ಮೈಸೂರು: ಜಮೀನಿನಲ್ಲಿ ರಾಗಿ ಕಟಾವು ಮಾಡುತ್ತಿದ್ದಾಗ ಕಾಡಾನೆಯೊಂದು ದಾಳಿ ನಡೆಸಿ ರೈತರೊಬ್ಬರು ಬಲಿಯಾಗಿರುವ ಘಟನೆ ಹುಣಸೂರು ತಾಲೂಕಿನ ಮುದಗನೂರು ಗ್ರಾಮದಲ್ಲಿ ನಡೆದಿದ್ದು, ಮೃತರನ್ನು ಚಲುವಯ್ಯ(65) ಎಂದು ಗುರುತಿಸಲಾಗಿದೆ.
ಕಾಡಾನೆ ದಾಳಿಯಿಂದ ಸ್ಥಳದಲ್ಲೇ ರೈತ ಚಲುವಯ್ಯ ಮೃತಪಟ್ಟಿದ್ದಾರೆ. ನಿರಂತರ ಕಾಡು ಪ್ರಾಣಿ ಹಾವಳಿಯಿಂದ ರೈತರಲ್ಲಿ ಆತಂಕ ಹೆಚ್ಚಾಗುತ್ತಿದ್ದು, ಶಾಶ್ವತ ಪರಿಹಾರಕ್ಕಾಗಿ ಗ್ರಾಮಸ್ಥರು ಹಾಗೂ ರೈತರು ಒತ್ತಾಯ ಮಾಡಿದ್ದಾರೆ. ಕಾಡಾನೆಗಳ ಸಹಿತ ಕಾಡು ಪ್ರಾಣಿಗಳ ಹಾವಳಿಯಿಂದ ಮನೆಯಿಂದ ಹೊರಗೆ ಬರಲು ಭಯವಾಗುತ್ತಿದ್ದು, ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನಮ್ಮೆಲ್ಲರ ರಕ್ಷಣೆಗೆ ಬರಬೇಕು ಎಂದು ಮನವಿ ಮಾಡಿದ್ದಾರೆ.
ಜೀವ ಹೋದ ಮೇಲೆ ಬಂದು ಏನು ಹೇಳಿದರೂ, ಪರಿಹಾರ ಕೊಟ್ಟರೂ ಹೋದ ಜೀವ ಮರಳಿ ಬಾರದು. ಹೀಗಾಗಿ ಪ್ರಾಣಿಗಳ ದಾಳಿಯಿಂದ ರಕ್ಷಣೆ ನೀಡಲು ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


