ಚಿಕ್ಕನಾಯಕನಹಳ್ಳಿ: ಎತ್ತಿನಹೊಳೆ ಯೋಜನೆಯಲ್ಲಿ ತುಮಕೂರು ಜಿಲ್ಲೆಗೆ ಒಟ್ಟು 1.5 ಟಿಎಂಸಿ ನೀರು ಮಂಜೂರಾಗಿದ್ದು, ಈ ಪೈಕಿ ಚಿಕ್ಕನಾಯಕನಹಳ್ಳಿ ತಾಲೂಕಿಗೆ ಕುಡಿಯುವ ನೀರಿಗಾಗಿ 0.75 ಟಿಎಂಸಿ ನೀರನ್ನು ಮಂಜೂರು ಮಾಡಿಸಲಾಗಿದೆ ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ದುರ್ಗದ ಕೆರೆಗೆ ಎತ್ತಿನಹೊಳೆ ನೀರು ಹರಿಸುವ ಯೋಜನೆ ಕಾಮಗಾರಿಯನ್ನು ಶೀಘ್ರವಾಗಿ ಕೈಗೊಳ್ಳುವಂತೆ ಒತ್ತಾಯಿಸಿ ದುರ್ಗದ ಕೆರೆ ಭಾಗದ ರೈತರು ಜೆ.ಸಿ.ಪುರದಲ್ಲಿರುವ ಜೆ.ಸಿ. ಮಾಧುಸ್ವಾಮಿ ಅವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು. ಈ ವೇಳೆ ರೈತರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ತಾಲೂಕಿಗೆ 1.2 ಟಿಎಂಸಿ ನೀರು ಮಂಜೂರಾಗಿದೆ ಎಂಬುದು ಸಂಪೂರ್ಣ ತಪ್ಪು ಮಾಹಿತಿಯಾಗಿದೆ ಎಂದು ತಿಳಿಸಿದ ಅವರು, ಕೋಲಾರಕ್ಕೆ ಹೋಗುತ್ತಿರುವ ಎತ್ತಿನಹೊಳೆ ಯೋಜನೆಯಿಂದ ಮೊದಲು ನಮ್ಮ ಕ್ಷೇತ್ರಕ್ಕೆ ನೀರೇ ಮಂಜೂರಾಗಿರಲಿಲ್ಲ. 2018ರಲ್ಲಿ ತಾನು ಹಾಗೂ ತಿಪಟೂರು ಶಾಸಕ ಬಿ.ಸಿ. ನಾಗೇಶ್ ಮೈತ್ರಿ ಸರ್ಕಾರದ ಮೇಲೆ ಒತ್ತಡ ಹೇರಿದ ಪರಿಣಾಮ ತಿಪಟೂರಿಗೆ 0.5 ಟಿಎಂಸಿ ಮತ್ತು ನಮ್ಮ ತಾಲೂಕಿಗೆ 0.5 ಟಿಎಂಸಿ ನೀರು ಕುಡಿಯುವ ಉದ್ದೇಶಕ್ಕಾಗಿ ಮಂಜೂರಾಯಿತು. ನಂತರ ತಾನು ಸಚಿವರಾದ ಸಂದರ್ಭದಲ್ಲಿ ಈ ಪ್ರಮಾಣವನ್ನು 0.5 ಟಿಎಂಸಿಯಿಂದ 0.75 ಟಿಎಂಸಿಗೆ ಹೆಚ್ಚಿಸಲಾಗಿದೆ. ಆದರೆ ತಾಲೂಕಿನ ಜೆ.ಸಿ.ಪುರ, ಸಿಂಗದಹಳ್ಳಿ ಹಾಗೂ ನಾಗತಿಹಳ್ಳಿಗೆ ಕುಡಿಯುವ ನೀರಿಗಾಗಿ ಮಾತ್ರ ಇದನ್ನು ಬಳಸಿಕೊಳ್ಳಬಹುದಾಗಿದ್ದು, ಕೃಷಿ ನೀರಾವರಿಗೆ ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಿದರು.
ತಾಲೂಕಿನಲ್ಲಿ ಅಂತರ್ಜಲ ಸಂಪೂರ್ಣ ಕುಸಿದುಹೋಗಿದ್ದು, ಭೀಕರ ಬರಗಾಲ ಎದುರಾಗಿದೆ. ದುರ್ಗದ ಕೆರೆ ತುಂಬಿದರೆ ನಾಗತಿಹಳ್ಳಿ ಕೆರೆಗೂ ನೀರು ಹರಿಯಲಿದೆ. ಎತ್ತಿನಹೊಳೆ ಯೋಜನೆಯಲ್ಲಿ ನೈಸರ್ಗಿಕವಾಗಿ ನೀರು ಹರಿಯುವಂತೆ ವ್ಯವಸ್ಥೆ ಮಾಡಬೇಕು ಹಾಗೂ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ರೈತರು ಈ ವೇಳೆ ಮನವಿ ಮಾಡಿದರು.
ಗೋದೇಕೆರೆ ಹತ್ತಿರದಿಂದ ಹೊನ್ನೆಬಾಗಿ ಕಟ್ಟೆಗೆ 4 ಕಿ.ಮೀ ದೂರದವರೆಗೆ ಪೈಪ್‌ಲೈನ್ ಮೂಲಕ ನೀರು ಹರಿಯಲಿದೆ. ನಂತರ ಅಲ್ಲಿಂದ ಕಟ್ಟೆಯಿಂದ ದುರ್ಗದ ಕೆರೆ ಮತ್ತು ಹೊಸಕೆರೆಗೆ ನೈಸರ್ಗಿಕವಾಗಿ ನೀರು ಹರಿಯುವ ಯೋಜನೆಯನ್ನು ತಮ್ಮ ಅಧಿಕಾರಾವಧಿಯಲ್ಲಿ ರೂಪಿಸಲಾಗಿದೆ ಎಂದು ಜೆ.ಸಿ. ಮಾಧುಸ್ವಾಮಿ ವಿವರಿಸಿದರು. ಬಳಿಕ ಡಿಪಿಆರ್ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳುವುದಾಗಿ ರೈತರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹೊಸಹಳ್ಳಿ ಪ್ರತಾಪ್, ರೈತ ಮುಖಂಡರಾದ ಅಂಕನಹಳ್ಳಿ ಶ್ರೀನಿವಾಸ್, ಬಸವರಾಜು, ರಾಘವೇಂದ್ರ, ಪಶುಪತಿ, ನರಸಿಂಹಮೂರ್ತಿ ಹಾಗೂ ಹೊಸಹಳ್ಳಿ, ಬಾವನಹಳ್ಳಿ, ಹೊನ್ನೆಬಾಗಿ, ಬುಳ್ಳೇನಹಳ್ಳಿ, ದಿಬ್ಬಡಹಳ್ಳಿ ಮತ್ತು ಚಿನ್ನಾಹಳ್ಳಿ ಭಾಗದ ನೂರಾರು ರೈತರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
