ಬೆಂಗಳೂರು: ಸೈಬರ್ ಅಪರಾಧಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ತುಮಕೂರು ಜಿಲ್ಲೆಯ ಗುಬ್ಬಿ ಮತ್ತು ಕೊರಟಗೆರೆ ತಾಲ್ಲೂಕಿನ 7,500 ಕ್ಕೂ ಹೆಚ್ಚು ಮಕ್ಕಳನ್ನು ಒಳಗೊಂಡಿರುವ 44 ಸರ್ಕಾರಿ ಶಾಲೆಗಳಲ್ಲಿ ಅಭಿಯಾನ ಆರಂಭವಾಗಿದೆ.
ಜನವರಿ 17 ರಂದು ಈ ಅಭಿಯಾನ ಆರಂಭಗೊಂಡಿದ್ದು, ಶುಕ್ರವಾರ ಮುಕ್ತಾಯವಾಗಲಿದೆ.
ಬೆಂಗಳೂರು ಮೂಲದ ಇಂಟರ್‌ನ್ಯಾಶನಲ್ ಸ್ಕೂಲ್ ಆಫ್ ಬ್ಯುಸಿನೆಸ್ & ರಿಸರ್ಚ್‌ನ 350 ಕ್ಕೂ ಹೆಚ್ಚು ವಿದ್ಯಾರ್ಥಿ ಸ್ವಯಂಸೇವಕರು, ಫೌಂಡೇಶನ್ ಮತ್ತು ಇಂಡಿಯಾ ಲಿಟರಸಿ ಪ್ರಾಜೆಕ್ಟ್‌ನ ಸಹಯೋಗದೊಂದಿಗೆ ಈ ಅಭಿಯಾನ ಕೈಗೊಂಡಿದ್ದಾರೆ. ಇದಕ್ಕೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್ ಕೂಡಾ ಬೆಂಬಲ ವ್ಯಕ್ತಪಡಿಸಿದೆ.
8, 9 ಮತ್ತು 10 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಚಟುವಟಿಕೆ ಆಧಾರಿತ ಅವಧಿಗಳ ಮೂಲಕ ಶಿಕ್ಷಣ ನೀಡುವ ಗುರಿಯನ್ನು ಅಭಿಯಾನ ಹೊಂದಿದೆ. ಉಪನ್ಯಾಸಗಳು, ವೈಯಕ್ತಿಕ ಸುರಕ್ಷತೆ ಮತ್ತು ಸುರಕ್ಷತಾ ಅಪಾಯಗಳಿಗೆ ಸಂಭವನೀಯ ಬೆದರಿಕೆಗಳ ಮಾಹಿತಿಯನ್ನು ಒಳಗೊಂಡಿರುತ್ತದೆ. ಜೊತೆಗೆ ಅವುಗಳನ್ನು ತಡೆ ಮತ್ತು ಎದುರಿಸುವ ಕ್ರಮಗಳನ್ನು ಒಳಗೊಂಡಿರುತ್ತದೆ ಎಂದು ವರದಿಯಾಗಿದೆ.


