ಮಣಿಪುರದಲ್ಲಿ ಮತ್ತೆ ಸಂಘರ್ಷ. ಕಾಕ್ಚಿಂಗ್ ಜಿಲ್ಲೆಯಲ್ಲಿ ಬಿಎಸ್ ಎಫ್ ಯೋಧರ ಮೇಲೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಓರ್ವ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಕೋರರು ಅನಿರೀಕ್ಷಿತವಾಗಿ ಬಿಎಸ್ ಎಫ್ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಮೂರು ದಿನಗಳಿಂದ ಈ ಪ್ರದೇಶದಲ್ಲಿ ದಾಳಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚುರಾಚಂದ್ ಪುರ ಮತ್ತು ಚಂದೇಲ್ ನ ಗಡಿಭಾಗದಲ್ಲಿರುವ ಪ್ರಕ್ಷುಬ್ಧ ಪ್ರದೇಶವಾದ ಸುಗ್ನು ಎಂಬಲ್ಲಿ ಶನಿವಾರ ಈ ಘಟನೆ ನಡೆದಿದೆ. ಹಿಮಾಚಲ ಮೂಲದ ಹೆಡ್ ಕಾನ್ ಸ್ಟೆಬಲ್ ಸೋಮ್ ದತ್ (45) ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ. ದತ್ ಅವರ ಎಡ ಭುಜಕ್ಕೆ ಗುಂಡು ತಗುಲಿದ್ದು, ಇಂಫಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಾಯದಿಂದ ಪಾರಾಗುವ ಸೂಚನೆ ಸಿಕ್ಕಿದೆ.


