ಕೊಡಗು: ಕೊಡಗಿನ ಸುಂಟಿಕೊಪ್ಪ ಸಮೀಪದ 7ನೇ ಮೈಲಿ ಬಳಿ ಎರಡು ಬೈಕ್ ಗಳ ನಡುವೆ ಮುಖಾ ಮುಖಿ ಡಿಕ್ಕಿಯಾದ ಪರಿಣಾಮ, ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೈಸೂರಿನ ಹುಣಸೂರು ಮೂಲದ ಮಂಗಳೂರು ಮಾಳ ನಿವಾಸಿ ಸಂತೋಷ್ ಮೃತ ದುರ್ದೈವಿ.
ಸಂತೋಷ್ ಹುಣಸೂರಿನಿಂದ ಮಡಿಕೇರಿಗೆ ಬರುತ್ತಿದ್ದರು. ಮತ್ತೊಬ್ಬ ಸವಾರ ಚೇತನ್ ಬೋಯಿಕೇರಿಯಿಂದ ಕುಶಾಲನಗರ ಕಡೆ ತೆರಳುತ್ತಿದ್ದರು. ಇಬ್ಬರು ವೇಗವಾಗಿ ಬರುತ್ತಿದ್ದಾಗ, ನಿಯಂತ್ರಣ ತಪ್ಪಿ ಎರಡು ಬೈಕ್ ಗಳ ನಡುವೆ ಡಿಕ್ಕಿಯಾಗಿದ್ದು, ಡಿಕ್ಕಿ ರಭಸಕ್ಕೆ ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ಸಂತೋಷ್ ಸ್ಥಳದಲ್ಲೇ ಮೃತಪಟ್ಟರೆ, ಚೇತನ್ ಸ್ಥಿತಿ ಗಂಭಿರವಾಗಿದೆ. ಸ್ಥಳೀಯರು ಚೇತನ್‌ನನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಅಪಘಾತದಲ್ಲಿ ಎರಡು ಬೈಕ್ ಗಳು ಸಂಪೂರ್ಣ ಜಖಂಗೊಂಡಿವೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.


