ಒಮ್ಮೆ ಬಡಕಲು ನಾಯಿಯೊಂದು ತುಂಬಾ ಹಸಿದು ಆಹಾರ ಹುಡುಕಿಕೊಂಡು ಹೋಗುತ್ತಿತ್ತು. ಎಷ್ಟು ಅಲೆದರೂ ಎಲ್ಲಿಯೂ ಆಹಾರ ಸಿಗಲಿಲ್ಲ. ಕೊನೆಗೆ ದೂರದಲ್ಲಿ ಅಂಗಡಿಯೊಂದು ಕಾಣಿಸಿತು. ಅಲ್ಲಿಗೆ ಹೋಗಿ ನಿಂತ ನಾಯಿ ಏನಾದರೂ ಕೊಡುವರೋ ಎಂದು ನೋಡುತ್ತಿದ್ದಂತೆ ಅಂಗಡಿ ಮಾಲಿಕ ಏ ಛೂ ಎಂದು ಕೋಲು ಸದ್ದು ಮಾಡಿದನು, ನಂತರ ಮತ್ತೊಂದು ಅಂಗಡಿ ಮುಂದೆ ಚಾ ಹೀರುತ್ತಾ ಬನ್ ತಿನ್ನುತ್ತಾ ನಿಂತಿದ್ದ ಜನರ ಬಳಿ ಹೋಗಿ ಕುಳಿತಿತು. ಅವರೂ ಕೂಡ ಅಲ್ಲಿಂದ ಓಡಿಸಿದರು. ನಂತರ ಹಾಗೆಯೇ ನಡೆದು ಬರುತ್ತಾ ಒಂದು ತಿಪ್ಪೆಯ ಬಳಿ ಗುಂಡಿಯೊಂದರಲ್ಲಿ ನಿಂತಿದ್ದ ಕಲುಷಿತ ನೀರನ್ನು ಕುಡಿದು ಆಯಾಸ ಪರಿಹರಿಸಿಕೊಂಡು ಮತ್ತೆ ಮುಂದೆ ಬಂದಾಗ, ಅಲ್ಲಿ ಶ್ರೀಮಂತನ ಮನೆ ಅಂಗಳದಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿದ್ದ ತಳಿ ನಾಯಿಯೊಂದು ಕಾಣಿಸಿತು ಅದನ್ನು ನೋಡುತ್ತಲೇ ಖುಷಿಪಟ್ಟು ಓ ಇವನೂ ಕೂಡ ನಮ್ಮ ಜಾತಿಯವನೇ ನನಗೆ ತಿನ್ನಲು ಏನಾದರೂ ಕೊಡಿಸುವನು ಎಂದು ಆಸೆಯಿಂದ ಮನೆಯ ಕಾಂಪೌಂಡ ಗೇಟ್ ಪಕ್ಕದಲ್ಲಿ ಬಂದು ನಿಂತು ಒಳಗೆ ನೋಡಿದಾಗ ಬಡಕಲು ನಾಯಿ ನೋಡಿದ ಶ್ರೀಮಂತನ ತಳಿ ನಾಯಿ ಜೋರಾಗಿ ಬೊಗುಳತೊಡಗಿತು ನಂತರ ಬಡಕಲು ನಾಯಿ ನೋಡಿದ ಮಕ್ಕಳು ಒಂದು ಕೋಲನ್ನು ಅದರ ಹತ್ತಿರ ಬೀಳುವಂತೆ ಎಸೆದರು.
ಆಗ ಅಲ್ಲಿಂದ ಓಡಿದ ಬಡಕಲು ನಾಯಿ “ಅಯ್ಯೋ ಇವನು ನಮ್ಮ ಜಾತಿಯವನಾಗಿ ನನ್ನನ್ನೇ ಓಡಿಸುತ್ತಿದ್ದಾನಲ್ಲ ಇನ್ನು ಇಲ್ಲಿಯೂ ಏನೂ ಸಿಗುವುದಿಲ್ಲ” ಎಂದು ನಿರಾಸೆಯಿಂದ ಮಂದೆ ಬಂದಾಗ ಅಲ್ಲೊಂದು ಮನೆಯಿಂದ ಹೊರಗೆ ಬಂದ ಒಬ್ಬ ಹೆಂಗಸು ಮುಸುರೇ ಪಾತ್ರೆಯಿಂದ ತೆಗೆದ ಹಳಸಿದ ಅನ್ನವನ್ನು ಮನೆಯ ಮುಂದಿದ್ದ ಕಲ್ಲಿನ ಮೇಲೆ ಹಾಕುತ್ತಿದ್ದಳು ಅದನ್ನು ನೋಡಿದ ಬಡಕಲು ನಾಯಿ “ಅಬ್ಬ ಇಲ್ಲಿ ಕಾದಿತ್ತು, ನನ್ನ ಪಾಲಿನ ಊಟ… ಇದನ್ನಾದರೂ ಹೊಟ್ಟೆತುಂಬ ತಿಂದು ನೆರಳಲ್ಲಿ ಮಲಗೋಣ” ಎಂದು ಅಲ್ಲಿಗೆ ಓಡಿ ಬಂದು ಇನ್ನೇನು ಬಾಯಿ ಹಾಕಿ ತಿನ್ನಬೇಕು ಎನ್ನುವಷ್ಟರಲ್ಲಿ ಎಲ್ಲಿಂದಲೋ ಬಂದ ನಾಲ್ಕೈದು ಬೀದಿ ನಾಯಿಗಳು ಅಬ್ಬರಿಸುತ್ತಾ ಬಡಕಲು ನಾಯಿಯನ್ನು ಅಲ್ಲಿಂದ ಓಡಿಸಿ, ಅವೇ ಗಬಗಬನೆ ತಿಂದು ಮುಗಿಸಿದವು.
“ಇಲ್ಲಿಯೂ ಅನ್ನದ ಋಣ ಇಲ್ಲವಲ್ಲ” ಎಂದು ಬಹಳ ನಿರಾಸೆಯಿಂದ ಮುಂದೆ ಬರುತ್ತಾ ಊರ ಹೊರಗೆ ಪಾಳು ಬಿದ್ದಿದ್ದ ಈಶ್ವರನ ದೇವಸ್ಥಾನದ ಬಳಿ ಮರದ ನೆರಳಿನಲ್ಲಿ ಹಾಗೆಯೇ ಮಲಗಿಕೊಂಡು “ಹೇ ದೇವ ಪ್ರಪಂಚದ ಎಲ್ಲ ಜೀವ ಜಂತುಗಳಿಗೂ ಒಂದು ಹೊತ್ತು ಊಟ ಇಲ್ಲದಂತೆ ನೋಡಿಕೊಳ್ಳುವ ನೀನು ಇಂದು ಏಕೆ ನನಗೆ ಊಟ ಸಿಗದಂತೆ ಮಾಡಿದೆ, ನಾನು ಪ್ರಯತ್ನ ಅಂತೂ ಪಟ್ಟೆನಲ್ಲಾ ಆದರೂ ಪ್ರತಿಫಲ ಏಕೆ ಸಿಗಲಿಲ್ಲ, ಹೇ ದೇವ ನಾನು ಬದುಕಿರುವವರೆಗೂ ನನಗೆ ಊಟ ಸಿಗುವಂತೆ ಮಾಡು” ಎಂದು ಪ್ರಾರ್ಥಿಸುತ್ತಲೇ ಎಲ್ಲಿಂದಲೋ ಬಂದ ಒಬ್ಬ ಭಿಕ್ಷುಕ ಜೋಳಿಗೆ ಹಿಡಿದು ಆ ಪಾಳು ದೇವಸ್ಥಾನದ ಬಳಿ ಬಂದು ದೇವಸ್ಥಾನದ ಜಗುಲಿ ಮೇಲೆ ಕುಳಿತು ತಾನು ಭಿಕ್ಷೆ ಬೇಡಿ ತಂದಿದ್ದ ಆಹಾರವನ್ನು ತನ್ನ ತಟ್ಟೆಯೊಳಗೆ ಹಾಕಿಕೊಳ್ಳುತ್ತಾ ಇನ್ನೇನು ತಿನ್ನಬೇಕು ಎನ್ನುವಷ್ಟರಲ್ಲಿ, ಅವನನ್ನೆ ಧೀನತೆಯಿಂದ ನೋಡುತ್ತಾ ಮರದ ನೆರಳಲ್ಲಿ ಮಲಗಿದ್ದ ಬಡಕಲು ನಾಯಿಯು ಇವನೂ ನನ್ನನ್ನು ಇಲ್ಲಿಂದ ಓಡಿಸಬಹುದು ಎಂದುಕೊಂಡು ತಾನೇ ಇಲ್ಲಿಂದ ಹೋಗಿಬಿಡೋಣ ಎನ್ನುಕೊಳ್ಳುತ್ತಿರುವಾಗಲೇ ಭಿಕ್ಷುಕ ಎದ್ದು ತನ್ನ ತಟ್ಟೆಯಿಂದ ಸ್ವಲ್ಪ ಆಹಾರವನ್ನು ಒಂದು ಮರದ ಎಲೆಯ ಮೇಲೆ ಹಾಕಿ ನಾಯಿಯ ಹತ್ತಿರ ತಂದು ಅದರ ಮುಂದೆ ಇಟ್ಟು ಅದರ ತಲೆಯನ್ನು ಪ್ರೀತಿಯಿಂದ ಒಮ್ಮೆ ಸವರಿದನು, ಇದನ್ನು ನಂಬಲಾಗದ ಬಡಕಲು ನಾಯಿ ಅವನನ್ನು ಅತ್ಯಂತ ಆಶ್ಚರ್ಯದಿಂದ ನೋಡಿ ಮತ್ತು ಬಹಳ ಆನಂದದಿಂದ ಅವನ ಕಾಲನ್ನು ಒಮ್ಮೆ ಪ್ರೀತಿಯಿಂದ ನೆಕ್ಕಿ ನಂತರ ತನಗೆ ಬಂದ ಆಹಾರವನ್ನು ಸಾಕ್ಷಾತ್ ದೇವನೇ ನನ್ನ ಕರೆಗೆ ಓಗೊಟ್ಟು ಕಳಿಸಿದ್ದಾನೆ ಎಂದು ದೇವನನ್ನು ನೆನೆದು ತನ್ನ ಪಾಲಿನ ಆಹಾರ ತಿಂದು ಹೊಟ್ಟೆ ತುಂಬಿಸಿಕೊಂಡಿತು. ಅಂದಿನಿಂದ ಆ ಭಿಕ್ಷುಕನನ್ನೇ ತನ್ನ ಮಾಲೀಕನನ್ನಾಗಿ ಮಾಡಿಕೊಂಡು ಅವನನ್ನು ಭಿಕ್ಷಾಟನೆ ವೇಳೆ ಬೇರೆಯ ನಾಯಿಗಳಿಂದ ರಕ್ಷಿಸುತ್ತಿತ್ತು, ಹಾಗೂ ಒಬ್ಬಂಟಿಯಾಗಿ ಇದ್ದ ಭಿಕ್ಷುಕನಿಗೂ ನಾಯಿಯ ಪ್ರೀತಿಯಿಂದ ಅವನೂ ಆನಂದದಿಂದ ಜೀವಿಸಿದನು.
ನೀತಿ: ಧೈನ್ಯತೆಯ ಕರೆಗೆ ದೇವರು ಎಂದೂ ಸಹಾಯ ಮಾಡದೇ ಇರಲಾರ.

ಕಥೆಯು ಬಹಳ ಭಾವನಾತ್ಮಕ ಮತ್ತು ಸುಂದರವಾಗಿದೆ. ಬಡಕಲು ನಾಯಿಯ ಹಸಿವಿನ ಸಂಕಟ, ಸಮಾಜದ ನಿರ್ಲಕ್ಷ್ಯ, ಮತ್ತು ಕೊನೆಗೆ ಭಿಕ್ಷುಕನ ಸಹಾನುಭೂತಿ -– ಇವೆಲ್ಲವು ಮಾನವೀಯತೆಯ ಸಾರವನ್ನು ತಲುಪಿಸುತ್ತವೆ. ಕಠಿಣ ಸಮಯಗಳಲ್ಲಿ ಸಹಾಯ ನಿರೀಕ್ಷಿಸಿ ದೇವರನ್ನು ಪ್ರಾರ್ಥಿಸುವ ಮನುಷ್ಯನ ಸ್ಥಿತಿಯನ್ನು ನಾಯಿ ಪ್ರತಿನಿಧಿಸುತ್ತದೆ, ಮತ್ತು ಅಂತಿಮವಾಗಿ ದಯಾಳುವಿನ ಸಹಾಯದ ಮೂಲಕ ದೇವರ ಉತ್ತರ ದೊರಕುತ್ತದೆ ಎಂಬ ಸಂದೇಶ ಈ ಕಥೆಯಿಂದ ಸಿಗುತ್ತದೆ.
ನೀತಿ: ಕಠಿಣ ಪರಿಸ್ಥಿತಿಯಲ್ಲಿದ್ದರೂ ಧೈರ್ಯ ಇಲ್ಲದೇ ಬಿಡಬಾರದು. ನಂಬಿಕೆ ಮತ್ತು ಪ್ರಯತ್ನ ಮುಂದುವರಿಸಿದರೆ ಸಹಾಯ ಕಡ್ಡಾಯವಾಗಿ ಬರುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4