ಸರಗೂರು: ಹಾಡಿಯ ಜನರು ಅನಕ್ಷರತೆ,ಅಪೌಷ್ಟಿಕತೆ ಇನ್ನಿತರ ಸಮಸ್ಯೆಗಳಿಂದ ತೀವ್ರ ಹಿಂದುಳಿದಿದ್ದಾರೆ. ಪ್ರತ್ಯೇಕ ತಾಲೂಕು ಮಾಡಿ ಆರು ವರ್ಷ ಕಳೆದರು ಸಹ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೇ ಇಲ್ಲಿನ ಬಡ ಜನತೆ ನೆರಳುವಂತಾಗಿದೆ. ಇಲ್ಲಿ ಪರಿಶಿಷ್ಟ ಜಾತಿ ,ಪಂಗಡದ ಬಡಜನರೇ ಹೆಚ್ಚಾಗಿ ವಾಸಿಸುತ್ತಿದ್ದು, ಭೌಗೋಳಿಕವಾಗಿ ಬಂಡೀಪುರ ಅಭಯಾರಣ್ಯ , ನುಗು ಹಾಗೂ ಕಪಿಲಾ ನದಿಗಳು ಹರಿಯುವ ಪ್ರಾಕೃತಿಕವಾಗಿ ಸುಂದರವಾಗಿರುವ ಪ್ರದೇಶದ ಜನರ ಬದುಕು ದುಸ್ತರವಾಗಿದೆ ಎಂದು ಎಸ್ ಯುಸಿಐಸಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಟಿ.ಆರ್. ಸುನೀಲ್ ಹೇಳಿದರು.
ತಾಲ್ಲೂಕಿನ ಪಟ್ಟಣದಲ್ಲಿ ಎಸ್ ಯುಸಿಐಸಿ ಪಕ್ಷದ ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರದಂದು ಹಮ್ಮಿಕೊಂಡಿದ್ದ, ಜನರ ಜ್ವಲಂತ ಸಮಸ್ಯೆಗಳ ವಿರುದ್ಧ ದೇಶ ವ್ಯಾಪಿ ಸಹಿ ಸಂಗ್ರಹ, ಬೆಂಗಳೂರು ಚಲೋ ಪ್ರಚಾರಾಂದೋಲದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಅರಣ್ಯ ಸಂಪತ್ತು ಹಾಗೂ ಭೂಮಿಯ ಒಡೆತನ ಎಂಬುದು ಆಗರ್ಭ ಶ್ರೀಮಂತರ ಪಾಲಾಗುತ್ತಿದೆ. ಈ ಭಾಗದ ಜನರ ಮುಗ್ದತೆಯನ್ನು ಬಳಸಿಕೊಂಡು ಅನ್ಯಾಯ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಅಚ್ಚೆ ದಿನ್, ಭಾಗ್ಯಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗ್ಯಾರಂಟಿಗಳು ಕೇವಲ ಸರ್ಕಾರಿ ಕಚೇರಿಯ ಮುಂದಿನ ಜಾಹೀರಾತುಗಳಿಗೆ ಮಾತ್ರ ಸೀಮಿತವಾಗಿದೆ. ಸ್ವಚ್ಛ ಭಾರತ್ ಹೆಸರಿನಲ್ಲಿ ಸಾವಿರಾರು ಕೋಟಿ ಹಣವನ್ನು ಗ್ರಾಮೀಣ ಪ್ರದೇಶದ ಸ್ವಚ್ಛತೆ,ನೈರ್ಮಲ್ಯ, ಶೌಚಾಲಯ ನಿರ್ಮಿಸುವ ಬದಲು ಕೇವಲ ಬಿಟ್ಟಿ ಪ್ರಚಾರಕ್ಕೆ ಬಳಸಲಾಗುತ್ತಿದೆ. ಅಧಿಕಾರಿಗಳು, ಜನಪ್ರತಿನಿಧಿಗಳ ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆಗ್ರಹಿಸಿದರು.
ಮಿತಿಮೀರಿದ ಭ್ರಷ್ಟಾಚಾರ, ಸ್ವಜನ ಪಕ್ಷಪಾತಗಳಿಂದ ಸರಗೂರು ತಾಲೂಕಿನ ಸಮಗ್ರ ಅಭಿವೃದ್ಧಿ ಕುಂಠಿತಗೊಂಡಿದೆ. ಬೃಹತ್ ಪ್ರಮಾಣದ ಭೂ ಒಡೆಯರು, ರೆಸಾರ್ಟ್ ಮಾಲೀಕರು, ಮಧ್ಯವರ್ತಿಗಳ ಪರ ಕೆಲಸ ನಡೆಯುತ್ತಿತ್ತು. ಕನಿಷ್ಠ ಮೂಲಭೂತ ಸೌಕರ್ಯ ಪಡೆಯಲು ಪ್ರತಿನಿತ್ಯ ಆಧಾರ್, ಜಾತಿ ಪತ್ರ, ಬ್ಯಾಂಕ್ ಅಕೌಂಟ್, ರೇಷನ್ ಕಾರ್ಡ್ ಇನ್ನಿತರ ಅಗತ್ಯ ದಾಖಲಾತಿಗಳನ್ನು ಹೊಂದಿಸಲು ತಮ್ಮ ಕೂಲಿ ಕೆಲಸಗಳನ್ನು ಬಿಟ್ಟು ಅಲೆದರು ಸಹ ಯಾವುದೇ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ತಿಳಿಸಿದರು.
ಸರ್ಕಾರದ ಘೋಷಣೆಗಳು ಕಾಗದ ಪತ್ರಗಳ ಮೇಲೆ ಮಾತ್ರ ಕಾಣುತ್ತಿದ್ದು, ತಳ ಸಮುದಾಯದ ಬಡವರಿಗೆ ಯಾವುದೇ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ. ಈ ಭಾಗದ ಸಾಂಪ್ರದಾಯಿಕ ಅರಣ್ಯವಾಸಿಗಳು ಹಾಗೂ ಬುಡಕಟ್ಟು ಬಡಜನರ ಏಳಿಗೆ ಎಂಬುದು ಮರೀಚಿಕೆಯಾಗಿದೆ. ಹಾಗಾಗಿ ಈ ಕೆಳಕಂಡ ನಮ್ಮ ಹಕ್ಕೋತ್ತಾಯಗಳನ್ನು ಸಂಬಂಧಪಟ್ಟ ಇಲಾಖೆಯು ಗಂಭೀರವಾಗಿ ಪರಿಗಣಿಸಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ, ಸ್ಥಳೀಯ ಆಡಳಿತ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಡ ರೈತ, ಕೃಷಿಕಾರ್ಮಿಕರ ನ್ಯಾಯಯುತ ಒತ್ತಾಯಗಳನ್ನು ಆದ್ಯತೆ ಆಧಾರದ ಮೇಲೆ ಪರಿಗಣಿಸಿ ಸೂಕ್ತ ಪರಿಹಾರವನ್ನು ನೀಡಬೇಕೆಂದು ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಪರವಾಗಿ ಹಾಡಿಯ ಜನರು ತಹಸೀಲ್ದಾರ್ ರುಕೀಯಾ ಬೇಗಂ ವರಿಗೆ ಮನವಿ ನೀಡಿದರು.
ಪ್ರತಿಭಟನಾಕಾರರು ತಹಶೀಲ್ದಾರ್ ರುಕೀಯಾ ಬೇಗಂ, ವರಿಗೆ ಮನವಿ ನೀಡಿ.ತಾಲ್ಲೂಕಿನಲ್ಲಿ ಇವರು ಹಾಡಿಗಳಲ್ಲಿ ವಿವಿಧ ಸುಮಾರು ಸಮಸ್ಯೆಗಳು ಇರುವ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

ಹಕ್ಕೊತ್ತಾಯಗಳು:
ಸರಗೂರು ತಾಲೂಕಿನ ಕಾಡಂಚಿನ ಪ್ರದೇಶ ಜನರ ಸುರಕ್ಷತೆಯ ದೃಷ್ಟಿಯಿಂದ ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ರೈಲ್ವೆ ತಡೆಗೋಡೆ ಹಾಗೂ ಸೋಲಾರ್ ತಂತಿಗಳನ್ನು ಈ ಕೂಡಲೇ ಪೂರ್ಣಗೊಳಿಸಬೇಕು.ಬೆಳೆ ಹಾಗೂ ಜೀವ ಹಾನಿ ಆದ ಸಂದರ್ಭದಲ್ಲಿ ಸೂಕ್ತ ಪರಿಹಾರ ಒದಗಿಸಿ.
ಬಗರ್ ಹುಕುಂ ಸಾಗುವಳಿದಾರರಿಗೆ ಈ ಕೂಡಲೇ ಹಕ್ಕು ಪತ್ರಗಳನ್ನು ವಿತರಿಸಿ. ಸಾಗುವಳಿ ನೀಡುವವರೆಗೆ ಸರ್ಕಾರದಿಂದ ಬರುವ ಸಾಲ , ಸೌಲಭ್ಯಗಳು, ಸಬ್ಸಿಡಿ, ಎಪಿಎಂಸಿ ಗಳಲ್ಲಿ ಬೆಂಬಲ ಬೆಲೆಗೆ ರಾಗಿ ಖರೀದಿಸಲು ಕ್ರಮ ಕೈಗೊಳ್ಳಿ.
ಆದಿವಾಸಿ ಜನರಿಗೆ ನೀಡುತ್ತಿರುವ ಪೌಷ್ಟಿಕ ಆಹಾರ ಸಾಮಗ್ರಿಗಳನ್ನು ಪ್ರತಿ ತಿಂಗಳ 10ನೇ ತಾರೀಖಿನ ಒಳಗಾಗಿ ವಿತರಿಸಬೇಕು. 2023ರಲ್ಲಿ ಬಾಕಿ ಉಳಿಸಿಕೊಂಡಿರುವ ಆಹಾರ ಸಾಮಗ್ರಿಗಳನ್ನು ಫೆಬ್ರವರಿ ತಿಂಗಳಿಂದ ಹೆಚ್ಚುವರಿ ಆಗಿ ವಿತರಿಸಬೇಕು. ಹೊಸ ಕುಟುಂಬಗಳನ್ನು ಸೇರಿಸಿಕೊಳ್ಳಬೇಕು.
ಸರಗೂರು ತಾಲೂಕು ಆಸ್ಪತ್ರೆ ಹಾಗೂ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ಅವಶ್ಯಕ ಮೂಲ ಸೌಕರ್ಯಗಳನ್ನು ಒದಗಿಸಿ.
ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ ಹಾಗೂ ಶಿಕ್ಷಕರ ನೇಮಕ ಮಾಡಿಕೊಳ್ಳಿ. ಎನ್ ಇಪಿ ರದ್ದು ಮಾಡಿ.
ಅರಣ್ಯ ಹಕ್ಕು ಕಾಯ್ದೆ 2006ನ್ನು ಸಮರ್ಪಕವಾಗಿ ಜಾರಿಗೆ ತನ್ನಿ. ಗಣಿಗಾರಿಕೆ, ಅರಣ್ಯ ಪ್ರವಾಸೋದ್ಯಮ ಮೊದಲಾದ ಖಾಸಗಿ ಉದ್ಯಮಗಳಿಗೆ ಪೂರಕವಾಗುವಂತೆ ಕೇಂದ್ರವು ಜಾರಿಗೆ ತಂದ ಅರಣ್ಯ ಸಂರಕ್ಷಣಾ ಕಾಯಿದೆಯ ತಿದ್ದುಪಡಿಯನ್ನು ರದ್ದು ಮಾಡಿ. ಆದಿವಾಸಿಗಳ ಹಕ್ಕುಗಳನ್ನು ರಕ್ಷಿಸಿ. ಜೀವನೋಪಾಯಕ್ಕಾಗಿ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಅವಕಾಶ ನೀಡಿ. ಆದಿವಾಸಿಗಳ ಮೇಲಿನ ದೌರ್ಜನ್ಯ ಕಿರುಕುಳವನ್ನು ನಿಲ್ಲಿಸಬೇಕು.
ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಜಾಬ್ ಕಾರ್ಡ್ ಇಲ್ಲದವರಿಗೆ ಜಾಬ್ ಕಾರ್ಡ್ ನೀಡಿ. ಕೂಲಿಯನ್ನು 600ರೂ ಹಾಗೂ 200 ದಿನಗಳಿಗೆ ವಿಸ್ತರಿಸಿ.
ವಿದ್ಯುತ್ (ತಿದ್ದುಪಡಿ)ಮಸೂದೆ – 2020ನ್ನು ರದ್ದುಗೊಳಿಸಿ. ಆದಿವಾಸಿ ಹಾಡಿಗಳಲ್ಲಿ ಕಡಿತಗಳಿಸಿರುವ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿ. ಹಳೆ ಬಾಕಿ ವಿದ್ಯುತ್ ಬಿಲ್ ಮನ್ನಾ ಮಾಡಿ. ವಿದ್ಯುತ್ ಸಂಪರ್ಕವಿಲ್ಲದ ಹಾಡಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿ.
ಬುಡಕಟ್ಟು ಜನರು ವಾಸಿಸುವ ಹಾಡಿಗಳನ್ನು ಕಂದಾಯ ಗ್ರಾಮಗಳನ್ನಾಗಿಸಿ ವಸತಿ ಹಾಗೂ ನಿವೇಶನಕ್ಕೆ ಹಕ್ಕುಪತ್ರ ವಿತರಿಸಿ.
ಆದಿವಾಸಿ ಹಾಗೂ ಭೂಹೀನ ಬಡಜನರಿಗೆ ಕೃಷಿ ಭೂಮಿ ನೀಡಿ. ಬಿದರಹಳ್ಳಿ ಸರ್ಕಲ್ ನೆರೆಸಂತ್ರರಿಗೆ ಪುನರ್ವಸತಿ ಕಲ್ಪಿಸಿ. ಮನೆ ನಿರ್ಮಿಸಿ ಹಾಗೂ ನಿವೇಶನಕ್ಕೆ ಹಕ್ಕು ಪತ್ರ ವಿತರಿಸಿ.ಎಲ್ಲಾ ವಸತಿ ಹೀನ ಬಡ ಜನರಿಗೆ ವಸತಿ ಹಾಗೂ ನಿವೇಶನ ಒದಗಿಸಿ. ಕಳೆದ ಎರಡು ವರ್ಷಗಳಿಂದ ನೆರೆಯಿಂದ ಮನೆ ಕಳೆದುಕೊಂಡ ಅರ್ಹ ನೆರೆ ಸಂತ್ರಸ್ತರನ್ನು ಆಯ್ಕೆ ಮಾಡಿ RGCHL ಲಾಗಿನ್ ನಿಂದ ಕೈಬಿಡಲಾಗಿರುವ ನೆರೆಸಂತ್ರಸ್ಥರಿಗೆ ವಾಸಿಸಲು ಮನೆ ಇಲ್ಲದೆ ಅತಂತ್ರವಾಗಿರುವ ನೆರೆಸಂತ್ರಸ್ಥರಿಗೆ ಸೂರು ಕಲ್ಪಿಸಿ ವಸತಿ ಸೌಲಭ್ಯ ಒದಗಿಸಬೇಕು.
ಸ್ತ್ರೀ ಭ್ರೂಣ ಹತ್ಯೆ, ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಕಡಿವಾಣ ಹಾಕಿ. ಇಂತಹ ಪ್ರಕರಣಗಳ ಶೀಘ್ರ ತನಿಖೆ ನಡೆಸಿ, ಕಠಿಣ ಶಿಕ್ಷೆ ವಿಧಿಸಿ.
ಎಲ್ಲಾ ಗ್ರಾಮಗಳು ಹಾಗೂ ಹಾಡಿಗಳಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ಚರಂಡಿ,ರಸ್ತೆ, ಶೌಚಾಲಯ, ಸ್ಮಶಾನ, ಸಮೂದಾಯ ಭವನಗಳನ್ನು ನಿರ್ಮಿಸಿ.
1952 ನುಗು ಅಣೆಕಟ್ಟು ನಿರ್ಮಾಣ ಹಾಗೂ 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಿಂದಾಗಿ ನಿರಾಶ್ರಿತರಾದ ಯಶವಂತಪುರ ಹಾಡಿ,ಹೆತ್ತಿಗೆ ಹಾಡಿ,ಎಂ. ಸಿ ತಳಲು ಹಾಡಿ, ಅಳಲಹಳ್ಳಿ ಹಾಡಿಗಳಿಂದ 152 ಜನ ಅರ್ಜಿ ಸಲ್ಲಿಸಿದ್ದು,ಲಕ್ಷ್ಮಣಪುರ ಸರ್ವೇ ನಂಬರ್ 17.21. ಹಾಗೂ 30 ರ ಭೂಮಿಯನ್ನು ಜಂಟಿ ಸರ್ವೆಮಾಡಿ. ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದರು.
ನಂತರ ತಹಸೀಲ್ದಾರ್ ರುಕೀಯಾ ಬೇಗಂ ಮಾತನಾಡಿ, ಒಂದು ವಾರದಿಂದ ಹಾಡಿಗಳ ಮನೆ ಮನೆಗೆ ತೆರಳಿ ವಿವಿಧ ಇಲಾಖೆ ಅಧಿಕಾರಿಗಳ ಜೊತೆಗೂಡಿ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನೋಂದಣಿ ಕಂದಾಯ ಇಲಾಖೆ ನಮ್ಮ ಅಧಿಕಾರಿಗಳು ಸ್ಥಳಕ್ಕೆ ಭೇಟಿ ವಾಸಸ್ಥಳ ದೃಢೀಕರಣ ಪತ್ರವನ್ನು ಸ್ಥಳದಲ್ಲೇ ಮಾಡಿಸಿಕೊಟ್ಟಿದ್ದೀವಿ. ಮತ್ತೆ ಬೇರೆ ಇಲಾಖೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ. ನಮ್ಮ ಮೇಲ್ಪಟ್ಟ ಅಧಿಕಾರಿಗಳ ಸೂಚನೆಯಂತೆ ಕ್ರಮ ವಹಿಸಿದ್ದೇವೆ. ನಾವುಗಳು ಪರಿಶೀಲನೆ ನಡೆಸಿ ವರದಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ. ಜಿಲ್ಲಾಧಿಕಾರ ಮೂಲಕ ಅನುದಾನವನ್ನು ಬಿಡುಗಡೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆ ಗೊಳಿಸುವ ಅಂತದಲ್ಲಿ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ ಯುಸಿಐಸಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯೆ ಪುಷ್ಪ, ಸರಗೂರು ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ಸರಗೂರು ಕೃಷ್ಣ, ದಸಂಸ (ಅಂಬೇಡ್ಕರ್ ವಾದ) ತಾಲ್ಲೂಕು ಸಂಚಾಲಕ ಕೂಡಗಿ ಗೋವಿಂದರಾಜು, ಪುಟ್ಟಹನುಮಯ್ಯ,ಹಾಡಿಯ ಮಾದಮ್ಮ, ಮಾರಮ್ಮ ಗೌರಿ, ಗಂಗಾ,ಮಾಚಮ್ಮ, ಸೀರಮ್ಮ, ತಾಲ್ಲೂಕು ಅಧಿಕಾರಿಗಳು ಪರಿಶಿಷ್ಟ ಪಂಗಡ ಸಾಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾಗರಾಜ್, ತಾಲ್ಲೂಕು ಪಂಚಾಯಿತಿ ಸಂಯೋಜಕ ಅಧಿಕಾರಿ ಮಹದೇವಸ್ವಾಮಿ, ಗ್ರೇಡ್ 2 ತಹಸೀಲ್ದಾರ್ ಪರಶಿವಮೂರ್ತಿ, ಉಪತಹಸೀಲ್ದಾರ್ ಸುನೀಲ್, ಶೀರದ್ತಾರ್ ಗುರುರಾಜು, ಇನ್ನೂ ಮುಖಂಡರು ಹಾಗೂ ಅಧಿಕಾರಿಗಳು ಸೇರಿದಂತೆ ಭಾಗಿಯಾಗಿದ್ದರು.
ವರದಿ: ಹಾದನೂರು ಚಂದ್ರ


