶನ ಪಡೆದು ಮುನಿಶ್ರೀ ವಿಮಲಸಾಗರ ಮಹಾರಾಜರ ಆಶಯದಂತೆ ಈ ಜೈನ ಬಸದಿಗೆ ಶ್ರೀ ಕಷ್ಟ ಹರಣ ಪಾರ್ಶ್ವನಾಥ ಬಸದಿ ಎಂದು ನಾಮಕರಣ ಮಾಡಿದರು.
2009ರಲ್ಲಿ ಶ್ರೀ ಕ್ಷೇತ್ರ ಹೊಂಬುಜ ಜೈನಮಠದ ಸ್ವಸ್ತಿ ಶ್ರೀ ದೇವೇಂದ್ರ ಕೀರ್ತಿ ಭಟ್ಟರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಶ್ರೀ ಮಾತೆ ಪದ್ಮಾವತಿ ಅಮ್ಮನವರನ್ನು ಪ್ರತಿಷ್ಠಾಪಿಸಿದರು. ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಪೀಠಾಧ್ಯಕ್ಷರಾದ ಸ್ವಸ್ತಿ ಶ್ರೀ ಲಕ್ಷ್ಮೀಸೇನಾ ಭಟ್ಟರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಮೂರ್ತಿಗೆ ವಜ್ರ ಲೇಪನ ಮುಖವಾಡ ರಚಿಸಿ ಕೊಟ್ಟರು ಹಾಗೂ ಪಂಚಕಲ್ಯಾಣ ನೆರವೇರಿಸಿದರು.
ಇಲ್ಲಿ ಶ್ರೀ ಪಾರ್ಶ್ವನಾಥರ 5 ಅಡಿಯ ಖಡ್ಗಾಸನ ಮೂರ್ತಿ ಇದೆ .ಶ್ರೀ ಕ್ಷೇತ್ರ ನಿಡಗಲ್ ಬೆಟ್ಟದ ಶ್ರೀ ಕಷ್ಟಹರಣ ಪಾರ್ಶ್ವನಾಥ ಜೈನ ಬಸದಿಗೆ ಹಲವಾರು ಸಾಹಿತಿಗಳು, ಸಂಶೋಧಕರು , ಧರ್ಮಾಧಿಕಾರಿಗಳು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಹೊಸ ಬೆಳಕು ಚೆಲ್ಲಿದ್ದಾರೆ. ಈ ಪುರಾತನ ಜೈನ ಬಸದಿಗೆ ಕಾಯಕಲ್ಪದಲ್ಲಿ ಸ್ಥಳೀಯರು ಜೈನ ಸಮಾಜದ ಕೊಡುಗೆ ಕಾರ್ಯ ಪ್ರಶಂಸನಿಯ.
ಈ ಐತಿಹಾಸಿಕ ನಿಡಗಲ್ ಬೆಟ್ಟದ ಶ್ರೀ ಕಷ್ಟಹರಣ ಪಾರ್ಶ್ವನಾಥ ಸ್ವಾಮಿ ಸನ್ನಿಧಿ ರಾಜಧಾನಿ ಬೆಂಗಳೂರಿನಿಂದ 160 ಕಿ.ಮೀ, ಜಿಲ್ಲಾ ಕೇಂದ್ರ ತುಮಕೂರಿನಿಂದ 129 ಕಿ.ಮೀ ,ತಾಲೂಕು ಕೇಂದ್ರದಿಂದ 33 ಕಿ.ಮೀ ,ಚಳ್ಳಕೆರೆಯಿಂದ 60 ಕಿ.ಮೀ, ಪಾವಗಡ -ಚಳ್ಳಕೆರೆ ರಾಜ್ಯ ಹೆದ್ದಾರಿಯ ದೊಡ್ಡೇನಹಳ್ಳಿ ಕ್ರಾಸ್ ನಿಂದ 8 ಕಿಲೋಮೀಟರ್ ಹಾಗೂ ರಂಗಸಮುದ್ರದಿಂದ 9 ಕಿ.ಮೀ. ಗಳ ದೂರವಿದೆ . ಇತ್ತೀಚೆಗೆ ಕಾಂಕ್ರೀಟ್ ರಸ್ತೆ ಅಳವಡಿಸಲಾಗಿದೆ. ಅಲ್ಲದೆ ಇದೆ ಹೆದ್ದಾರಿಯ ಶೈಲಾಪುರ ಗೇಟ್ ನಿಂದ 8 ಕಿ.ಮೀ. ದೂರವಿದೆ. ಬೆಳ್ಳಿ ಬಟ್ಟಲು ಗೇಟ್ ನಿಂದ 6 ಕಿ.ಮೀ., ದೂರವಿದೆ.
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ನೀಡಿದ ದುರ್ಗದ ಶ್ರೀ ಕಷ್ಟಹರಣ ಪಾರ್ಶ್ವನಾಥ ಜಿನಮಂದಿರದ ವಾರ್ಷಿಕ ಪೂಜಾ ಮಹೋತ್ಸವ 2025 ನೇ ಫೆಬ್ರವರಿ 2 ರಂದು ಭಾನುವಾರ ನಡೆಯಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx