ಚಾಮರಾಜನಗರ: ಪತ್ನಿ ‘ಉಪೇಂದ್ರ’ ಚಿತ್ರದ ಓ ನಲ್ಲ.. ನೀನಲ್ಲ, ಕರಿಮಣಿ ಮಾಲೀಕ ನೀನಲ್ಲ ಹಾಡಿನ ರೀಲ್ಸ್ ಮಾಡಿದ್ದರಿಂದ ನೊಂದ ಪತಿಯೋರ್ವ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಘಟನೆ ಚಾಮರಾಜನಗರದ ಹನೂರು ಪ್ರದೇಶದಲ್ಲಿ ನಡೆದಿದೆ.
ಪಿ.ಜಿ.ಪಾಳ್ಯ ಗ್ರಾಮದ ಕುಮಾರ್(34) ಸಾವನ್ನಪ್ಪಿದವರಾಗಿದ್ದಾರೆ. ಕುಮಾರ್ ಅವರ ಪತ್ನಿ ರೂಪಾ ಇತ್ತೀಚಿಗೆ ತಮ್ಮ ಸೋದರಮಾವ ಹಾಗೂ ಸಹೋದರಿ ಜತೆಗೆ ಸೇರಿ ಓ ನಲ್ಲ, ನೀನಲ್ಲ.. ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು.
ಈ ರೀಲ್ಸ್ ವಿಚಾರವನ್ನು ಮುಂದಿಟ್ಟುಕೊಂಡು ಕೆಲವರು ಕರಿಮಣಿ ಮಾಲಿಕ ಯಾರು ಅಂತ ಕುಮಾರ್ ಅವರ ಕಾಲೆಳೆದಿದ್ದಾರೆನ್ನಲಾಗಿದೆ. ಇದರಿಂದ ನೊಂದು ಕುಮಾರ್ ಸಾವಿಗೆ ಶರಣಾಗಿದ್ದಾರೆನ್ನಲಾಗಿದೆ.
ಸಾವಿಗೂ ಮುನ್ನ ಕುಮಾರ್ ಯಾವುದೇ ಡೆತ್ ನೋಟ್ ಬರೆದಿಲ್ಲ ಎನ್ನಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


