ಶಾಲಾ–ಕಾಲೇಜ್ ನಲ್ಲಿ ಮಕ್ಕಳಿಂದ ಸಿನಿಮಾ ಹಾಡು ಗಳಿಗೆ ಹೆಜ್ಜೆ ಹಾಕಿಸುವುದನ್ನು ನಿಷೇಧ ಮಾಡಿದರೂ ಸಹಾ, ಶಾಲಾ–ಕಾಲೇಜ್ ಗಳು ಸ್ಪರ್ಧೆಗೆ ಇಳಿದಂತೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.
ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳನ್ನು ನಡೆಸುವುದು ಒಳ್ಳೆಯ ಬೆಳವಣಿಗೆ. ಆದರೆ ಸಿನಿಮಾ ಹಾಡುಗಳು ಬೆಳೆಯುವ ಮನಸ್ಸುಗಳಿಗೆ ಯಾವ ರೀತಿಯ ಪ್ರೇರಣೆ ನೀಡಬಹುದು ಎನ್ನುವುದನ್ನು ಶಿಕ್ಷಕರು – ಉಪನ್ಯಾಸಕರು ಚಿಂತಿಸದಿರುವುದು ದುರಂತ.
ಶಾಲಾ-ಕಾಲೇಜುಗಳಲ್ಲಿ ಯುವ ಸಮುದಾಯವನ್ನು ಮೆಚ್ಚಿಸಲು, ಪೋಷಕರನ್ನು ಮೆಚ್ಚಿಸಲು ಸಿನಿಮಾ ಹಾಡುಗಳನ್ನು ಕಾರ್ಯಕ್ರಮಗಳಲ್ಲಿ ಬಳಸುವುದು ಎಷ್ಟು ಸರಿ? ಎನ್ನುವುದನ್ನು ಚಿಂತಿಸಬೇಕಿದೆ.
ಸಿನಿಮಾ ಹಾಡುಗಳನ್ನು ಬಳಕೆ ಮಾಡುವುದಕ್ಕಿಂತ ಶಾಲಾ–ಕಾಲೇಜ್ ಗಳಲ್ಲಿ ಸಮಾಜದಲ್ಲಿ ಇರುವ ಅನಿಷ್ಟ ಪದ್ಧತಿಗಳನ್ನು, ಮೂಢನಂಬಿಕೆಗಳನ್ನು ನಿವಾರಣೆ ಮಾಡುವಂತಹ ಕಿರುನಾಟಕಗಳನ್ನು ಹಾಗೂ ದೇಶ ಅಭಿಮಾನ ನಾಡ ಅಭಿಮಾನ ಬೆಳೆಸುವಂತಹ ಕಿರುನಾಟಕಗಳ ಹಾಡುಗಳನ್ನು ಬಳಕೆ ಮಾಡಿಕೊಳ್ಳುವುದು ಅಗತ್ಯ ಇದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಚಿಂತಿಸಬೇಕಾದ ಅಗತ್ಯವಿದೆ. ಸಿನಿಮಾ ಹಾಡುಗಳ ಸಂಸ್ಕೃತಿಗೆ ಶಾಲಾ ಕಾಲೇಜುಗಳಲ್ಲಿ ಕಡಿವಾಣ ಹಾಕಬೇಕಾದ ಅಗತ್ಯವಿದೆ.
ಯುವ ಸಮೂದಾಯ ಸೆಲ್ಫಿ ಹಾಗೂ ರೀಲ್ಸ್ ಗಳನ್ನು ಹೆಚ್ಚು ವೀಕ್ಷಣೆ, ಫಾಲೋವರ್ಸ್ ಪಡೆಯುವ ಉದ್ದೇಶದಿಂದ ಸದಭಿರುಚಿ ಕಳೆದುಕೊಂಡು ವರ್ತಿಸುತ್ತಿರುವುದನ್ನು ನೋಡಿದರೆ, ಆತಂಕವಾಗುತ್ತದೆ. ತಮ್ಮ ಸ್ವಂತ ಕಲೆಯನ್ನು ಶಾಲಾ, ಕಾಲೇಜುಗಳಲ್ಲಿ ಬೆಳೆಸಬೇಕು. ಆದರೆ ಅಸಭ್ಯ ಸಾಹಿತ್ಯಗಳುಳ್ಳ ಸಿನಿಮಾ ಹಾಡುಗಳಿಗೆ ನೃತ್ಯ ಮಾಡಿಸುವ ಮೂಲಕ ಸದಭಿರುಚಿಯನ್ನೇ ಕಳೆದುಕೊಳ್ಳುತ್ತಿದ್ದಾರೆ.
ಸಿನಿಮಾಗಳಲ್ಲೂ ಉತ್ತಮ ಹಾಡುಗಳಿವೆ, ದೇಶ ಭಕ್ತಿ, ಕ್ರಾಂತಿ ಗೀತೆಗಳು, ನಾಡುನುಡಿಗಳ ಸಂಬಂಧಿಸಿದ ಹಾಡುಗಳಿಗೆ ನೃತ್ಯ ಮಾಡಿದರೆ, ಶಾಲೆ ಹಾಗೂ ಕಾಲೇಜುಗಳ ಘನತೆ ಎತ್ತಿ ಹಿಡಿದಂತೆಯೇ ಸರಿ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ. ಕಲಿಯುವ ಹಂತದಲ್ಲೇ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸುವುದು ಅಗತ್ಯ. ಇದರಲ್ಲಿ ಸರ್ಕಾರದ ಜವಾಬ್ದಾರಿ ಹೆಚ್ಚಿದೆ. ಮಕ್ಕಳನ್ನು ಮನೋವಿಕಾರಗಳಿಗೆ ಬಲಿಯಾಗದಂತೆ ಕಾಪಾಡಬೇಕಿದೆ ಎನ್ನುವುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.
N.S.ಈಶ್ವರಪ್ರಸಾದ್
ನೇರಳೇಕೆರೆ, ಮಧುಗಿರಿ ತಾಲ್ಲೂಕ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx