ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮಂಡಿಸಿದ ಕರ್ನಾಟಕ ರಾಜ್ಯ ಬಜೆಟ್ 2024 ಅನ್ನು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಹಾಡಿ ಹೊಗಳಿದ್ದಾರೆ. ಆದರೆ ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಎಸ್ ಟಿ ಸೋಮಶೇಖರ್ ಅವರು ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಅನ್ನು ಸ್ವಾಗತಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸೋಮಶೇಖರ್, ಈ ಬಾರಿಯ ಬಜೆಟ್ 7 ಕೋಟಿ ಜನರ ಬಜೆಟ್ ಆಗಿದೆ. ನಾನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಬೆಂಗಳೂರಿನ ಬಗ್ಗೆ ಮಾತ್ರ ಮಾತನಾಡುತ್ತೇನೆ. ಬೆಂಗಳೂರಿಗೆ ಸಿಎಂ ಸಿದ್ದರಾಮಯ್ಯ ಅವರು ನಂಬರ್ ಒನ್ ಬಜೆಟ್ ಕೊಟ್ಟಿದ್ದಾರೆ. ಬೆಂಗಳೂರು ಬಿಟ್ಟು ಹೊರಗೆ ಏನಿದೆ ಎಂದು ನೋಡಿಲ್ಲ ಎಂದಿದ್ದಾರೆ.
ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ 5 ಕಸದ ಘಟಕಗಳು ಇದ್ದವು. ಅವುಗಳನ್ನು ಹೊರಗೆ ಹಾಕುವ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖಿಸಿದ್ದಾರೆ. ನನ್ನ ಕ್ಷೇತ್ರಕ್ಕೆ ಕುಡಿಯುವ ಕೊಟ್ಟಿದ್ದಾರೆ. 110 ಹಳ್ಳಿಗಳಿಗೆ ಕಾವೇರಿ ನೀರಿನ ಸೌಲಭ್ಯ ಮಾಡುವ ಭರವಸೆ ನೀಡಿದ್ದಾರೆ. ಸಂಚಾರ ಸಮಸ್ಯೆ ನಿವಾರಣೆ ಬಗ್ಗೆ ಹೇಳಿದ್ದಾರೆ. ವೈಟ್ ಟ್ಯಾಪಿಂಗ್ ಕ್ಲಿಯರ್ ಮಾಡುವ ಬಗ್ಗೆ ಬಜೆಟ್ ನಲ್ಲಿ ತಿಳಿಸಿದ್ದಾರೆ. ಜನರ ಸಂಕಷ್ಟ ನಿವಾರಣೆಗೆ ಸಿಎಂ ಕ್ರಮ ತೆಗೆದುಕೊಂಡಿದ್ದಾರೆ ಎಂದು ಸೋಮಶೇಖರ್ ಹೇಳಿಕೆ ನೀಡಿದ್ದಾರೆ.


