ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಂಗಳವಾರ ಕೊವಿಡ್ ದಿಂದ ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
74 ಮಂದಿಗೆ ಕೊವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 464ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 74 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 464ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ರಾಜ್ಯದಲ್ಲಿ 6,403 ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಪಾಸಿಟಿವ್ ಪ್ರಮಾಣ ಶೇ. 1.15 ರಷ್ಟು ಇದೆ. ಬೆಂಗಳೂರಿನಲ್ಲಿ 2,104 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 57 ಮಂದಿಗೆ ಸೋಂಕು ದೃಢಪಟ್ಟಿದೆ.
ಬೆಂಗಳೂರು ಗ್ರಾಮಾಂತರ ಮತ್ತು ಹಾಸನದಲ್ಲಿ ತಲಾ 4, ಚಿಕ್ಕಬಳ್ಳಾಪುರದಲ್ಲಿ 3, ಮಂಡ್ಯ ಮತ್ತು ಮೈಸೂರಿನಲ್ಲಿ ತಲಾ ಇಬ್ಬರು ಹಾಗೂ ಚಾಮರಾಜನಗರ ಮತ್ತು ವಿಜಯನಗರದಲ್ಲಿ ತಲಾ ಒಂದು ಪ್ರಕರಣ ವರದಿಯಾಗಿವೆ.


