ಹೊಸಪೇಟೆ: ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಚಿನ್ನದ ಸರ ಕಳವಾಗಿದ್ದು, ಈ ಹಿನ್ನೆಲೆಯಲ್ಲಿ ಬಸ್ ನಲ್ಲಿದ್ದ 73 ಪ್ರಯಾಣಿಕರನ್ನು ಪೊಲೀಸರು ತಪಾಸಣೆ ನಡೆಸಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
ಮಹಿಳೆಯೊಬ್ಬರು 90 ಗ್ರಾಂ ತೂಕದ ಚಿನ್ನದ ಸರ ಕಳೆದುಕೊಂಡಿರುವುದಾಗಿ ದೂರು ನೀಡಿದ ನಂತರ ಪೊಲೀಸರು ಬಸ್ಸಿನಲ್ಲಿದ್ದ 73 ಪ್ರಯಾಣಿಕರನ್ನು ತಪಾಸಣೆ ನಡೆಸಿದ್ದಾರೆ.
ಮಹಿಳೆ ಹೊಸಪೇಟೆಯಿಂದ ಕೊಪ್ಪಳಕ್ಕೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.
ಬಸ್ಸಿನಲ್ಲಿರುವವರೇ ಯಾರೋ ತನ್ನ ಚಿನ್ನ ಎಗರಿಸಿದ್ದಾರೆ ಎಂದು ಮಹಿಳೆ ಹೇಳಿದ್ದು, ಬಸ್ ನ್ನು ಪೊಲೀಸ್ ಠಾಣೆಗೆ ಚಲಾಯಿಸಿಕೊಂಡು ಹೋಗಲು ಹೇಳಿದ್ದಾರೆ. ಅದರಂತೆ ಬಸ್ ಚಾಲಕ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಗೆ ಬಸ್ ತೆಗೆದುಕೊಂಡು ಹೋಗಿದ್ದು, ಪೊಲೀಸರು ಎಲ್ಲಾ ಪ್ರಯಾಣಿಕರ ಸಾಮಾನುಗಳನ್ನು ಹುಡುಕಿದರೂ ಕದ್ದ ಚಿನ್ನ ಪತ್ತೆಯಾಗಿಲ್ಲ. ಇದರಿಂದಾಗಿ ತೀವ್ರ ತೊಂದರೆಯಾಗಿದೆ ಎಂದು ಪ್ರಯಾಣಿಕರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.
ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಯಾಣಿಕರನ್ನು ಸಮಾಧಾನಪಡಿಸಿ ಅದೇ ಬಸ್ನಲ್ಲಿ ಕೊಪ್ಪಳಕ್ಕೆ ವಾಪಸ್ ಕಳುಹಿಸಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx