ಬೆಂಗಳೂರು: ದೊಡ್ಡ ಸಂಖ್ಯೆಯಲ್ಲಿ ಜನರು ಸೇರುವ ಮೆರವಣಿಗೆ, ಉತ್ಸವ ಮತ್ತು ಮದುವೆಯಂಥ ಸಮಾರಂಭದಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪಟಾಕಿಗಳನ್ನು ಸಿಡಿಸುವ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ರಾಜ್ಯದಲ್ಲೂ ಕಡ್ಡಾಯವಾಗಿ ಪಾಲಿಸಲಾಗುವುದು, ಅದರಲ್ಲೂ ದೀಪಾವಳಿ ಸನಿಹದಲ್ಲಿರುವುದರಿಂದ ಇನ್ನಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಿಎಂ ಸೂಚಿಸಿದರು.
ಇನ್ನು ಮುಂದೆ ಖಾಸಗಿ ಕಾರ್ಯಕ್ರಮಗಳಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸಬೇಕು ಎಂದು ಸೂಚನೆ ನೀಡಿದ್ದೇನೆ. ಇನ್ನು ಮುಂದೆ ಮೆರವಣಿಗೆಯ ವೇಳೆ ಪಟಾಕಿ ಹೊಡೆಯೋ ಹಾಗಿಲ್ಲ. ಮದುವೆ, ಗಣೇಶೋತ್ಸವ ಮತ್ತಿತರ ತುಂಬ ಜನರು ಸೇರುವ ಕಡೆಗಳಲ್ಲೂ ಪಟಾಕಿ ಬ್ಯಾನ್ ಮಾಡಲಾಗುತ್ತದೆ. ರಾಜಕೀಯ ಕಾರ್ಯಕ್ರಮಗಳಲ್ಲೂ ಪಟಾಕಿ ಹೊಡೆಯುವಂತಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.


