ಉಡುಪಿ: ಅಯೋಧ್ಯೆ ಬಾಲರಾಮ ಪ್ರತಿಷ್ಠಾಪನೆಯ ಮಂಡಲೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಉಡುಪಿಯ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ 48 ದಿನಗಳ ಕಾಲದ ಮಂಡಲ ಉತ್ಸವದ ನೇತೃತ್ವ ವಹಿಸಿದ್ದಾರೆ. ಪ್ರತಿದಿನ ಅಭಿಷೇಕ ಹೋಮ ಹವನ ನಡೆಯುತ್ತಿದೆ. ಫೆಬ್ರವರಿ 7ರ ನಂತರ ಬಾಲರಾಮನಿಗೆ ತೊಟ್ಟಿಲು ಸೇವೆ ನಡೆಯಲಿದೆ.
ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಮಂಡಲೋತ್ಸವ ನಡೆಯುತ್ತಿದೆ. ಪ್ರತಿದಿನ ಅಭಿಷೇಕ, ಹೋಮ ಹವನ, ಪಲ್ಲಕ್ಕಿ ಸೇವೆಗಳನ್ನು ಬಾಲರಾಮನಿಗೆ ಸಮರ್ಪಿಸಲಾಗುತ್ತಿದೆ. ಈ ನಡುವೆ ಅಯೋಧ್ಯೆಯ ಶ್ರೀರಾಮನ ತೊಟ್ಟಿಲು ಸೇವೆಗೆ ಕಾಷ್ಠಶಿಲ್ಪದಲ್ಲಿ ನಿರ್ಮಿಸಲಾದ ತೊಟ್ಟಿಲನ್ನು ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಸಮರ್ಪಿಸಲಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ಬೀಟೆ ಮರದಿಂದ ನಿರ್ಮಿಸಲಾದ ಕೆತ್ತನೆಗಳುಳ್ಳ ತೊಟ್ಟಿಲನ್ನು ಫೆಬ್ರವರಿ 7ರಂದು ಸಂಜೆ ನಡೆಯುವ ಉತ್ಸವದಲ್ಲಿ ಅರ್ಪಣೆ ಮಾಡುವುದಾಗಿ ರಘುಪತಿ ಭಟ್ ಮಾಹಿತಿ ನೀಡಿದ್ದಾರೆ. ನೂತನ ತೊಟ್ಟಿಲಿನಲ್ಲಿ ಬಾಲರಾಮ ದೇವರಿಗೆ ಪೇಜಾವರ ಸ್ವಾಮೀಜಿ ತೊಟ್ಟಿಲು ಸೇವೆ ನಡೆಸಲಿದ್ದಾರೆ.


