ಕಲಬುರಗಿ: ಜಿಲ್ಲೆಯ ಚಿಂಚೊಳ್ಳಿ ತಾಲೂಕಿನ ಮಿರಿಯಾಣ ಬಳಿ ಕೆಟ್ಟು ನಿಂತಿದ್ದ ಸಿಮೆಂಟ್ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಬಿಜೆಪಿ ಮುಖಂಡ ಕೃಷ್ಣ ಲಕ್ಷ್ಮಣ (35) ಮೃತ ದುರ್ದೈವಿಯಾಗಿದ್ದಾರೆ.
ಮಾರ್ಗದಲ್ಲೇ ಸಿಮೆಂಟ್ ಲಾರಿಯು ಕೆಟ್ಟು ನಿಂತಿತ್ತು. ಈ ಮಾರ್ಗವಾಗಿ ಬುಲೆಟ್ ಬೈಕ್ ನಲ್ಲಿ ಬರುತ್ತಿದ್ದ ಬಿಜೆಪಿ ಮುಖಂಡ ಕೃಷ್ಣ ಲಕ್ಷ್ಮಣ ಅವರಿಗೆ ರಸ್ತೆ ಬದಿ ನಿಂತಿದ್ದ ಲಾರಿ ಕಂಡಿಲ್ಲ. ವೇಗವಾಗಿ ಬರುತ್ತಿದ್ದ ಅವರು ನೇರವಾಗಿ ಲಾರಿ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿ, ರಕ್ತಸ್ರಾವವಾಗಿ ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಮಿರಿಯಾಣ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಚಿಂಚೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


