ತುಮಕೂರು: ಜಿಲ್ಲೆಯ ಜನರ ಶ್ರೇಯಸ್ಸು, ಸಮೃದ್ಧಿ, ಸಂತಸಕ್ಕಾಗಿ ದಸರಾ ಉತ್ಸವ ಪ್ರಯುಕ್ತ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಚಾಮುಂಡೇಶ್ವರಿ ದೇವಿಗೆ ಇಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಶ್ರೀ ವನದುರ್ಗಾ ಹೋಮ ಪೂಜೆ ಸಲ್ಲಿಸಿದರು.
ನಂತರ ನವರಾತ್ರಿಯ ಮೂರನೇ ದಿನ ಶನಿವಾರ ಚಂದ್ರಘಂಟಾ(ಮೀನಾಕ್ಷಿ) ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಚಾಮುಂಡೇಶ್ವರಿ ದೇವಿಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ನಾಗಣ್ಣ ಸೇರಿ ಸಾಮೂಹಿಕವಾಗಿ ವಿಶೇಷ ಪೂಜಾ ಸೇವೆಗಳನ್ನು ಸಲ್ಲಿಸಿದರು.
ಚಂದ್ರಘಂಟಾ ಅಲಂಕಾರವು ಪಾರ್ವತಿ ದೇವಿಯ ವಿವಾಹಿತ ರೂಪವನ್ನು ಪ್ರತಿನಿಧಿಸುತ್ತದೆ. ಶಿವಪುರಾಣದ ಪ್ರಕಾರ ರುದ್ರನು ಚಂದ್ರಶೇಖರ. ಈ ಚಂದ್ರಶೇಖರನ ಶಕ್ತಿ ಸ್ವರೂಪಿಣಿಯೇ ಚಂದ್ರಘಂಟಾ ದೇವಿ. ಮೂರನೇ ದಿನ ತದಿಗೆಯಂದು ಚಂದ್ರಘಂಟಾ ದೇವಿಯನ್ನು ಪೂಜಿಸುವುದರಿಂದ ಶಾಂತಿದಾಯಕ ಸ್ವರೂಪದ ದೇವಿ ನಮಗೆ ಶ್ರೇಯಸ್ಸನ್ನು ನೀಡುತ್ತಾಳೆ. ನಕಾರಾತ್ಮಕ ದುಷ್ಟ ಶಕ್ತಿಗಳನ್ನು ಹೊಡೆದೋಡಿಸುವ ಚಂದ್ರಘಂಟಾದೇವಿಯು ಭಕ್ತರಿಗೆ ಆರೋಗ್ಯ, ಸಮೃದ್ಧಿ ಮತ್ತು ಸಂತಸವನ್ನು ಹಂಚುತ್ತಾಳೆ ಎಂಬ ನಂಬಿಕೆ ಇದೆ.
ಈ ಸಂದರ್ಭದಲ್ಲಿ ಮುಜರಾಯಿ ತಹಶೀಲ್ದಾರ್ ಸವಿತಾ, ದೇವರಾಯನದುರ್ಗ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಮತ್ತಿತತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q