ಚಿತ್ರದುರ್ಗ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ರೂಪಾ ಸಾವಿನ ಸುತ್ತ ಅನುಮಾನಗಳು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ರೂಪಾ ಅವರ ಪತಿ ಆರಂಭದಲ್ಲಿ ತಲೆಗೆ ಪೆಟ್ಟು ಬಿದ್ದು ಮೃತಪಟ್ಟಿದ್ದಾರೆಂದು ಹೇಳಿದ್ದರು. ಆದರೆ ಪೋಸ್ಟ್ ಮಾರ್ಟಂ ವರದಿ ಪ್ರಕಾರ ತಲೆಗೆ ಗುಂಡು ತಗುಲಿ ಮೃತಪಟ್ಟಿದ್ದಾರೆ. ಹೀಗಾಗಿ ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ಬಗ್ಗೆ ಪೊಲೀಸ್ ತನಿಖೆ ಆರಂಭಗೊಂಡಿದೆ.
ರೂಪಾ ಪತಿ ಡಾ.ಕೆ.ಜಿ.ರವಿ ನಡೆಯ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸಹಜ ಸಾವು ಎಂಬಂತೆ ಅವರು ಬಿಂಬಿಸಲು ಮುಂದಾದ ರೀತಿ ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. ಚಿತ್ರದುರ್ಗ ನಗರದ ವಿ.ಪಿ.ಬಡಾವಣೆಯ ಮನೆಯಲ್ಲಿ ಡಾ.ರೂಪಾ ಸೋಮವಾರ ಅನುಮಾಸ್ಪದವಾಗಿ ಮೃತಪಟ್ಟಿದ್ದರು. ವಿಷಯ ತಿಳಿದ ರವಿ ಕೂಡಲೇ ತುರುವನೂರು ರಸ್ತೆಯ ಆಸ್ಪತ್ರೆಗೆ ಮೃತದೇಹ ಸಾಗಿಸಿದ್ದಾರೆ. ಮನೆಯಲ್ಲಿ ಕಾಲುಜಾರಿ ಬಿದ್ದು ತಲೆಗೆ ಪೆಟ್ಟುಬಿದ್ದು ಮೃತಪಟ್ಟಿದ್ದಾಗಿ ರವಿ ಮಾಹಿತಿ ನೀಡಿದ್ದರು.
ಆದರೆ ರೂಪಾ ಅವರ ಸಹೋದ್ಯೋಗಿಗಳು ಹಾಗೂ ಆಸ್ಪತ್ರೆಯ ವೈದ್ಯರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ತಲೆಯಲ್ಲಿ ರಂಧ್ರವಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚಿತ್ರದುರ್ಗ ಎಸ್ಪಿ ಪರಶುರಾಮ್ ಬೆಂಗಳೂರಿನ ವಿಧಿ ವಿಜ್ಞಾನ ತಜ್ಞರ ತಂಡವನ್ನ ಸಂಪರ್ಕಿಸಿ ದುರ್ಗಕ್ಕೆ ಕರೆಸಿಕೊಂಡು ಪರಿಶೀಲನೆ ನಡೆಸಿದ್ದಾರೆ.
ರೂಪಾ ಮೃತಪಟ್ಟ ರೂಮಿನಲ್ಲಿ ಅವರು ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಸಿಕ್ಕಿದೆಯಂತೆ. ಆ ಪತ್ರದಲ್ಲಿ ಈ ಸಾವಿಗೆ ನಾನೇ ಕಾರಣ. ಹೃದಯಾಘಾತವಾಗಿ ಮೃತಪಟ್ಟಿದ್ದಾಗಿ ಹೇಳಿ, ಪೋಲೀಸರಿಗೆ ಈ ಕುರಿತು ಮಾಹಿತಿ ನೀಡಬೇಡಿ ಎಂದು ಬರೆಯಲಾಗಿದೆಯಂತೆ. ಪತಿ ಡಾ.ರವಿಯನ್ನು ಉದ್ದೇಸಿಸಿ ಪತ್ರ ಬರೆದಿದ್ದ ರೂಪಾ, ನೀನು ನನಗೆ ಮೋಸ ಮಾಡಿದೆ, ನನ್ನಿಂದಲೂ ಕೆಲವು ತಪ್ಪುಗಳಾಗಿವೆ ಎಂದು ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ರೂಪಾ ಪತ್ರ ಬರೆದಿದ್ದು ಕನ್ನಡದಲ್ಲಿ ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ. ತ್ರದ ಕೊನೆಯಲ್ಲಿ ಇಂಗ್ಲಿಷ್‌ನಲ್ಲಿ ಸಹಿ ಹಾಕಿದ್ದಾರೆ.
ಪೊಲೀಸರು ಹಸ್ತಾಕ್ಷರ ರೂಪಾ ಅವರದ್ದೇನಾ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ. ರಿವಾಲ್ವಾರ್‌ನಿಂದ ಹಾರಿದ ಗುಂಡು ಪಟಾಕಿ ಸಿಡಿದ ರೀತಿಯಲ್ಲಿ ಸದ್ದು ಮಾಡುತ್ತದೆ. ಮನೆಯಲ್ಲಿಯೇ ಇದ್ದ ಕುಟುಂಬದ ಸದಸ್ಯರಿಗೆ ಈ ಸದ್ದು ಕೇಳಿಲ್ಲ ಎಂಬುದು ಕೂಡ ಅನುಮಾನಾಸ್ಪದವಾಗಿದೆ.
ರೂಪಾ ಬೆಳಿಗ್ಗೆ 6ಕ್ಕೆ ಏರೊಬಿಕ್‌ಗೆ ತೆರಳಬೇಕಿತ್ತಂತೆ, ತರಬೇತುದಾರರು ರಜೆ ಹಾಕಿದ್ದರಿಂದ ಮನೆಯಲ್ಲಿಯೇ ಉಳಿದ್ದಿದ್ದರು ಎನ್ನಲಾಗಿದೆ. ಪತಿ ಎರಡನೇ ಮಗನ ಜೊತೆ ಲೆಮನ್ ಟೀ ಸೇವಿಸಿ ಎರಡನೇ ಮಹಡಿಯಲ್ಲಿದ್ದ ಜಿಮ್‌ಗೆ ತೆರಳಿದ್ದರು. 16 ವರ್ಷದ ಮಗ ಹಾಗೂ ಅತ್ತೆ ಮನೆಯಲ್ಲಿಯೇ ಇದ್ದರು.
ತಲೆಯ ಬಲಭಾಗದಿಂದ ಹಾರಿದ ಗುಂಡು ಎಡಭಾಗದಿಂದ ಹೊರಗೆ ಬಂದಿದೆ. ಬೆಡ್‌ರೂಮಿನಲ್ಲಿದ್ದ ಕನ್ನಡಿ ಸಮೀಪದಲ್ಲಿದ್ದ ರೂಪಾ ಅವರ ತಲೆಯಿಂದ ಹೊರಗೆ ಬಂದ ಗುಂಡು ಗೋಡೆಗೆ ತಗುಲಿ ಟೇಬಲ್ ಮೇಲೆ ಬಿದ್ದಿದೆ. ಗುಂಡು ಹಾಗೂ ರಿವಾಲ್ವಾರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂಗ್ಲೆಂಡ್‌ನಲ್ಲಿ ನಿರ್ಮಾಣವಾದ ರಿವಾಲ್ವರ್ ಆಗಿದ್ದು, ಡಾ.ರವಿ ಪರವಾನಗಿ ಹೊಂದಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy