ನಾನು ನಿಮ್ಮನ್ನು ಎಂದಿಗೂ ಕೈ ಬಿಡುವುದಿಲ್ಲ; ಎಂದಿಗೂ ತೊರೆಯುವುದಿಲ್ಲ; ನಾನು ಯುಗದ ಸಮಾಪ್ತಿ ಆಗುವವರೆಗೂ, ಎಲ್ಲಾ ಕ್ಷಣಗಳಲ್ಲಿಯೂ ನಾನು ನಿಮ್ಮ ಸಂಗಡ ಇರುತ್ತೇನೆ. ಇದು ನನ್ನ ವಾಗ್ದಾನ.
— ಏಸುಕ್ರಿಸ್ತ
ಭೂಮಿ ಮೇಲೆ ಯಾವಾಗ ಧರ್ಮ ಕ್ಷೀಣವಾಗುತ್ತದೆ; ಪಾಪ ಹೆಚ್ಚಳವಾಗುತ್ತದೆ; ಆಗೆಲ್ಲಾ, ನೀತಿವಂತರನ್ನು ರಕ್ಷಿಸಲು; ದುಷ್ಟರನ್ನು ನಾಶ ಮಾಡಲು; ಧರ್ಮವನ್ನು ಮರು ಸ್ಥಾಪಿಸಲು; ನಾನು ಜನ್ಮ ತಾಳುತ್ತೇನೆ.
– ಪರಮಾತ್ಮ ಶ್ರೀ ಕೃಷ್ಣ
100 ಕೋಟಿಗೂ ಹೆಚ್ಚು ಕ್ರಿಶ್ಚಿಯನ್ನರು ವಿಶ್ವದಲ್ಲಿ ಇಂದು ಏಸುಕ್ರಿಸ್ತನ ಹುಟ್ಟು ಹಬ್ಬ ಆಚರಣೆ ಮಾಡುತ್ತಿದ್ದಾರೆ. ಅವರೆಲ್ಲರಿಗೂ ನನ್ನ ಶುಭಾಶಯಗಳು.ಸರ್ವಧರ್ಮಿಯರಿಗಾಗಿ ಯೇಸು ಕ್ರಿಸ್ತನ ಜನನ; ಜೀವನ; ಮರಣ ಮತ್ತು ಪುನರುತ್ಥಾನ ಚರಿತ್ರೆ — ಒಮ್ಮೆ ಓದಿ…
ಭೂಮಿ ಮೇಲೆ ಮಾನವ, ಪ್ರಾಣಿ-ಪಕ್ಷಿಗಳ ಲಕ್ಷಾಂತರ ಜೀವರಾಶಿಗಳ ಸಂಕುಲಗಳು ಹುಟ್ಟುವ ಮುನ್ನವೇ – ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು (ಪ್ರಕೃತಿ) ಇವುಗಳು ಸೃಷ್ಟಿಯಾಗಿದ್ದವು.
ಪ್ರಕೃತಿ ತರವಾಯವಷ್ಟೇ, ಲಕ್ಷಾಂತರ ಜೀವರಾಶಿ ಸಂಕುಲಗಳು ಜನ್ಮ ತಾಳಿದ್ದು. ಆ ಪೈಕಿ ‘ಮಾನವ ಜೀವರಾಶಿ’ ಒಂದು. ಈ ಮಾನವ ಜೀವರಾಶಿ ಕ್ರಿಸ್ತಪೂರ್ವ 4500 ವರ್ಷಗಳ ಅವಧಿಯಿಂದ Mesopotamia ನಾಗರಿಕತೆ; ಕ್ರಿಸ್ತಪೂರ್ವ 2500 ವರ್ಷಗಳ ಅವಧಿಯಿಂದ ಸಿಂಧೂ ಕಣಿವೆ ನಾಗರಿಕತೆ; ಹೀಗೆ ಹಲವು ನಾಗರಿಕತೆಗಳು ಹುಟ್ಟಿ, ಯುಗ, ಯುಗಗಳು / ಶತ ಶತಮಾನಗಳು ಉರುಳಿದಂತೆ – ದೇವರುಗಳು; ಧರ್ಮ; ವರ್ಗ; ಭಾಷೆ; ಜಾತಿ; ಒಳಜಾತಿಗಳನ್ನು – ಮಾನವ ಜೀವ ರಾಶಿಗಳು ಸೃಷ್ಟಿ ಮಾಡಿಕೊಂಡವು. ಜೊತೆಗೆ ರಾಜ್ಯ, ಸಂಸ್ಥಾನ, ಅರಮನೆ, ಸೈನ್ಯ, ಯುದ್ಧ , ಶ್ರೇಣಿಕೃತ ಸಮಾಜ; ಅಸಮಾನತೆ; ಅಸ್ಪೃಶ್ಯತೆ; ಅನಿಷ್ಟ ಪದ್ದತಿಗಳು; ಮೌಡ್ಯ; ಕಂದಾಚಾರ; ಭಯ; ಅನ್ಯಾಯ; ದುರಾಸೆ; ಕೊಲೆ; ಸುಲಿಗೆ; ಮೋಸ; ವಂಚನೆ; ಅಧರ್ಮ ಇಂತಹ ಸರಮಾಲೆಗಳನ್ನೇ ಶತಮಾನಗಳುದ್ದಕ್ಕೂ ಸೃಷ್ಟಿಸಿ, ಮಾನವ ಜೀವರಾಶಿಗಳು ಜೀವಿಸಿವೆ. ಜೀವಿಸುತ್ತಿವೆ.
ಮಾನವ ಜೀವರಾಶಿಯ ಜೀವಿತ ಅವಧಿಯಲ್ಲಿ, ಅಧರ್ಮ ಹೆಚ್ಚಾದ ಕಾರಣಗಳಿಗೆ, ಧರ್ಮ ಸಂಸ್ಥಾಪನೆ ಮಾಡುವುದಕ್ಕಾಗಿ, ಜನರಲ್ಲಿ ಜ್ಞಾನಾರ್ಜನೆ ತುಂಬುವುದಕ್ಕಾಗಿ, ದೇವರು ಮಾನವನ ರೂಪದಲ್ಲಿ ಈ “ಯೇಸು” ಆಗಿ ಜನ್ಮ ತಾಳಿದ.
(ಯೇಸುಗಿಂತ ಮುಂಚೇ, ದೇವರು, ಮೇಲಿನ ಕಾರಣಗಳಿಗಾಗಿಯೇ ರಾಮ, ಕೃಷ್ಣನ ನಾಮದಲ್ಲಿ ಮಾನವ ರೂಪದಲ್ಲಿ ಜನಿಸಿದ್ದರು)
‘ರೋಮ್’ ದೇಶ. ಜೂಲಿಯಸ್ ಸೀಸರ್ ಮಗ ಆಗಸ್ಟ್ ಸ್ ಸೀಜರ್ ಚಕ್ರವರ್ತಿಯಾಗಿದ್ದ ಕಾಲ; ಆತ ಆಳ್ವಿಕೆ ಮಾಡುತ್ತಿದ್ದ (ಇಂದಿನ) ಇಸ್ರೇಲ್ ದೇಶದ Nazareth ಊರಿನಲ್ಲಿನ ‘ಮರಿಯ’ ಎಂಬ ಕನ್ಯೆಗೆ ಒಮ್ಮೆ ದೇವದೂತ ರಾತ್ರಿ ಕನಸಿನಲ್ಲಿ ಪ್ರತ್ಯಕ್ಷವಾಗಿ, “ನೀನು ದೇವಕುಮಾರನೊಬ್ಬನಿಗೆ ಜನ್ಮ ನೀಡುವುದಕ್ಕಾಗಿ ಗರ್ಭಿಣಿ ಆಗುತ್ತಿದೆಯಾ, ಆ ಮಗು ಜನಿಸಿದ ಮೇಲೆ ಆತನಿಗೆ ‘ಯೇಸು’ ಎಂದು ಹೆಸರಿಡು” ಎಂದನು. ಅದೇ ದೇವದೂತ, ಮರಿಯಾಳನ್ನು ಮದುವೆ ಮಾಡಿಕೊಳ್ಳಲು ನಿಶ್ಚಯ ಮಾಡಿಕೊಂಡಿದ್ದ ಜೋಸೆಫ್ ಎಂಬ ಯುವಕನಿಗೆ ಕೂಡ ರಾತ್ರಿ ಕನಸಿನಲ್ಲಿ ಪ್ರತಕ್ಷವಾಗಿ, ಈ ಮಾಹಿತಿಯನ್ನು ಹಂಚಿಕೊಂಡ.
ಮುಂದಿನ ದಿನಗಳಲ್ಲಿ ರಾಜದೂತನೋಬ್ಬ Nazareth ನ ಜನವಸತಿ ಪ್ರದೇಶಗಳಿಗೆ ಬಂದು, “ರೋಮ್ ಚಕ್ರವರ್ತಿ ಆದೇಶವಾಗಿದೆ, ಪ್ರಜೆಗಳು ನಿಮ್ಮ ನಿಮ್ಮ ಪೂರ್ವಜರ ಮೂಲ ಊರುಗಳಿಗೆ ತೆರಳಿ, ನಿಮ್ಮ ನಿಮ್ಮ ಖಾನೇಸುಮಾರಿ ದಾಖಲೆಗಳನ್ನು ಬರೆಸಿಕೊಳ್ಳುವಂತೆ ಆದೇಶಿಸಿರುತ್ತಾರೆ” ಎಂದು ಸಾರಿದ. ಮರಿಯ ತುಂಬು ಗರ್ಭಿಣಿಯಾಗಿದ್ದರೂ, ರಾಜದೂತನ ಈ ಆದೇಶಕ್ಕೆ ತಲೆಬಾಗಿ, ಜೋಸೆಫ್ ನೋಡನೆ ತನ್ನ ಪೂರ್ವಜರ ಮೂಲ ಊರಾದ Bethlehem ಗೆ ತೆರಳಿದಳು. ಅಲ್ಲಿ ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಆಗಲಿಲ್ಲ. Bethlehem ನ ಹಸು,ಕುರಿಗಳ ಕೊಟ್ಟಿಗೆಯಲ್ಲಿ ಆಶ್ರಯ ಸಿಕ್ಕಿತು. ಮರಿಯಳಿಗೆ ಹೊಟ್ಟೆ ನೋವು ಜಾಸ್ತಿ ಆಯಿತು. ಆ ಕೊಟ್ಟಿಗೆಯಲ್ಲಿಯೇ ಮಗುವಿಗೆ ಜನ್ಮ ನೀಡಿದಳು. ಮುಂದೆ ದೇವರ ಸೂಚನೆಯಂತೆ ಆ ಮಗುವಿಗೆ ‘ಯೇಸು’ ಎಂದು ನಾಮಕರಣ ಮಾಡಿದಳು.
ಶಿಶು ಯೇಸು, ಬೆಳೆದು 12 ವರ್ಷದ ಬಾಲಕನಾಗಿದ್ದಾಗ ಆತನನ್ನು ಮರಿಯ-ಜೋಸೆಫ್ ‘ಪುಷ್ಕ ಹಬ್ಬ’ ಆಚರಣೆಗಾಗಿ Jerusalem ನಗರಕ್ಕೆ ಕರೆದೊಯ್ಯುತ್ತಾರೆ. ಅಲ್ಲಿನ ಪ್ರಾರ್ಥನಾಲಯಗಳ ಧಾರ್ಮಿಕ ಮುಖಂಡರ ಮಾತುಗಳನ್ನು , ಬೋಧನೆಗಳನ್ನು ಯೇಸು ಕೇಳುತ್ತಾ , ಕೇಳುತ್ತಾ Jerusalem ನಗರದಲ್ಲಿ ಉಳಿದುಬಿಟ್ಟನು.ಪ್ರಾರ್ಥನಾಲಯಗಳಲ್ಲಿನ ಧಾರ್ಮಿಕ ಮುಖಂಡರು ಮೂಲಭೂತವಾದಿಗಳು. ಸುಳ್ಳು , ಮೌಡ್ಯ, ಕಂದಾಚಾರಗಳ ಬೋಧನೆ ಮಾಡುತ್ತಿದ್ದರು. ಜನರನ್ನು ಭಯ ಪಡಿಸುತ್ತಿದ್ದರು. ಈ ಅಸತ್ಯಗಳನ್ನು ಕಂಡ ಯೇಸು, ಅಘಾತಗೊಂಡನು.
ಜನರಲ್ಲಿ ಸತ್ಯವನ್ನು , ಧರ್ಮವನ್ನು ತಿಳಿಸುವ ಸಲುವಾಗಿ, ಬೋಧನೆಗಳನ್ನು/ ಸುವಾರ್ತೆಗಳನ್ನು, ಪವಾಡಗಳನ್ನು, ಮಾಡಲು ತಾನೇ ಪ್ರಾರಂಭಿಸಿದನು. ಅಲ್ಲಿಂದ ಮುಂದೆ, ಯೇಸುವಿನ ಸುವಾರ್ತೆಗಳನ್ನು ಜನ ಮೆಚ್ಚುವುದಕ್ಕೆ, ನಂಬುವುದಕ್ಕೆ ಪ್ರಾರಂಭಿಸಿದರು, ಭಕ್ತರಾದರು. ಒಮ್ಮೆ ಯೇಸುವಿನ ಸುವಾರ್ತೆಗಳನ್ನು ಕೇಳಲು ಸುಮಾರು 5000 ಭಕ್ತರು ಒಂದೆಡೆ ಸೇರಿದರು. ಎಲ್ಲರಿಗೂ ಊಟದ ವ್ಯವಸ್ಥೆ ಇರಲಿಲ್ಲ. ಹಸುವಿನಿಂದ ನರಳುವುದನ್ನು ಯೇಸು ಗಮನಿಸಿ, ಭಕ್ತನೊಬ್ಬ ತಂದಿದ್ದ 5 ರೊಟ್ಟಿ 2 ಮೀನು ಗಳನ್ನು ಪಡೆದು, ಪ್ರಾರ್ಥನೆ ಮೂಲಕ ನೆರೆದಿದ್ದ 5000 ಭಕ್ತರಿಗೂ ಊಟ ಬಡಿಸಿದ. ಅವರೆಲ್ಲರ ಹಸಿವು ನೀಗಿತು. ಹೀಗೆ ಯೇಸು ಸುವಾರ್ತೆ ಜೊತೆಗೆ ಪವಾಡಗಳನ್ನು ಮಾಡುತ್ತಾ ಸಾಗಿದ. ಕುರುಡು ವ್ಯಕ್ತಿಗಳಿಗೆ ದೃಷ್ಟಿಯನ್ನು ಬರಿಸಿದ. ಅಂಗವಿಕಲರಿಗೆ ಅಂಗಾಂಗಗಳು ಬರುವಂತೆ ಮಾಡಿದ. ಕುಷ್ಟರೋಗಿಗಳಿಗೆ ತಬ್ಬಿಕೊಂಡು ಅವರ ಕಾಯಿಲೆಗಳನ್ನು ವಾಸಿ ಮಾಡಿದ. ಮೃತ ವ್ಯಕ್ತಿಗಳಿಗೆ ಮರು ಜೀವ ನೀಡಿದ. ದೋಣಿಯಲ್ಲಿ ಸಾಗುತ್ತಿದ್ದಾಗ ಚಂಡಮಾರುತದಿಂದ ಮುಳುಗುತ್ತಿದ್ದ ದೋಣಿಯನ್ನು ಅದರೊಳಗಿದ್ದ ನಾವಿಕರನ್ನು ರಕ್ಷಣೆ ಮಾಡಿದ. ಜನರಿಗಾಗಿ ಸಮುದ್ರದ ಮೇಲೆ ನಡೆದ….. ಹೀಗೆ ಯೇಸುವಿನ ಸುವಾರ್ತೆಗಳು ಮತ್ತು ಪವಾಡಗಳು ಸಾಗಿ, ಸಾಗಿ, ಸಾಗಿ ಹೆಚ್ಚು ಹೆಚ್ಚು ಭಕ್ತರು ಮತ್ತು ಅನುಯಾಯಿಗಳಾದರು. ಹೆಚ್ಚಳಗೊಂಡ ಭಕ್ತರನ್ನು,ಅನುಯಾಯಿಗಳನ್ನು ನಿರಂತರ ಸ್ಪಂದಿಸುವ ಮತ್ತು ತನ್ನ ಸುವಾರ್ತೆಗಳನ್ನು ಎಲ್ಲೆಡೆ ಪ್ರಚುರ ಪಡಿಸಲು, ಸಿಮೋನ, ಅಂದ್ರೆಯ, ಯಾಕೋಬಾ, ಯಹೋನಾ, ಫಿಲಿಪ, ಬರ್ತಲೋಮಯ, ಮತ್ತಾಯ, ಇಸ್ಕಾರಿಯುದಾ… ಇತ್ಯಾದಿ 12 ಶಿಷ್ಯರನ್ನು ಪ್ರಭು ಯೇಸು ನೇಮಿಸಿಕೊಂಡನು.
ಪ್ರಾರ್ಥನಾಲಯಗಳಲ್ಲಿ ಧರ್ಮ ಪ್ರಚಾರದ ಹೆಸರಿನಲ್ಲಿ ಸುಳ್ಳು, ಮೋಸ, ವಂಚನೆ ಮಾಡುತ್ತಿದ್ದ ಮೂಲಭೂತವಾದಿಗಳಿಗೆ ದಿನೇ ದಿನೇ ಹೆಚ್ಚಳವಾಗುತ್ತಿದ್ದ ಯೇಸುವಿನ ಕೀರ್ತಿ, ಭಕ್ತರ, ಅನುಯಾಯಿಗಳ ಸಂಖ್ಯೆಗಳನ್ನು ಗಮನಿಸಿ, ಹೊಟ್ಟೆಕಿಚ್ಚು ಪಡಲು ಪ್ರಾರಂಭಿಸಿದರು. ಕಣ್ಣುಗಳು ಕೆಂಪಾದವು. ಈ ಮೂಲಭೂತವಾದಿಗಳೆಲ್ಲರೂ ಸಭೆಗಳನ್ನು ಮಾಡುತ್ತಾ, ಯೇಸುವಿನ ವಿರುದ್ಧ ಸಡ್ಡ್ಯಂತರಗಳನ್ನು ರೂಪಿಸಿದರು. ಈ ಮೂಲಭೂತವಾದಿಗಳು, ರಾಜದೂತರು ಮತ್ತು ಚಕ್ರವರ್ತಿ ಬಳಿ ತೆರಳಿ, “ಈ ನಗರದಲ್ಲಿ ಯೇಸು ಎಂಬ ವ್ಯಕ್ತಿ, ನಾನೇ ದೇವರು, ನಾನೇ ರಾಜ ಎಂದು ಸುಳ್ಳುಗಳನ್ನು ಹೇಳಿಕೊಂಡು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾನೆ. ಜನರಿಗೆ ಮೋಸ ಮಾಡುತ್ತಿದ್ದಾನೆ, ದೈವ ದೂಷಣೆ ಮಾಡುತ್ತಿದ್ದಾನೆ. ಆತನನ್ನು ಬಂಧಿಸಿ, ಶಿಕ್ಷಿಸಬೇಕೆಂದು ಸುಳ್ಳು ದೂರು ನೀಡಿದರು. ರಾಜದೂತರು ಈ ಮೂಲಭೂತವಾದಿಗಳ ಆಪ್ತರಾಗಿ, ಅವರು ನೀಡುತ್ತಿದ್ದ ಹಣ ಮತ್ತು ಇತರ ಆಮಿಷಗಳಿಂದ ಬದುಕುತ್ತಿದ್ದರು. ರಾಜದೂತರು ಮತ್ತು ಮೂಲಭೂತವಾದಿಗಳು ಯೇಸುವಿನ ಚಲನವಲನಗಳ ಬಗ್ಗೆ ಮಾಹಿತಿ ತಿಳಿಯಲು ಸಂಚುಗಳನ್ನು ರೂಪಿಸಿದರು.
ಮೂಲಭೂತವಾದಿಗಳು, ರಾಜದೂತರು, ಸೈನಿಕರು, ಯೇಸುವಿನ 12 ಶಿಷ್ಯರಲ್ಲಿ ಒಬ್ಬನಾದ ಇಷ್ಕರಿಯುದನನ್ನು ಭೇಟಿ ಮಾಡಿ, ಹಣದ ಆಮಿಷ ಒಡ್ಡಿ , ಯೇಸುವಿನ ಚಲನವಲನಗಳನ್ನು ಮತ್ತು ಬಂಧಿಸಲು ಪ್ರಶಸ್ತವಾದ ಸ್ಥಳದ ಮಾಹಿತಿಗಳನ್ನು ಅವನಿಂದ ಪಡೆದರು. ಆ ಮಾಹಿತಿಯಂತೆ Jerusalem ನಗರದ ಎಣ್ಣೆಮರಗಳ ಗುಡ್ಡದಲ್ಲಿ ರಾತ್ರಿ ನಿದ್ರಿಸುವ ಮುನ್ನ ಯೇಸು ಪ್ರಾರ್ಥನೆ ಮಾಡುತ್ತಿರುವಾಗ ಮೂಲಭೂತವಾದಿಗಳು, ಸೈನಿಕರು ಯೇಸುವನ್ನು ಬಂಧಿಸಿ, ರಾಜ ಪಿಲಾತನನ ಮುಂದೆ ತಂದು ನಿಲ್ಲಿಸಿದರು. ರಾಜ ಪಿಲಾಥನ ಕೆಲವು ಪ್ರಶ್ನೆಗಳನ್ನು ಕೇಳಿ ಆತನಲ್ಲಿ ಯಾವುದೇ ದೋಷಗಳು ಕಾಣುತ್ತಿಲ್ಲವೆಂದು, 39 ಚಡಿ ಏಟುಗಳನ್ನು ಬಾರಿಸಿ ನಂತರ ಬಿಡುಗಡೆ ಮಾಡಲು ಸೂಚಿಸಿದ. ಈ ಶಿಕ್ಷೆಗೆ ಮೂಲಭೂತವಾದಿಗಳು, ರಾಜದೂತರುಗಳು ಒಪ್ಪೋದಿಲ್ಲ. ಹಠ ಹಿಡಿಯುತ್ತಾರೆ. ಮರಣದಂಡನೆ ಶಿಕ್ಷೆಗೆ ಒತ್ತಾಯ ಮಾಡುತ್ತಾರೆ. ಮೂಲಭೂತವಾದಿಗಳ ಒತ್ತಡಗಳ ಕಾರಣದಿಂದ ಕೊನೆಗೆ ರಾಜ ಪಿಲಾಥನ ಯೇಸುವಿಗೆ ಮರಣದಂಡನೆ ಶಿಕ್ಷೆ ವಿಧಿಸುತ್ತಾನೆ.
ಮೂಲಭೂತವಾದಿಗಳು ಕ್ರೌರ್ಯ, ನಿಂದನೆ ಮಾಡುತ್ತಾ , ಯೇಸು ಒಬ್ಬ ರಾಜನಂತೆ ಇತ್ಯಾದಿಯಾಗಿ ನಿಂದಿಸುತ್ತಾ , ಮುಳ್ಳುಗಳ ಕಿರೀಟವನ್ನು ಯೇಸುವಿನ ತಲೆಗೆ ಮೂಲಭೂತವಾದಿಗಳು ಸುತ್ತುತ್ತಾರೆ. ಇದು ರಾಜನ ಕಿರೀಟ ಎಂದು ಕೆಕೆ ಹಾಕುತ್ತಾರೆ. ರಾತ್ರಿಇಡಿ ಸೈನಿಕರಿಂದ ಚಡಿ ಏಟುಗಳನ್ನು ಹೋಡಿಸುತ್ತಾರೆ. ಮುಂಜಾನೆ ಮರದ ಶಿಲುಬೆಯನ್ನು ಯೇಸುಗೆ ಹೊರೆಸಿ ಗುಲ್ಕತ್ತಾ ಗುಡ್ಡದ ಬಳಿ ಕರೆದೊಯ್ಯುತ್ತಾರೆ. ಶಿಲುಬೆ ಹೊತ್ತು ಯೇಸು ದಾರಿಯಲ್ಲಿ ಸಾಗಿ ಬರುವಾಗ ನಿರಂತರ ಚಡಿ ಏಟುಗಳನ್ನು ಸೈನಿಕರು ಬಾರಿಸುತ್ತಿರುತ್ತಾರೆ. ಇಕ್ಕೆಲಗಳಲ್ಲಿ ಯೇಸು ಭಕ್ತರು ಅನುಯಾಯಿಗಳು ಮೌನಿಗಳಾಗಿ, ಒಳಗೆ ದುಃಖಿತರಾಗಿ ನೋಡುತ್ತಿರುತ್ತಾರೆ. ಮೂಲಭೂತವಾದಿಗಳ ಅಟ್ಟಹಾಸವನ್ನು ಎದುರಿಸಲು ಶಕ್ತಿಹೀನರಾಗುತ್ತಾರೆ. ಗೋಲ್ಕತ್ತಾಗುಡ್ಡ ತಲುಪಿದ ಯೇಸುವನ್ನು, ಗುಡ್ಡದ ಮೇಲೆ ಶಿಲುಬೆಯನ್ನು ನಿಲ್ಲಿಸಿ, ಆ ಶಿಲುಬೆಗೆ ಯೇಸುವನ್ನು ನೇತು ಹಾಕಿದ ರೀತಿಯಲ್ಲಿ ಹಗ್ಗದಿಂದ ದೇಹದ ಅಂಗಾಂಗಗಳನ್ನು ಕಟ್ಟಿ , ಕೈ– ಕಾಲಿಗೆ –ಹಣೆಯ ಭಾಗಗಳಲ್ಲಿ ಕಬ್ಬಿಣದ ಮಳೆಯನ್ನು ಹೊಡೆಯುತ್ತಾರೆ. ಯೇಸುವಿನ ದೇಹದ ಅಂಗಾಂಗಗಳಿಂದ ರಕ್ತ ಚಿಮ್ಮುತ್ತಾ ಹರಿಯುತ್ತಿರುತ್ತದೆ. ಕೆಲ ಸೈನಿಕರು ಸುತ್ತಿಗೆಯಿಂದ ಮೊಣಕಾಲಿಗೆ ಬಡಿಯುತ್ತಿರುತ್ತಾರೆ. ಇನ್ನು ಕೆಲವು ಸೈನಿಕರು ಯೇಸುವಿನ ಪಕ್ಕೆಲುಬುಗಳಿಗೆ ಈಟಿಗಳಿಂದ ಚುಚ್ಚಿ ಚುಚ್ಚಿ ಹಿಂಸಿಸುತ್ತಾರೆ. ಧಾರ್ಮಿಕ ಮೂಲಭೂತವಾದಿಗಳು ಕೆಕೆ ಕೇಕೆ ಹಾಕುತ್ತ ನಗುತ್ತಿರುತ್ತಾರೆ. ಆನಂದಿಸುತ್ತಿರುತ್ತಾರೆ. ಇತ್ತ ಕಡೆ ಆ ನೋವಿನಲ್ಲೂ ಏಸು, “ಓ ಪ್ರಭುವೇ, ನನ್ನನ್ನು ಹಿಂಸೆ ನೀಡುತ್ತಿರುವವರಿಗೆ ಒಳ್ಳೆಯದನ್ನು ಮಾಡು” ಎಂದು ಪ್ರಾರ್ಥಿಸುತ್ತಾನೆ. ದೇಹದ ರಕ್ತ ಖಾಲಿಯಾಗಿ, ಯೇಸು ಶಿಲುಬೆಯ ಮೇಲೆ ಸಾವನ್ನಪ್ಪುತ್ತಾನೆ. ಧಾರ್ಮಿಕ ಮೂಲಭೂತವಾದಿಗಳ ಅಧರ್ಮಗಳ ವಿರುದ್ಧ ಮುಗ್ಧ ಜನರನ್ನು ರಕ್ಷಿಸಲು ನಡೆಸಿದ ಯೇಸುವಿನ ಜೀವನ ಅಂತ್ಯವಾಗುತ್ತದೆ. ಸತ್ತ ಏಸುವಿನ ದೇಹವನ್ನು ಸ್ಥಳೀಯ ಗುಹೆ ಒಳಗೆ ಇಡುತ್ತಾರೆ. ಮೂರು ದಿನಗಳ ತರುವಾಯ ಆ ಸತ್ತ ದೇಹ ಕಣ್ಮರೆಯಾಗಿರುತ್ತದೆ. ಮೂಲಭೂತವಾದಿಗಳು ನಾಗರಿಕರು ಆಶ್ಚರ್ಯಚಕಿತರಾಗುತ್ತಾರೆ.
3 ದಿನಗಳ ತರುವಾಯ ಯೇಸು ಪುನರುತ್ಥಾನಗೋoಡು, ಜನರಿಗೆ ಕಾಣಿಸಿಕೊಂಡನು. “ಎಲೆ ಕುಮಾರರೇ, ಕಷ್ಟಪಡುವವರೇ, ಹೊರೆ ಹೊತ್ತವರೆ, ನೀವೆಲ್ಲರೂ ನನ್ನ ಬಳಿ ಬನ್ನಿ. ನಾನು ನಿಮಗೆ ವಿಶ್ರಾಂತಿ ಕೊಡುವೆ. ನಾನೇ ಮಾರ್ಗವು, ನಾನೇ ಸತ್ಯವು, ಜೀವವು ಆಗಿದ್ದೇನೆ. ಪ್ರತಿ ಗಳಿಗೆಯಲ್ಲಿಯೂ ನಿಮ್ಮ ಜೀವನದಲ್ಲಿ ಬರಲು ಸಿದ್ದನಾಗಿದ್ದೇನೆ. ನಿಮ್ಮ ಮನೆ ಬಾಗಿಲಲ್ಲಿ ನಿಂತುಕೊಂಡು ಕದ ತಟ್ಟುತ್ತಿರುತ್ತೇನೆ. ನೀವು, ನಿಮ್ಮ ಮನೆ, ಮನಸ್ಸುಗಳ ಬಾಗಿಲು ತೆರೆಯಿರಿ. ನಾನು ನಿಮ್ಮೊಳಗೆ ಬರುವೆ ಮತ್ತು ಜೀವಿಸುವೆ” ಎಂದು ಹೇಳುತ್ತಾನೆ.
ಹೀಗೆ ಯೇಸುವಿನ ಜನನ; ಜೀವನ ; ಮರಣ ಮತ್ತು ಯೇಸುವಿನ ಪುನರುತ್ಥಾನ, ಇವುಗಳೆಲ್ಲವೂ ಏಸು ತನ್ನ ಜೀವಿತಾವಧಿಯಲ್ಲಿ ಹೇಳಿಕೊಂಡ ಪ್ರಕಾರವೇ ಭೂಮಿ ಮೇಲೆ ನಡೆದಿದೆ. ಶತ ಶತಮಾನಗಳಿಂದ ಈ ಭೂಮಿ ಮೇಲೆ ಬಹುತೇಕ ಧಾರ್ಮಿಕ ಗುರುಗಳು, ವಿದ್ವಾಂಸರು, ವಿಜ್ಞಾನಿಗಳು, ಆಧ್ಯಾತ್ಮಿಕರು, ಗಣ್ಯರು, ಮುಖಂಡರುಗಳು ಹುಟ್ಟಿದ್ದಾರೆ. ನಮ್ಮೊಡನೆ ಜೀವಿಸಿದ್ದಾರೆ ಮತ್ತು ಸತ್ತಿದ್ದಾರೆ. ಯೇಸು ಹೊರತಾಗಿ ಸತ್ತಿರುವ ಮತ್ಯಾರು ಈವರೆಗೂ ನಮ್ಮೊಳಗೆ ಉಳಿದಿಲ್ಲ. ಈಗಲೂ ಯೇಸುವಿನ ಹಾಡುಗಳು, ಪ್ರಾರ್ಥನೆ, ಬೈಬಲ್ ಓದುವಿಕೆ, ಬೈಬಲ್ ಮುದ್ರಣ, ಜಗತ್ತಿನಲ್ಲಿಯೇ ಅತಿ ಹೆಚ್ಚಿನ ಪ್ರಮಾಣದ್ದು. ಇದರಿಂದ ಯೇಸು ಈಗಲೂ ಹೆಚ್ಚು ಪ್ರಭಾವಶಾಲಿ ಮತ್ತು ಮಾನವನ ಚೈತನ್ಯವೆಂದು ಸಾಬೀತಾಗಿದೆ.
ಯೇಸುವಿನ ತ್ಯಾಗ, ಬಲಿದಾನ, ಶ್ರದ್ಧಾ, ಭಕ್ತಿಗಳ ಈ ಕ್ರಿಸ್ಮಸ್ ಹಬ್ಬದಂದು ನಾನು ,
“ಪ್ರಭುವಾದ ಯೇಸುವೆ, ನೀನು ನನಗೆ ಅಗತ್ಯ. ನನ್ನ ಮನೆ, ಮನಸ್ಸಿನ ಬಾಗಿಲನ್ನು ತೆರೆದಿದ್ದೇನೆ. ನನ್ನ ರಕ್ಷಕನನ್ನಾಗಿ, ಪ್ರಭುವನ್ನಾಗಿ, ನಿನ್ನನ್ನು ನಾನು ಅಂಗೀಕರಿಸಿರುತ್ತೇನೆ. ನನ್ನ ಜೀವನವನ್ನು ನಿನ್ನ ಅಧೀನದಲ್ಲಿ ತೆಗೆದುಕೋ. ನಿನ್ನ ಚಿತ್ತದ ಮೇರೆಗೆ ನನ್ನ ಜೀವನವನ್ನು ರೂಪಿಸು, ನಡೆಸು” ಎಂದು ಯೇಸುವನ್ನು ಪ್ರಾರ್ಥಿಸುತ್ತೇನೆ.🌷🙏 .
ವಿಶ್ವ ಮಾನ್ಯರೆಲ್ಲರಿಗೂ ಮತ್ತೊಮ್ಮೆ ಕ್ರಿಸ್ಮಸ್ ಹಬ್ಬದ ಶುಭಕಾಮನೆಗಳನ್ನು ತಿಳಿಸುತ್ತೇನೆ ಜೊತೆಗೆ ನನ್ನಂತೆ ಮೇಲಿನಂತೆ ನೀವು ಕೂಡ ಪ್ರಾರ್ಥಿಸಿ ಎಂದು ನಿಮ್ಮನ್ನು ವಿನಂತಿಸಿ, ಯೇಸುವಿನ ಚರಿತ್ರೆಯ ಈ ಸಂಕ್ಷಿಪ್ತ ಬರಹವನ್ನು ಇಲ್ಲಿಗೆ ಮುಗಿಸುತ್ತೇನೆ.
- ಎಸ್. ಮೂರ್ತಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx