ಕೊರಟಗೆರೆ: ತಾಲೂಕಿನ ಮಲ್ಲೇಶ್ವರ ಗ್ರಾಮದ ಇತಿಹಾಸ ಪ್ರಸಿದ್ಧವುಳ್ಳ ಶ್ರೀ ಚೌಡೇಶ್ವರಿ ತಾಯಿಯ ದೇವಸ್ಥಾನವನ್ನ ಶ್ರೀ ಚೌಡೇಶ್ವರಿ ದೇವಿ ನೇಕಾರರ ತೊಗಟವೀರ ಸಂಘ ಹಾಗೂ ಸಹಸ್ರರು ಭಕ್ತಾದಿಗಳ ಸಹಕಾರದಿಂದ ಪುನರ್ ನಿರ್ಮಿಸಲ್ಪಟ್ಟ ಚೌಡೇಶ್ವರಿ ತಾಯಿಯ ದೇವಾಲಯವನ್ನು ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟನೆ ಮಾಡಿದರು.
ಶ್ರೀ ವರಧಾತ್ರೈ ಚೌಡೇಶ್ವರಿ ಅಮ್ಮನವರ ಪುನರ್ ಪ್ರತಿಷ್ಠಾಪನೆ ಹಿನ್ನೆಲೆ ಮಲ್ಲೇಶ್ವರ ಗ್ರಾಮಸ್ಥರಲ್ಲಿ ಸಡಗರ ಸಂಭ್ರಮ ತುಂಬಿತ್ತು. ಇದೇ ವೇಳೆ ಮಾತನಾಡಿದ ಶ್ರೀ ವೀರಭದ್ರ ಶಿವಾಚಾರ್ಯ ಮಹಾ ಸ್ವಾಮೀಜಿ, ಪ್ರತಿ ಕುಲಕ್ಕೂ ಕುಲದೇವರು ಇದ್ದೇ ಇರುತ್ತದೆ. ನಮ್ಮ ಪೂರ್ವಿಕರು ಕುಲದೇವರ ಪೂಜೆಯನ್ನ ಸುಮ್ಮನೆ ಮಾಡಿಲ್ಲ, ಹಿಂದೂ ಧರ್ಮದಲ್ಲಿ ದೇವರ ಪ್ರಾರ್ಥನೆ ಪರಂಪರೆಯಾಗಿದೆ ಎಂದರು.
ಶ್ರೀ ಶ್ರೀ ನೀಲಕಂಠಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ದೇವಸ್ಥಾನದ ಮೇಲ್ಭಾಗದ ವಿಮಾನ ಗೋಪುರದ ಕಳಶ ಪ್ರತಿಷ್ಠಾಪಿಸಿ ಸಕಲ ಮಂತ್ರಗಳ ವಿಧಿ ವಿಧಾನಗಳೊಂದಿಗೆ ಶ್ರೀ ಚೌಡೇಶ್ವರಿ ತಾಯಿಯ ಕಣ್ಣು ತೆರೆಸಲಾಯಿತು.. ನಂತರ ಗೋಮಾತೆಗೆ ಪೂಜೆಯನ್ನು ಸಲ್ಲಿಸಿ ದೇವಿಯ ದರ್ಶನವನ್ನು ಮಾಡಿಸಿ ಭಕ್ತಾದಿಗಳಿಗೆ ತಾಯಿಯ ದರ್ಶನಕ್ಕೆ ಅವಕಾಶ ಕಲ್ಪಿಸಿ ಕೊಡಲಾಯಿತು.
ದೇವಸ್ಥಾನದ ಉದ್ಘಾಟನೆಗೆ ಆಗಮಿಸಿದ ಸಾವಿರಾರು ಭಕ್ತರು ಚೌಡೇಶ್ವರಿ ತಾಯಿಯನ್ನು ಕಣ್ ತುಂಬಿಕೊಂಡು ಪ್ರಸಾದವನ್ನು ಸ್ವೀಕರಿಸಿ ಬೇಡಿದ ವರಗಳನ್ನು ಈಡೇರಿಸುವಂತೆ ಭಕ್ತಿಯಿಂದ ಬೇಡಿಕೊಂಡರು.. ದೇವಸ್ಥಾನದ ಪೂಜೆಗೆ ಬಂದಿದ್ದ ಮುತ್ತೈದೆಯರಿಗೆ ಹರಿಶಿಣ ಕುಂಕುಮ ಹಸಿರು ಬಳೆಗಳನ್ನು ಕೊಟ್ಟು ಮಹಿಳೆಯರು ಸತ್ಕರಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಚೌಡೇಶ್ವರಿ ದೇವಿ ನೇಕಾರರ ತೊಗಟವೀರರ ಸಂಘ ಮಲ್ಲೇಶ್ವರ, ಶ್ರೀ ಚೌಡೇಶ್ವರಿ ನೇಕಾರರ ಮಹಿಳಾ ಸಂಘ ಮಲ್ಲೇಶ್ವರ ಸೇರಿದಂತೆ ಸಹಸ್ರರು ಭಕ್ತಾದಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ


