ಬಾಗಲಕೋಟೆ: ಜನರಲ್ಲಿ ಎಚ್ ಐವಿ ಸೋಂಕಿನ ಬಗ್ಗೆ ಇರುವ ಆತಂಕ ಮತ್ತು ಗೊಂದಲಗಳನ್ನು ದೂರ ಮಾಡುವುದರ ಜೊತೆಗೆ, ಏಡ್ಸ್ ನಿಂದ ಉಂಟಾಗುವ ಕಳಂಕ ಮತ್ತು ತಾರತಮ್ಯವನ್ನು ಹೊಗಲಾಡಿಸುವ ಕೆಲಸ ಮಾಡಬೇಕಿದೆ ಎಂದು, ನವನಗರದ ಜಿಲ್ಲಾಸ್ಪತ್ರೆಯ ಐಸಿಟಿಸಿ ವಿಭಾಗದ ಆಪ್ತಸಮಾಲೋಚಕಿ ಸಾವಿತ್ರಿ ಬಿ. ಕೊಣ್ಣೂರ ಹೇಳಿದರು.
ನಗರದ ಬಿ.ವ್ಹಿ.ವ್ಹಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಎನ್ ಎಸ್ ಎಸ್ ಘಟಕಗಳು, ರೆಡ್ ಕ್ರಾಸ್ ಹಾಗೂ ರೆಡ ರಿಬ್ಬನ್ ಕ್ಲಬ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಇದೊಂದು ಮಾರಕ ರೋಗವಾಗಿದ್ದು ಯುವಜನತೆ ಇದರ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ಎಚ್ ಐವಿ ಸೋಂಕಿತರನ್ನು ಮಾನವೀಯ ದೃಷ್ಟಿಯಿಂದ ನೋಡುವುದರ ಜೊತೆಗೆ ಧೈರ್ಯ ತುಂಬುವ ಹೊಣೆಗಾರಿಕೆ ನಮ್ಮೆಲ್ಲರ ಮೇಲೆ ಇದೆ. ಇಂತಹ ಸಾಂಕ್ರಾಮಿಕ ರೋಗಕ್ಕೆ ಆಪ್ತಸಲಹೆಗಾರರ ಅವಶ್ಯಕತೆ ತುಂಬಾ ಇದೆ. ಎಚ್ ಐವಿ ಸೋಂಕು, ಅಸುರಕ್ಷಿತ ಲೈಂಗಿಕ ಸಂಪರ್ಕ, ಸಂಸ್ಕರಿಸದಿರುವ ಸೂಜಿ, ಸಿರಿಂಜ್, ಸಂಸ್ಕರಿಸದ ರಕ್ತ ಹಾಗೂ ಸೋಂಕಿತ ತಾಯಿಯ ಎದೆ ಹಾಲಿನಿಂದ ಹರಡುತ್ತದೆ. ಸಂಪೂರ್ಣವಾಗಿ ವಾಸಿ ಮಾಡಲು ಔಷಧಿ ಇಲ್ಲದ ಈ ಖಾಯಿಲೆ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದ ಅವರು ರೋಗದ ಕುರಿತಾದ ತಪ್ಪು ತಿಳುವಳಿಕೆ, ತಾರತಮ್ಯ, ಚಿಕಿತ್ಸೆ, ರಕ್ತದಾನ ಮಾಡುವಾಗ ಅನುಸರಿಸಬೇಕಾದ ನಿಯಮಗಳ ಕುರಿತು ಸಲಹೆ ನೀಡಿದರು.
ಪ್ರಾಚಾರ್ಯರಾದ ಎಸ್.ಆರ್. ಮುಗನೂರಮಠ ಅವರು ಮಾತನಾಡಿ, ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡಬೇಕು. ಇಂದಿನ ದಿನಮಾನಗಳಲ್ಲಿ ಯುವಜನತೆಯಲ್ಲಿ ಹೆಚ್ಚಾಗಿ ಆರೋಗ್ಯದ ಸಮಸ್ಯೆ ಕಂಡುಬರುತ್ತಿದೆ. ವಿಷಯಕ್ಕೆ ಅನುಸಾರವಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಪ್ರೌಢಾವಸ್ಥೆಯು ಮಾನಸಿಕ ಒತ್ತಡದ ಕಾಲವಾಗಿದೆ. ಈ ಸಂದರ್ಭದಲ್ಲಿ ಸಮೂಹದಲ್ಲಿ ಪಾಲ್ಗೊಳ್ಳುವಿಕೆಯಿಂದ ಮಾತ್ರ ಮಾನಸಿಕ ಮತ್ತು ದೈಹಿಕವಾಗಿ ಸದೃಡರಾಗಲು ಸಾಧ್ಯ. ಆರೋಗ್ಯ ಇದ್ದಲ್ಲಿ ಸೌಂದರ್ಯವಿದೆ. ದುಶ್ಚಟಗಳಿಂದ ದೂರವಾಗಿ ಆರೋಗ್ಯಕರ ಬಾಳನ್ನು ನಿಮ್ಮದಾಗಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ಘಟಕಗಳ ಕಾರ್ಯಕ್ರಮಧಿಕಾರಿಗಳಾದ ಡಾ. ವಿರೂಪಾಕ್ಷಿ ಎನ್. ಬಿ, ಎಂ.ಎಚ್. ವಡ್ಡರ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


