ತುಮಕೂರು: ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಈ ಬಾರಿ ತೆಂಗು ಬೆಳೆಗಾರರಿಗೆ ಬಂಪರ್ ಬೆಲೆ ಲಭಿಸುತ್ತಿದೆ. ತಿಪಟೂರು ಎಪಿಎಂಸಿಯಲ್ಲಿ ಕೊಬ್ಬರಿ ಬೆಲೆ ಕ್ವಿಂಟಾಲ್ ಗೆ ಗರಿಷ್ಠ 17,500 ರೂ. ಸಿಕ್ಕಿರುವುದು ರೈತಾಪಿ ವರ್ಗದ ಸಂತೋಷಕ್ಕೆ ಕಾರಣವಾಗಿದೆ. ಪ್ರಸ್ತುತ ವಷದಲ್ಲಿ ಈ ರೀತಿಯ ಬೆಲೆ ಸಿಗುತ್ತಿರುವುದು ರೈತರಲ್ಲಿ ಸಂತಸ ಮನೆ ಮಾಡಿದೆ.
ಈ ರೀತಿ ನಿರೀಕ್ಷೆಗೂ ಮೀರಿ ಕೊಬ್ಬರಿ ದರ ಹೆಚ್ಚಳಕ್ಕೆ ಇಳುವರಿ ಕಡಿಮೆಯಾಗಿರುವುದೇ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ. ಕೊಬ್ಬರಿ ಧಾರಣೆ ಮಾರುಕಟ್ಟೆಯಲ್ಲಿ ಶುಕ್ರವಾರ ಕನಿಷ್ಟ ಕ್ವಿಂ. ಗೆ 17,000 ರೂ. ಗೆ ಮತ್ತು ಗರಿಷ್ಟ 17500 ರೂ. ಗೆ ಮಾರಾಟವಾಗಿದೆ.
ವಾರದಲ್ಲಿ ಸೋಮವಾರ ಹಾಗೂ ಗುರುವಾರ ಎರಡು ದಿನ ಮಾತ್ರ ಟೆಂಡರ್ ನಡೆಯುತ್ತಿದ್ದು, ರವಾನೆದಾರರು ಉತ್ತರ ಭಾರತದ ವ್ಯಾಪಾರಿಗಳೊಂದಿಗೆ ಆಂತರಿಕವಾಗಿ ವ್ಯವಹರಿಸಿ ಮತ್ತೊಂದು ದರ ಪಡೆಯುವುದು ಸಾಧ್ಯವಾಗುತ್ತಿಲ್ಲ. ಇದರಿಂದ ವ್ಯಾಪಾರದಲ್ಲಿ ಲಾಭ ಕಡಿಮೆಯಾಗಿರುವುದು ರವಾನೆದಾರರ ನಿದ್ದೆ ಕೆಡಿಸಿದ್ದು ಮೊದಲಿನಂತೆ ವಾರದಲ್ಲಿ ನಾಲ್ಕು ದಿನ ಹರಾಜು ನಡೆಸಲು ಅವಕಾಶ ನೀಡುವಂತೆ ಲಾಬಿ ಮಾಡತೊಡಗಿದ್ದಾರೆ ಎನ್ನಲಾಗಿದೆ.
ತಿಪಟೂರು ಎಪಿಎಂಸಿಯಲ್ಲಿ ಇತ್ತೀಚೆಗೆ ಜಾರಿಗೊಳಿಸಿರುವ ಹೊಸ ಟೆಂಡರ್ ಪದ್ದತಿಯಿಂದ ಕೊಬ್ಬರಿಗೆ ಬೇಡಿಕೆ ಹೆಚ್ಚಾಗಿ, ದರ ಏರುಮುಖದಲ್ಲಿ ಸಾಗಿದೆ.
ವಾರದಲ್ಲಿ ಸೊಮವಾರ ಮತ್ತು ಗುರುವಾರ ಎರಡು ದಿನ ಮಾತ್ರ ಟೆಂಡರ್ ಪದ್ದತಿ ಜಾರಿಗೊಳಿಸಿದ್ದರಿಂದ ಈ ಸಂದರ್ಭ ರೈತರು ತರುವ ಕೊಬ್ಬರಿಗೆ ಸಹಜವಾಗಿಯೇ ಬೇಡಿಕೆ ಹೆಚ್ಚಾಗಿ, ದಿನದಿಂದ ದಿನಕ್ಕೆ ಕೊಬ್ಬರಿ ಬೆಲೆ ಏರಿಕೆ ಕಾಣುತ್ತಿರುವುದು ರೈತರಿಗೆ ಆಶಾದಾಯಕವಾಗಿದೆ.
ಹೊಸ ನಿಯಮದಿಂದ ಬೆಲೆ ಹೆಚ್ಚಳ ಗುಣಮಟ್ಟದ ಕೊಬ್ಬರಿಗೆ ಹೆಚ್ಚು ಬೆಲೆ ಸಿಗಬೇಕು ಎಂಬ ಉದ್ದೇಶದಿಂದ ಉತ್ಪನ್ನದ ಗುಣಮಟ್ಟಕ್ಕೆ ತಕ್ಕ ಬೆಲೆ ಸಿಗಲಿ ಎಂಬ ಕಾರಣಕ್ಕೆ ಪ್ರತಿ ಅಂಗಡಿಯಲ್ಲಿಯೂ ಪ್ರತ್ಯೇಕ ದರ ನಿಗದಿಗೊಳಿಸಿರುವುದು ರೈತರಿಗೆ ಲಾಭ ತರುತ್ತಿದೆ.
ಮಾರುಕಟ್ಟೆಯಲ್ಲಿ 2 ದಿನ ಮಾತ್ರ ಟೆಂಡರ್ ನಿಗದಿಗೊಳಿಸಿದ್ದರಿಂದ ಹರಾಜಿನಲ್ಲಿ ಸ್ಪರ್ಧೆ ಏರ್ಪಟ್ಟು ಬೆಲೆ ಏರುಗತಿಯಲ್ಲಿ ಸಾಗುತ್ತಿದೆ. ಹೆಚ್ಚು ದರ ಕೂಗಿದರಷ್ಟೇ ಉತ್ಪನ್ನ ರವಾನೆದಾರರಿಗೆ ಲಭ್ಯವಾಗುವುದರಿಂದ ಅನಿವಾರ್ಯವಾಗಿ ಹೆಚ್ಚು ಬೆಲೆಗೆ ಹರಾಜು ಕೂಗುತ್ತಾರೆ. ಹೊಸ ನಿಯಮಗಳನ್ನು ರೈತರು ಮೆಚ್ಚಿದ್ದು, ಮಾರುಕಟ್ಟೆ ಶಿಸ್ತಿನೆಡೆಗೆ ಬರುತ್ತಿದೆ. ಯಾವುದೇ ಲಾಬಿಗೆ ಮಣಿಯದೇ ಈ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಸ್ಥಳೀಯ ಆಡಳಿತದ ಮೇಲಿದೆ.
ಮಾರುಕಟ್ಟೆಯಲ್ಲಿ ಕೊಬ್ಬರಿ ಉತ್ತಮ ಲಭಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ರೈತ ಮುಖಂಡ ಟಿ.ಬಿ.ಜಯಾನಂದಯ್ಯ , ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಜಾರಿಗೆ ತಂದಿರುವ ಕೆಲ ಬದಲಾವಣೆಗಳಿಂದಲೂ ರೈತರಿಗೆ ಅನುಕೂಲವಾಗುತ್ತಿದೆ. ಈ ರೀತಿ ಇದಕ್ಕೂ ರವಾನೆ ದಾರರು ಆಕ್ಷೇಪಿಸಿದ್ದು, ಮೊದಲಿನಂತೆ ಒಂದು ಅಂಗಡಿಯಲ್ಲಿ ನಿಗದಿಯಾದ ಬೆಲೆಯಲ್ಲಿ ಎಲ್ಲ ಅಂಗಡಿಯಲ್ಲಿ ಕೊಂಡುಕೊಳ್ಳುವಂತೆ ಮಾಡುವಂತೆ ಬೇಡಿಕೆಯಿಟ್ಟಿದ್ದಾರೆ. ರೈತರಿಗೆ ಅನುಕೂಲವಾಗುವ ನಿಯಮಗಳ ಬಗ್ಗೆ ರವಾನೆದಾರರ ಕೆಂಗಣ್ಣು ಬಿದ್ದಿದ್ದು, ತಿಪಟೂರು ಮಂಡಿಯಲ್ಲಿ ಹೊಸ ಲಾಬಿ ಶುರುವಿಟ್ಟುಕೊಂಡಿದ್ದಾರೆ. ಇಂತಹ ಲಾಬಿಯ ವಿರುದ್ಧ ಮೊದಲಿನಿಂದಲೂ ಹೋರಾಟ ಮಾಡುತ್ತಿರುವ ರೈತ ಮುಖಂಡರು ಈಗಲೂ ಹದ್ದಿನ ಕಣ್ಣಿಟ್ಟಿದ್ದು, ಯಾವುದೇ ಕಾರಣಕ್ಕೆ ನಿಯಮಗಳನ್ನು ಸಡಿಲಿಸಬಾರದು ಎಂದು ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4