ಮಧುಗಿರಿ (ಮಿಡಿಗೇಶಿ): ಭಾರತದಲ್ಲಿನ ಹಲವಾರು ಸಾಮಾಜಿಕ ಶೋಷಣೆಗಳನ್ನು ಹೊಡೆದೋಡಿಸಿ ಭಾರತ ಪ್ರಜ್ವಲಿಸುವಂತೆ ಮಾಡುವ ವಿಶ್ವದ ಅಗ್ರಗಣ್ಯ ರಾಷ್ಟ್ರವನ್ನಾಗಿ ಬೆಳೆಸುವ ಕನಸನ್ನು ಕಂಡು ಹಲವಾರು ಸುಧಾರಣೆಗಳಿಗೆ ಬುನಾದಿ ಹಾಕಿ, ವಿಭಿನ್ನ ಧರ್ಮ, ಜಾತಿ, ವರ್ಗ, ಪಂಗಡಗಳಿರುವ ಬೃಹತ್ ರಾಷ್ಟ್ರವನ್ನು ಸಂವಿಧಾನದ ಮೂಲಕ ಒಟ್ಟುಗೂಡಿಸಿದ ಆಧುನಿಕ ಭಾರತದ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರದು ಪ್ರಖರ ವ್ಯಕ್ತಿತ್ವ, ವಿಶ್ವಮೆಚ್ಚಿದ ಜ್ಞಾನಿಗಳಲ್ಲಿ ಅಗ್ರಗಣ್ಯರಾಗಿದ್ದರು. ಆಧು ಎಂದು ಕಾಲೇಜು ಶಿಕ್ಷಣ ಧಾರವಾಡ ವಿಭಾಗದ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಡಾ.ಹನುಮಂತರಾಯ ವೈ.ಎಸ್. ತಿಳಿಸಿದರು.
ಅವರು ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಅಂಬೇಡ್ಕರ್ ಶತಮಾನಗಳಿಂದ ಶೋಷಣೆಗೆ ಒಳಗಾದ ಜನರ ಪ್ರತಿನಿಧಿಯಾಗಿ, ಇಲ್ಲಿನ ಸಾಮಾಜಿಕ ಪಿಡುಗುಗಳ ವಿರುದ್ದ ಗಟ್ಟಿಧ್ವನಿಯೆತ್ತಿದ ಛಲಗಾರರಾಗಿದ್ದರು. ಶಿಕ್ಷಣ ಪಡೆಯುವ ಮೂಲಕ ಏನನ್ನಾದರೂ ಸಾಧಿಸಬಹುದೆಂಬ ಅಚಲ ವಿಶ್ವಾಸ ಹೊಂದಿದ್ದು, ಅಂದಿನ ಕಾಲದಲ್ಲಿ ಅತ್ಯುನ್ನತ ವಿದ್ಯಾಭ್ಯಾಸ ಪಡೆದು, ತಮ್ಮ ಜೀವನವನ್ನೇ ಸಮಾಜದ ಸುಧಾರಣೆಗಾಗಿ ಸಮರ್ಪಿಸಿಕೊಂಡರು.
ಕತ್ತಲೆಯ ಕೂಪದಲ್ಲಿ ನರಳುತ್ತಿದ್ದ ಅನೇಕ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಸೇರಲು, ಸಮಾಜದ ಎಲ್ಲ ವರ್ಗಗಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿ, ಚುನಾವಣೆಗಳ ಮುಖಾಂತರ ಸಾಮಾನ್ಯ ಪ್ರಜೆಯೂ ಸಹ ಅಧಿಕಾರ ಪಡೆಯುವ ಅವಕಾಶವನ್ನು ಸಂವಿಧಾನದ ಮೂಲಕ ಕಲ್ಪಿಸಿದರು. ಅವರ ಜೀವನಾದರ್ಶಗಳನ್ನು ಎಲ್ಲರೂ ಅಧ್ಯಯನ ಮಾಡುವ ಮೂಲಕ ಅವರ ಚಿಂತನೆಗಳಿಂದ ಸ್ಪೂರ್ತಿ ಪಡೆಯಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ನರಸಿಂಹಮೂರ್ತಿ ಟಿ.ಎನ್. ಮಾತನಾಡಿ ಬಾಬಾಸಾಹೇಬ್ ಅಂಬೇಡ್ಕರ್ರವರು ಹುಟ್ಟಿದ ದಿನವನ್ನು ವಿಶ್ವಸಂಸ್ಥೆ ವಿಶ್ವ ಜ್ಞಾನ ದಿನಾಚರಣೆ ಎಂದು ಆಚರಿಸುತ್ತಿರುವುದು ಸಮಸ್ತ ಭಾರತೀಯರು ಹೆಮ್ಮೆ ಪಡುವ ವಿಚಾರವಾಗಿದೆ. ಅವರಲ್ಲಿನ ಜ್ಞಾನದ ಬೆಳಕಿನಿಂದ ಭಾರತದಲ್ಲಿ ಅನೇಕ ಕಾನೂನುಗಳು ಜಾರಿಗೆ ಬಂದಿವೆ. ಮೀಸಲಾತಿ, ಮಹಿಳೆಯರಿಗೆ ಆಸ್ತಿ ಹಕ್ಕು, ಮತದಾನದ ಹಕ್ಕು, ಕನಿಷ್ಟ ವೇತನ ಜಾರಿ, ಕಾರ್ಮಿಕರಿಗೆ ಎಂಟು ಗಂಟೆಗಳ ಕೆಲಸ ಮಾಡುವ ಅವಧಿ ನಿಗದಿ, ಭಾರತೀಯ ರಿಜರ್ವ ಬ್ಯಾಂಕ್ ಸ್ಥಾಪನೆಗೆ ಮುನ್ನುಡಿ ಬರೆದರು. ಅವರು ಸಾಮಾಜಿಕ ಚಿಂತಕರಾಗಿ ನೀರಾವರಿ ತಜ್ಞ, ಕಾನೂನು ಪಂಡಿತರಾಗಿ, ಆರ್ಥಿಕ ತಜ್ಞತೆ ಜೊತೆಗೆ ಹಲವಾರು ಕ್ಷೇತ್ರಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದರು.
ಮಹಿಳೆಯರ ಶೋಷಣೆಯ ವಿರುದ್ದ ಅವರನ್ನು ಸಬಲರನ್ನಾಗಿಸಲು ಶಿಕ್ಷಣ ನೀಡಿ, ಮುಖ್ಯವಾಹಿನಿಗೆ ತರಲು ಶ್ರಮಿಸಿದರು. ಎಲ್ಲವರ್ಗಗಳಿಗೆ ಮೀಸಲಾತಿ ನೀಡಿ ಅವರ ಅಭಿವೃದ್ದಿಗೆ ಕಾರಣರಾಗಿದ್ದಾರೆ. ಭಾರತದಲ್ಲಿನ ಇಂದಿನ ಮಹಿಳೆಯರು, ದಲಿತರು, ಹಿಂದುಳಿದವರ ಸ್ಥಾನಮಾನ ಸುಧಾರಿಸಿರುವ ಇಂದಿನ ಪರಿಸ್ಥಿತಿಗೆ ಅಂದಿನ ಅಂಬೇಡ್ಕರ್ರವರ ಚಿಂತನೆಗಳೇ ಕಾರಣವಾಗಿವೆ. ಭೂಮಿ ಮೇಲೆ ಜನಿಸಿದ ಎಲ್ಲರೂ ಚಿರಂಜೀವಿಯಾಗಲಾರರು ಆದರೆ ಬಾಬಾಸಾಹೇಬ್ ಅಂಬೇಡ್ಕರ್ರವರ ಆಲೋಚನೆಗಳು, ಸಾಧನೆಗಳು ಶಾಶ್ವತವಾಗಿ ಮುಂದಿನ ಪೀಳಿಗೆಗೆ ದಾರಿದೀಪವಾಗಿವೆ. ಆದುದರಿಂದ ಅಂಬೇಡ್ಕರ್ರವರ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡಷ್ಟೂ ಎಲ್ಲರೂ ಜ್ಞಾನವಂತರಾಗುತ್ತಾರೆ. ವಿದ್ಯಾರ್ಥಿಗಳು ವಿಶೇಷ ಆಸಕ್ತಿಯಿಂದ ಅವರ ವಿಚಾರಧಾರೆಗಳನ್ನು ಅರಿಯಬೇಕೆಂದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸತೀಶ್ ಎಸ್.ಎಂ. ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಸಹಾಯಕರಾದ ಮಹಮದ್ ರಹಮತುಲ್ಲಾ ಸ್ವಾಗತಿಸಿದರು. ಸೂರ್ಯಪ್ರಕಾಶ್ ವಂದಿಸಿದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy