ತುಮಕೂರು: ನಗರದ ಗಾಜಿನ ಮನೆಯಲ್ಲಿ ನವೆಂಬರ್ 29 ಹಾಗೂ 30ರಂದು 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಲು 13 ಸಮಿತಿಗಳನ್ನು ರಚಿಸಲಾಗಿದ್ದು, ಸಮ್ಮೇಳನದ ಅಂತಿಮ ಸಿದ್ಧತೆಗಳು ನಡೆಯುತ್ತಿವೆ ಎಂದು ಜಿಲ್ಲಾಧಿಕಾರಿ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ಶುಭ ಕಲ್ಯಾಣ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 16ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಅಗ್ರಹಾರ ಕೃಷ್ಣಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನ ಅಂಗವಾಗಿ ನವೆಂಬರ್ 29ರ ಬೆಳಿಗ್ಗೆ 7:30 ಗಂಟೆಗೆ ಗಾಜಿನ ಮನೆ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಹಾಗೂ 8 ಗಂಟೆಗೆ ನಗರದ ಮಹಾನಗರ ಪಾಲಿಕೆ ಮುಂಭಾಗದಿಂದ ಎಂ.ಜಿ.ರಸ್ತೆ, ಗುಂಚಿ ಚೌಕ, ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ಮಾರ್ಗವಾಗಿ ಗಾಜಿನ ಮನೆಯವರೆಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ನಾಡೋಜ ಬರಗೂರು ರಾಮಚಂದ್ರಪ್ಪ ಅವರು ನವೆಂಬರ್ 29ರ ಬೆಳಿಗ್ಗೆ 10 ಗಂಟೆಗೆ ಗಾಜಿನ ಮನೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಚಿವರು, ಸಂಸದರು, ಶಾಸಕರು, ಲೇಖಕರು, ಕಲಾವಿದರು, ಸಾಹಿತಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಸಾರ್ವಜನಿಕರು ಸೇರಿದಂತೆ 4,000 ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಈ ಬಾರಿ ಸಮ್ಮೇಳನದ ಮೊದಲ ದಿನ ಮಧ್ಯಾಹ್ನ 12:45 ಗಂಟೆಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡುಗೆ; ಮಧ್ಯಾಹ್ನ 1:30 ಗಂಟೆಗೆ ದೃಶ್ಯ ಮಾಧ್ಯಮ ಮತ್ತು ಸಾಹಿತ್ಯ; ಮಧ್ಯಾಹ್ನ 3.15 ಗಂಟೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ಮಾತು–ಕತೆ; ಸಂಜೆ 4.45 ಗಂಟೆಗೆ ಜಿಲ್ಲೆಯ ಸಾಹಿತಿ ಹಾಗೂ ಕಲಾವಿದರ ಚಿಂತನೆ; ಸಂಜೆ 5.45 ಗಂಟೆಗೆ ಜಾನಪದ ಕಲೆಗಳ ಪರಿಚಯ ಕುರಿತು ಹಾಗೂ ನವೆಂಬರ್ 30ರಂದು ಬೆಳಿಗ್ಗೆ 10.30 ಗಂಟೆಗೆ ಮಹಿಳಾ ಚಿಂತನೆ; ಮ.12.15 ಗಂಟೆಗೆ ಕೌಶಲ್ಯಪಥ-ಯುವ ಸಬಲೀಕರಣ; ಮ.2 ಗಂಟೆಗೆ ಕವಿಗೋಷ್ಠಿ ಸೇರಿದಂತೆ 8 ವಿವಿಧ ಗೋಷ್ಠಿಗಳು ನಡೆಯಲಿವೆ. ಮಹಿಳಾ ಚಿಂತನೆ ಹಾಗೂ ಜಾನಪದ ಕಲೆಗಳ ಪರಿಚಯ ಕುರಿತು ಇದೇ ಮೊದಲ ಬಾರಿಗೆ ಗೋಷ್ಠಿಗಳನ್ನು ಏರ್ಪಡಿಸಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.
ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಗೋಷ್ಠಿಗಳೊಂದಿಗೆ ಸುಗಮ ಸಂಗೀತ, ನೃತ್ಯ ಕಾರ್ಯಕ್ರಮ, ರಂಗಗೀತೆಗಳ ಗಾಯನ, ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಹರಿಕಥೆ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.
ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಶಿಕ್ಷಕರು, ಸರ್ಕಾರಿ ನೌಕರರಿಗೆ 2 ದಿನಗಳ ಕಾಲ ಒ.ಒ.ಡಿ. ಸೌಲಭ್ಯ ನೀಡಲಾಗುವುದು. ಸಮ್ಮೇಳನಕ್ಕೆ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿ-ಸಿಬ್ಬಂದಿ, ಸಾಹಿತಿಗಳು, ಕಲಾವಿದರು, ಲೇಖಕರು, ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಮಾತನಾಡಿ, ಸಮ್ಮೇಳನದಲ್ಲಿ ವಿಶೇಷವಾಗಿ ಜಿಲ್ಲೆಯ ಐದು ಮಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯೋತ್ಸವ ದತ್ತಿ ಪ್ರಶಸ್ತಿಗಳನ್ನು ನೀಡಲಾಗುವುದು. ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯ 33 ಸಾಧಕರುಗಳನ್ನು ಸನ್ಮಾನಿಸಲಾಗುವುದು. ಸಮ್ಮೇಳನದ ಉದ್ಘಾಟನೆಗೆ ಕರ್ನಾಟಕ ರತ್ನ ಡಾ: ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮೀಜಿ ವೇದಿಕೆಯನ್ನು ಸಜ್ಜುಗೊಳಿಸಲಾಗಿದೆಯಲ್ಲದೆ, ಶಿಕ್ಷಣಭೀಷ್ಮ ಹೆಚ್.ಎಂ. ಗಂಗಾಧರಯ್ಯ ಸಭಾಂಗಣ, ನಾಟಕ ರತ್ನ ಡಾ: ಗುಬ್ಬಿ ವೀರಣ್ಣ ಮಹಾದ್ವಾರವನ್ನು ನಿರ್ಮಿಸಲಾಗಿದೆ. ಡಾ: ಕಮಲಾ ಹಂಪನ ಪುಸ್ತಕ ಮಳಿಗೆಯಲ್ಲಿ ಪುಸ್ತಕ ಪ್ರದರ್ಶನ, ಡಾ: ಸಾ.ಶಿ. ಮರುಳಯ್ಯ ಕರಕುಶಲ ಮಳಿಗೆಯಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ, ಚಿತ್ರಕಲಾ ಮಂಟಪದಲ್ಲಿ ಚಿತ್ರಕಲೆ ಮತ್ತು ಲಲಿತಕಲೆ ಪ್ರದರ್ಶನವನ್ನು ಏರ್ಪಡಿಸಲಾಗುವುದು. ಕನ್ನಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q