ಸರಗೂರು: ತಾಲೂಕಿನ ದಡದಹಳ್ಳಿ ಗ್ರಾಮದ ಸಣ್ಣಮ್ಮ ಎಂಬವರ ಜಮೀನಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಪ್ರತ್ಯಕ್ಷಗೊಂಡು ಆತಂಕ ಸೃಷ್ಟಿಸಿದ್ದ ಕಾಡಾನೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆಹಿಡಿದು ರಾಂಪುರ ಆನೆ ಶಿಬಿರಕ್ಕೆ ಸ್ಥಳಾಂತರಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಜಮೀನಿನಲ್ಲಿ ಕಾಡಾನೆ ಮರಿ ಓಡಾಡುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ತೀವ್ರ ಭೀತಿ ಎದುರಾಗಿತ್ತು. ಇದರಿಂದಾಗಿ ರೈತರು ಹೊಲ–ಗದ್ದೆಗಳಿಗೆ ಕೆಲಸಕ್ಕೆ ತೆರಳಲು ಹೆದರುವಂತಾಗಿದ್ದು, ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿತ್ತು. ಈ ಕುರಿತು ಗ್ರಾಮಸ್ಥರು ನೀಡಿದ ತುರ್ತು ಮಾಹಿತಿಯನ್ನಾಧರಿಸಿ ಬುಧವಾರ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಸಾಕಾನೆಗಳ ನೆರವಿನೊಂದಿಗೆ ಮುನ್ನೆಚ್ಚರಿಕೆ ವಹಿಸಿ ಯಶಸ್ವಿ ಕಾರ್ಯಾಚರಣೆ ನಡೆಸಿದರು. ಯಾವುದೇ ಅನಾಹುತ ಸಂಭವಿಸದಂತೆ ಮರಿಯಾನೆಯನ್ನು ಸುರಕ್ಷಿತವಾಗಿ ಸೆರೆಹಿಡಿದು, ತಾಲೂಕಿನ ರಾಂಪುರ ಆನೆ ಶಿಬಿರಕ್ಕೆ ರವಾನಿಸಿದ್ದಾರೆ.
ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರಕ್ಕೆ ಆಗ್ರಹ:
ಕಾಡಾನೆ ಮರಿಯ ಓಡಾಟ ಹಾಗೂ ತುಳಿತದಿಂದಾಗಿ ಸಣ್ಣಮ್ಮ ಅವರ ಜಮೀನಿನಲ್ಲಿ ಬೆಳೆದಿದ್ದ ಜೋಳ ಹಾಗೂ ಹತ್ತಿ ಬೆಳೆಗಳು ಸಂಪೂರ್ಣ ನಾಶವಾಗಿವೆ. ಇದರಿಂದ ತಮಗೆ ಭಾರಿ ಆರ್ಥಿಕ ನಷ್ಟ ಉಂಟಾಗಿದ್ದು, ಅರಣ್ಯ ಇಲಾಖೆಯು ತಕ್ಷಣವೇ ಸೂಕ್ತ ನಷ್ಟ ಪರಿಹಾರ ಒದಗಿಸಬೇಕು ಎಂದು ಸಂತ್ರಸ್ತ ರೈತ ಮಹಿಳೆ ಸಣ್ಣಮ್ಮ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
“ಗ್ರಾಮಸ್ಥರಿಂದ ಮಾಹಿತಿ ಸಿಕ್ಕ ತಕ್ಷಣವೇ ಸಾಕಾನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲಾಯಿತು. ಕಾಡಾನೆ ಮರಿಯನ್ನು ಸುರಕ್ಷಿತವಾಗಿ ರಾಂಪುರ ಆನೆ ಶಿಬಿರಕ್ಕೆ ರವಾನಿಸಲಾಗಿದೆ. ಜಮೀನಿನಲ್ಲಿ ಉಂಟಾಗಿರುವ ಬೆಳೆ ಹಾನಿಯ ಕುರಿತು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಸರ್ಕಾರದ ನಿಯಮಾವಳಿಗಳಂತೆ ಸಂತ್ರಸ್ತರಿಗೆ ಶೀಘ್ರವೇ ಪರಿಹಾರ ಕೊಡಿಸಲು ಕ್ರಮ ವಹಿಸಲಾಗುವುದು.”
— ಡಿ. ಪರಮೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್)
ಈ ಕುರಿತು ಪ್ರತಿಕ್ರಿಯಿಸಿದ ಮೋಳೆಯೂರು ವಲಯ ಅರಣ್ಯಾಧಿಕಾರಿ (ಆರ್ಎಫ್ಒ) ನಾರಾಯಣ್ ಅವರು, ಮರಿಯಾನೆಯನ್ನು ರಾಂಪುರ ಶಿಬಿರದಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಪ್ರಮುಖ ಕಾರ್ಯಾಚರಣೆಯಲ್ಲಿ ಎಸಿಎಫ್ ಡಿ. ಪರಮೇಶ್, ಆರ್ಎಫ್ಒಗಳಾದ ನಾರಾಯಣ್, ರಾಜೇಶ್, ಅನೀತ್ ರಾಜ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ ಭಾಗವಹಿಸಿದ್ದರು. ಕಾರ್ಯಾಚರಣೆಯ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಸಾರ್ವಜನಿಕರು ಕಾಡಾನೆ ಮರಿಯನ್ನು ನೋಡಲು ಸ್ಥಳದಲ್ಲಿ ನೆರೆದಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


