ಮಧುಗಿರಿ: ಮಹಿಳೆಯರ ಸುರಕ್ಷತೆ, ಭದ್ರತೆ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಕಾನೂನುಗಳ ಬಗ್ಗೆ ಪ್ರತಿಯೊಬ್ಬರೂ ಜಾಗೃತಿ ಮೂಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಜಿಲ್ಲಾ ಮಿಷನ್ ಸಂಯೋಜಕ ಶಶಿಧರ ಹೆಚ್.ಜಿ. ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಬಲೀಕರಣ ಘಟಕ, ತುಮಕೂರು ಹಾಗೂ ಮಧುಗಿರಿ ಪಟ್ಟಣದ ಜ್ಞಾನಪ್ರಿಯಾ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಮಿಷನ್ ಶಕ್ತಿ ಯೋಜನೆಯ ಮಹಿಳಾ ಸಬಲೀಕರಣ ಘಟಕದಲ್ಲಿ ಮಹಿಳೆಯರ ಸುರಕ್ಷತೆ, ಭದ್ರತೆ ಮತ್ತು ಸಬಲೀಕರಣಕ್ಕಾಗಿ ಕಾನೂನು ಅರಿವು ಅಗತ್ಯವಾಗಿದೆ. ವರದಕ್ಷಿಣೆ, ವಧು–ದಕ್ಷಿಣೆ, ಮಹಿಳಾ ಸಬಲೀಕರಣ ಮಹತ್ವ ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿದರು. ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಆಶಯ ವ್ಯಕ್ತಪಡಿಸಿದರು. ಇದೇ ವೇಳೆ ಮಹಿಳೆಯರು ಉಚಿತ ಕಾನೂನು ನೆರವು, ಸಲಹೆ ಹಾಗೂ ತಮಗಿರುವ ಕಾನೂನಾತ್ಮಕ ಹಕ್ಕುಗಳನ್ನು ಪಡೆಯುವ ವಿಧಾನಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ಅಕೌಂಟೆಂಟ್ ಪೂಜಾಶ್ರೀ ಎಸ್. ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯ, ಮನೆ ಹಿಂಸೆ, ಸೈಬರ್ ಕಿರುಕುಳ, ಅಪಹರಣ ತುರ್ತು ಸಂದರ್ಭದಲ್ಲಿ ಪೊಲೀಸ್, ಒನ್ ಸ್ಟಾಪ್ ಸೆಂಟರ್, ಆಸ್ಪತ್ರೆ ಮತ್ತು ಕಾನೂನು ಸಹಾಯ (ವಕೀಲ, ಎನ್ಜಿಒ) ಪಡೆಯಲು ಮಹಿಳಾ ಸಹಾಯವಾಣಿ 181, ತುರ್ತು ರಕ್ಷಣಾ ಸಹಾಯವಾಣಿ 24X7 ಕಾರ್ಯನಿರ್ವಹಿಸುವ ಸೇವೆಗಳಿಗೆ ಕರೆ ಮಾಡುವ ಮೂಲಕ ದೂರು ನೀಡಬಹುದು. ಮಕ್ಕಳ ಸಹಾಯವಾಣಿ 1098 ಹಾಗೂ ಸಹಾಯವಾಣಿ 112 ತುರ್ತು ಮತ್ತು ರಕ್ಷಣಾ ಸೇವೆಗಳಿಗೆ ಸಂಬಂಧಪಟ್ಟ ಮಾಹಿತಿ ಅಥವಾ ಕರೆ ಮಾಡುವ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾಗಿ ಹೇಳಿದರು.
ಕಾರ್ಯಕ್ರಮದ ಸಹಾಯಕಿ ರಂಜಿತ ಬಿ.ಆರ್., ಮಾತನಾಡಿ, ಸುಕನ್ಯಾ ಸಮೃದ್ಧಿ ಯೋಜನೆಯು ಭಾರತ ಸರ್ಕಾರವು ಹೆಣ್ಣು ಮಕ್ಕಳ ಆರ್ಥಿಕ ಭವಿಷ್ಯ, ಉನ್ನತ ಶಿಕ್ಷಣ ಮತ್ತು ವಿವಾಹದ ವೆಚ್ಚಗಳಿಗಾಗಿ ಪರಿಚಯಿಸಿರುವ ಜನಪ್ರಿಯ ಸಣ್ಣ ಉಳಿತಾಯ ಯೋಜನೆಯಾಗಿದೆ. ಇದು ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯ ಭಾಗವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಹ ಶಿಕ್ಷಕಿ ಕುಸುಮ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


