ಬೆಂಗಳೂರು:“ನಾಗರೀಕರ ಧ್ವನಿಯೇ ನಮ್ಮ ಸರ್ಕಾರದ ಧ್ವನಿ. ಹೀಗಾಗಿ ಬ್ರ್ಯಾಂಡ್ ಬೆಂಗಳೂರು ಯೋಜನೆಯಲ್ಲಿ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಬೆಂಗಳೂರಿನ ಜನರ ಅಭಿಪ್ರಾಯ ಸಂಗ್ರಹಿಸಿ, ಅವರ ನಿರೀಕ್ಷೆಗೆ ತಕ್ಕಂತೆ ನಾವು ಬೆಂಗಳೂರು ಅಭಿವೃದ್ಧಿಯ ನೀಲನಕ್ಷೆ ಸಿದ್ಧಪಡಿಸುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಬ್ರ್ಯಾಂಡ್ ಬೆಂಗಳೂರು ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಕುಮಾರ್ ಅವರು ಬೆಂಗಳೂರಿನ ಅಭಿವೃದ್ಧಿಗೆ ತಾವು ಕೈಗೊಳ್ಳಲಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.
“ಬೆಂಗಳೂರಿಗೆ ಅಂಟಿರುವ ಗ್ರಾಬೇಜ್ ಸಿಟಿ, ಟ್ರಾಫಿಕ್ ಸಿಟಿ ಎಂಬ ಕಳಂಕವನ್ನು ನಾವು ತೊಡೆದು ಹಾಕುತ್ತೇವೆ. ಪ್ರತಿ ರಸ್ತೆಯಲ್ಲಿ ಕ್ಯೂಆರ್ ಕೋಡ್ ಹಾಕಿ ಅಲ್ಲಿನ ಕಾಮಗಾರಿ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಲಾಗುವುದು. ಜನರಿಗೆ ಆ ರಸ್ತೆಯ ಕಾಮಗಾರಿ ಕುರಿತು ಜನರಿಗೆ ಮಾಹಿತಿ ನೀಡಿ ಪಾರದರ್ಶಕತೆ ನೀಡಲಾಗುವುದು.
ಬಿಬಿಎಂಪಿ ಚುನಾವಣೆಗೆ 225 ವಾರ್ಡ ಮಾಡಲಾಗಿದೆ. ವಾರ್ಡ್ ಸಮಿತಿ ಇಲ್ಲದ ಕಾರಣ ಜನರು ಕೆಲವು ಸಲಹೆ ನೀಡಿದ್ದಾರೆ. ಅದೇನೆಂದರೆ ಪಾರ್ಕ್, ಆಟದ ಮೈದಾನಗಳ ಮೇಲುಸ್ತುವಾರಿಯನ್ನು ಸ್ಥಳೀಯರಿಗೆ ನೀಡಿ ಎಂದು ಹೇಳಿದ್ದಾರೆ. ಈ ಬಗ್ಗೆ ನಾನು ಎಲ್ಲಾ ಶಾಸಕರ ಜೊತೆ ಚರ್ಚೆ ಮಾಡುತ್ತೇನೆ. ಇದರಲ್ಲಿ ಯಾವುದೇ ಪಕ್ಷದವರು ಸದಸ್ಯರಿಲ್ಲದ ನಾಗರೀಕ ಸಮೂಹಕ್ಕೆ ಜವಾಬ್ದಾರಿ ವಹಿಸಲು ಚಿಂತನೆ ನಡೆಸಿದ್ದೇವೆ” ಎಂದು ತಿಳಿಸಿದರು.


