ಧಾರವಾಡ: ಯುವಕರಿಬ್ಬರು ಬೈಕ್ ನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ದಾಳಿ ಮಾಡಿದ ಘಟನೆ ಧಾರವಾಡದ ಡೈರಿ ರಸ್ತೆಯಲ್ಲಿ ತಡರಾತ್ರಿ ನಡೆದಿದೆ. ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಗಂಭೀರ ಗಾಯಗೊಂಡಿದ್ದಾರೆ. ಅರವಟಗಿ ಗ್ರಾಮದ ಕಲ್ಲನಗೌಡ ಪಾಟೀಲ್ ಹತ್ಯೆಯಾದವರು.
ಸುನಿಲ್ ಜಕ್ಕನ್ನವರ ಎಂಬಾತ ಗಂಭೀರ ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ ಸುನೀಲ್, ಕಲ್ಲನಗೌಡ ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಯುವಕರ ಗ್ಯಾಂಗ್ ಏಕಾಏಕಿ ಅಡ್ಡಗಟ್ಟಿದೆ. ನಂತರ ರಾಡ್ ತೆಗೆದು ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ.
ತಲೆಗೆ ಗಂಭೀರ ಗಾಯವಾಗಿದ್ದರಿಂದ ರಕ್ತಸ್ರಾವವಾಗಿ ಕಲ್ಲನಗೌಡ ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾದ ಗಾಯಗೊಂಡಿರುವ ಸುನಿಲ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ದಾಳಿಗೆ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ.


