ರಾಜಸ್ಥಾನ: 17 ವರ್ಷದ ಶಾಲಾ ವಿದ್ಯಾರ್ಥಿನಿ ಮೇಲೆ ಆಕೆಯ ಶಿಕ್ಷಕನೇ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಭೀಕರ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಆರೋಪಿಯನ್ನು ಪ್ರಹ್ಲಾದ್ ಅಂಬರಂ ಮೇಘವಾಲ್ ಎಂದು ಗುರುತಿಸಲಾಗಿದೆ. ಆತನನ್ನು ಜೈಪುರದಲ್ಲಿ ಬಂಧಿಸಿರುವ ಪೊಲೀಸರು ಬಾರ್ಮರ್ ಗೆ ಕರೆತಂದಿದ್ದಾರೆ.
ಹಳ್ಳಿಯೊಂದರ ಬಾವಿಯೊಳಗೆ ಬಾಲಕಿಯ ಶವ ಪತ್ತೆಯಾಗಿರುವ ಬಗ್ಗೆ ಬಾರ್ಮರ್‌ನ ಪೊಲೀಸರಿಗೆ ಭಾನುವಾರ ಮಾಹಿತಿ ಸಿಕ್ಕಿತ್ತು. ನಂತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ಬಾಲಕಿಯ ತಂದೆ, ಮಗಳ ಶವವನ್ನು ಗುರ್ತಿಸಿದ್ದರು. ನಂತರ ಮೃತಳ ಶಿಕ್ಷಕ ಪ್ರಹ್ಲಾದ್ ವಿರುದ್ದ ಬಾಲಕಿ ತಂದೆ ದೂರು ನೀಡಿದ್ದರು.
ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಬಾಲಕಿ ಮೇಲೆ ಹಲ್ಲೆ ಅಥವಾ ಕತ್ತು ಹಿಸುಕಿದ ಯಾವುದೇ ಲಕ್ಷಣಗಳಿಲ್ಲದ ಕಾರಣ ಬಾಲಕಿ ಹೇಗೆ ಸಾವನ್ನಪ್ಪಿದ್ದಾಳೆ ಎಂಬುದನ್ನು ಇನ್ನೂ ತೀರ್ಮಾನಿಸಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. IPC ಸೆಕ್ಷನ್ 302 (ಕೊಲೆ), 376 (ಅತ್ಯಾಚಾರ) ಮತ್ತು ಪೋಕ್ಸೊ ಕಾಯಿದೆ ಅಡಿಯಲ್ಲಿ ಶಿಕ್ಷಕನ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.


