ಕಲಬುರಗಿ: 2017ರ ಅಟ್ರಾಸಿಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಕಲಬುರಗಿಯ ಎರಡನೇ ಹೆಚ್ಚುವರಿ ನ್ಯಾಯಲಯದಿಂದ ವಾರೆಂಟ್ ಜಾರಿಗೊಳಿಸಿತ್ತು. ಕೋರ್ಟ್ನಿಂದ ವಾರೆಂಟ್ ಜಾರಿಯಾದರೂ ಸಹ ನ್ಯಾಯಾಲಯಕ್ಕೆ ಹಾಜರಾಗದ ಆರೋಪದ ಮೇಲೆ ಜೈ ಭಾರತ್ ಮಾತಾ ಸೇವಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ, ನಿರಗುಡಿ ಹವಾ ಮಲ್ಲಿನಾಥ್ ಮುತ್ಯಾನನ್ನು, ಕೋರ್ಟ್ಗೆ ಹಾಜರಾದ ಸಂದರ್ಭದಲ್ಲಿ ಎಂ.ಬಿ ನಗರ ಪೊಲೀಸರು ಬಂಧಿಸಿದ್ದಾರೆ.
ದಲಿತ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ ಸಹಕರಿಸಿದ ಆರೋಪ ಮಲ್ಲಿನಾಥ ಮುತ್ಯಾ ಮೇಲೆ ಇದೆ. 2017ರಲ್ಲಿ ಯುವತಿಗೆ ವಂಚನೆ ಮಾಡಿದ ಆರೋಪದಲ್ಲಿ ಪ್ರಕಾಶ್ ಸ್ವಾಮೀಜಿ ಹಾಗೂ ಹವಾ ಮಲ್ಲಿನಾಥ್ ಮುತ್ಯಾನ ಮೇಲೆ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧ ಮಲ್ಲಿನಾಥ್ ಮುತ್ಯಾನಿಗೆ ನ್ಯಾಯಲಯ ನೋಟಿಸ್ ನೀಡಿತು. ಆದರೂ ಮುತ್ಯಾ ನ್ಯಾಯಾಲಯದ ಮುಂದೆ ಹಾಜರಾಗಿರಲಿಲ್ಲ. ವಾರೆಂಟ್ ಜಾರಿಗೊಂಡ ಹಿನ್ನೆಲೆ ಸೋಮವಾರ ಕೋರ್ಟ್ ಮುಂದೆ ಹವಾ ಮಲ್ಲಿನಾಥ್ ಮುತ್ಯಾ ಹಾಜರಾಗಿದ್ದರು. ಆಗ ಮಲ್ಲಿನಾಥ್ ಮುತ್ಯಾನನ್ನು ವಶಕ್ಕೆ ಪಡೆದ ನ್ಯಾಯಾಲಯ ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ತಿಳಿದು ಬಂದಿದೆ.
“ಕಲಬುರಗಿಯ ಹವಾ ಮಲ್ಲಿನಾಥ ಮುತ್ಯಾ ಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ” ಎಂದು ಕಲಬುರಗಿ 2ನೇ ಜಿಲ್ಲಾ ಸತ್ರ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ.


