ಕಲ್ಬುರ್ಗಿ: ತಂಗಿಗೆ ಕಾಲೇಜಿಗೆ ಹೋಗಲಿಲ್ಲ ಎಂದು ಕೋಪಗೊಂಡಿದ್ದ ಅಣ್ಣ ಕಾಲೇಜಿಗೆ ಹೋಗು ಎಂದು ಬೈದು ಬುದ್ದಿ ಹೇಳಿದ್ದ. ಬುದ್ದಿ ಹೇಳಿದ್ದಕ್ಕೆ ಮನನೊಂದ ತಂಗಿ ಸಾರ್ವಜನಿಕ ಕುಡಿಯುವ ನೀರಿನ ಬಾವಿಗೆ ಹಾರಿದ್ದು, ಆಕೆಯನ್ನು ರಕ್ಷಿಸಲು ಹೋದ ಸಹೋದರ ಕೂಡ ಮೃತಪಟ್ಟ ಘಟನೆ ಕಲ್ಬುರ್ಗಿಯಲ್ಲಿ ನಡೆದಿದೆ.
ಅಣ್ಣ, ತಂಗಿ ಇಬ್ಬರೂ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟಿದ್ದಾರೆ. ಚಿಂಚೋಳಿ ತಾಲೂಕಿನ ಪಟಪಳ್ಳಿ ಗ್ರಾಮ ಸಂದೀಪ (21), ನಂದಿನಿ (18) ಮೃತ ದುರ್ದೈವಿಗಳು. ಬಾವಿಯ ದಡದಲ್ಲಿ ನಂದಿನಿ ತಲೆಗೆ ಮುಡಿದಿದ್ದ ಹೂವಿನ ಗೊಂಚಲು ಇದ್ದುದರಿಂದ ಅನುಮಾನಗೊಂಡ ಹೆತ್ತವರು ಹುಡುಕಾಡಿದಾಗ ಇಬ್ಬರ ಮೃತದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಚಿಂಚೋಳಿ ಪೊಲೀಸ್ ಸಬ್ ಇನ್ಸ್ ಪೆಕ್ಟ ರ್ ಹಣಮಂತ ಬಂಕಲಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.


