ಔರಾದ್ : ನಾನು ಬೀದರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನನ್ನ ಮೇಲೆ ವಿಶ್ವಾಸವಿಡಿ. ಈ ಬಾರಿ ಬೀದರ ಅಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ಮತ ಚಲಾಯಿಸಿ ಎಂದು ಬೀದರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಹೇಳಿದರು.
ತಾಲೂಕಿನ ಬೆಳಕುಣಿ (ಚೌ), ಹೆಡಗಾಪೂರ, ಸಂತಪೂರ, ಶೆಂಬೆಳ್ಳಿ, ಲಾಧಾ, ಧೂಪತಮಾಹಾಗಾಂವ, ಕೌಠಾ (ಬಿ) ಗ್ರಾಮದಲ್ಲಿ ಮತಯಾಚನೆ ಮಾಡುವ ಮೂಲಕ ಮಾತನಾಡಿದರು. ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಬೀದರ ಜಿಲ್ಲೆಗೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಅವರ ಸಾಧನೆ ಶೂನ್ಯವಾಗಿದೆ. ಅವರನ್ನು ಜನತೆ ತಿರಸ್ಕರಿಸಲು ಕಂಕಣಬದ್ಧರಾಗಿದ್ದಾರೆ ಎಂದು ಖೂಬಾ ವಿರುದ್ಧ ವಾಗ್ದಾಳಿ ನಡೆಸಿದರು. ಎರಡು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ಯಾವುದೇ ಅಭಿವೃದ್ಧಿಗೊಳಿಸಿಲ್ಲ. ಶಿಕ್ಷಕರೊಬ್ಬರು ರೈತರಿಗೆ ಗೊಬ್ಬರ ಕೇಳಿದರೇ ಸಸ್ಪೆಂಡ್ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಖಚಿತವಾಗಿರುವುದರಿಂದ ಅವರಲ್ಲಿ ನಡುಕ ಹುಟ್ಟಿದೆ ಎಂದರು. ಭಗವಂತ ಖೂಬಾ ಅವರಿಗೆ ಅಧಿಕಾರದ ಮದ ಏರಿದೆ. ಆದ್ದರಿಂದ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠಸಲಿದ್ದಾರೆ. ಖೂಬಾ ನಡೆಯಿಂದ ಸ್ವಪಕ್ಷದ ಶಾಸಕರೇ ವಿರೋಧ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ನಮ್ಮ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿಗಳು ಬಡವರಿಗೆ ನೆರವಾಗುತ್ತಿವೆ. ಕಾರ್ಯಕರ್ತರು ಹುಮ್ಮಸ್ಸಿನಿಂದ ಕಾಂಗ್ರೆಸ್ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸಬೇಕು ಎಂದರು.
ಪ್ರಮುಖರಾದ ಡಾ. ಭೀಮಸೇನರಾವ ಶಿಂಧೆ, ಗಂಗಾಧರ ಮಜಿಗೆ, ಮಲ್ಲಿಕಾರ್ಜುನ ಪಾಟೀಲ್, ಹಣಮಂತರಾವ ಚವ್ಹಾಣ, ರಾಜಕುಮಾರ ಹಲಬರ್ಗೆ, ಸುಧಾಕಾರ ಕೊಳ್ಳುರ್, ಎಂ.ಡಿ ನಯೂಮ್, ಕರಬಸು, ದೇವಿದಾಸ, ಮಹೇಶ, ರವಿ ಮಾಳಗೆ, ಖದೀರ್, ಪಾಂಡು ರಡ್ಡಿ, ಸೈಯದ್ ಶರಿಫೋದ್ಧಿನ್, ಧೋಂಡಿಬಾ, ಶೇಷರಾವ, ಭೀಮರಾವ ಶೆಟಕಾರ ಸೇರಿದಂತೆ ನೂರಾರು ಜನ ಕಾರ್ಯಕರ್ತರು ಮತಯಾಚನೆಯಲ್ಲಿ ಪಾಲ್ಗೊಂಡರು.
ಮಳೆಯಲ್ಲೂ ಬಿರುಸಿನ ಪ್ರಚಾರ:
ಸುರಿಯುತ್ತಿರುವ ಮಳೆಯೂ ಲೆಕ್ಕಿಸದೇ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಔರಾದ್ ತಾಲೂಕಿನಲ್ಲಿ ಶನಿವಾರ ಬಿರುಸಿನ ಪ್ರಚಾರ ಮಾಡಿದರು. ಜನರ ಸಮಸ್ಯೆ ಆಲಿಸುವಲ್ಲಿ ಖೂಬಾ ವಿಫಲರಾಗಿದ್ದಾರೆ. ೨ ಸಲ ಮೋದಿ ಹೆಸರಿನ ಮೇಲೆ ಗೆಲುವು ಸಾಧಿಸಿದ ಭಗವಂತ ಖೂಬಾ ಜನರಿಗೆ ಭೇಟಿಯಾಗಿಲ್ಲ. ಈ ಬಾರಿಯೂ ಜನರಿಗೆ ಭೇಟಿ ಮಾಡುವ ಅವಶ್ಯಕತೆಯಿಲ್ಲ. ಕೆಲಸ ಮಾಡುವ ಅಗತ್ಯವೂ ಇಲ್ಲ. ಮತ್ತೆ ಪ್ರಧಾನಿ ನರೇಂದ್ರ ಮೋದಿ ಹೆಸರಿನ ಮೇಲೆ ಗೆಲುವು ಸಾಧಿಸುತ್ತೇನೆ ಎಂಬ ಕನಸು ಕಾಣುತ್ತಿದ್ದಾರೆ ಎಂದು ಕುಟುಕಿದರು.
ಬೀದರನಲ್ಲಿ ಐಟಿ ಕಂಪನಿ ತರುವೆ : ಖಂಡ್ರೆ
ನಾನು ಕಾನೂನು ಪದವಿ ಪಡೆದು ಸುಪ್ರಿಂ ಕೋರ್ಟ್ ನಲ್ಲಿ ಕೆಲಸ ಮಾಡಿ ಬಂದಿದ್ದೇನೆ. ನನಗೆ ಕಾನೂನು ಜ್ಞಾನವಿದೆ. ಇಲ್ಲಿಯ ಯುವಕರಿಗೆ ಉದ್ಯೋಗವಿಲ್ಲ. ಗೆಲುವು ಸಾಧಿಸಿದ ಬಳಿಕ ಐಟಿ ಕಂಪನಿ, ಕಾರಖಾನೆಗಳು ತಂದು ನಿರುದ್ಯೋಗ ಯುವಕರಿಗೆ ಕೆಲಸ ಕೊಡುವ ಪ್ರಯತ್ನ ಮಾಡುತ್ತೇನೆ ಎಂದು ಅಭ್ಯರ್ಥಿ ಸಾಗರ ಖಂಡ್ರೆ ಹೇಳಿದರು. ನನಗೆ ಈ ಬಾರಿ ಬೆಂಬಲಿಸಿ ದೆಹೆಲಿಗೆ ಕಳುಹಿಸಿದರೇ ದಿನದ ೨೪ ಗಂಟೆಯೂ ಜನ ಸೇವೆ ಮಾಡುತ್ತೇನೆ ಎಂದು ಭರವಸೆ ನೀಡಿದರು. ಔರಾದ್ ತಾಲೂಕಿನಲ್ಲಿ ನೀರಿನ ಸಮಸ್ಯೆ ಬಗೆಹರಿಸಲಾಗುತ್ತದೆ. ರೈತರು ವಿಮೆ ಪಾವತಿ ಮಾಡಿದರೂ ಹಣ ಬರುತ್ತಿಲ್ಲ. ಅದನ್ನು ಸಂಸತ್ತಿನಲ್ಲಿ ಧ್ವನಿ ಎತ್ತುವ ಮೂಲಕ ರೈತರಿಗೆ ವಿಮೆ ಹಣ ಸಿಗುವಂತೆ ಮಾಡುತ್ತೇನೆ ಎಂದು ವಿಶ್ವಾಸ ನೀಡಿದರು.
ವರದಿ: ಅರವಿಂದ ಮಲ್ಲಿಗೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296