ಉತ್ತರ ಪ್ರದೇಶದ ರಾಜಕೀಯದಲ್ಲಿ ಮಹಾನ್ ಸಂಚಲನ ಎದುರಾಗುವ ಲಕ್ಷಣಗಳು ಕಂಡುಬರುತ್ತಿದ್ದು ದೇಶದ ಪ್ರಭಾವಿ ಸಿಎಂ ಆಗಿರುವ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ವೇದಿಕೆ ಸಜ್ಜಾಗಿದೆ ಎನ್ನಲಾಗಿದೆ.
ಇದಕ್ಕೆ ಕಾರಣ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಮಾಡಿರುವ ಟ್ವೀಟ್. ಈ ಟ್ವೀಟ್ ಮುಂದೆ ರಾಜಕೀಯದಲ್ಲಾಗುವ ಬಹು ದೊಡ್ಡ ಬದಲಾವಣೆಯ ಸುಳಿವು ನೀಡಿದಂತಿದೆ. ಅಲ್ಲದೆ ಯೋಗಿ ಆದಿತ್ಯನಾಥ್ ರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ವೇದಿಕೆ ಸಜ್ಜಾಗುತ್ತಿದೆಯಾ ಎಂಬ ಪ್ರಶ್ನೆ ಮೂಡಿದೆ.
ಕೇಶವ್ ಪ್ರಸಾದ್ ಮೌರ್ಯ ಮಾಡಿದ ಟ್ವೀಟ್ ಏನು?
“ಸಂಘಟನೆ, ಸರ್ಕಾರಕ್ಕಿಂತಲೂ ದೊಡ್ಡದು. ಎಲ್ಲ ಕಾರ್ಯಕರ್ತರ ನೋವು ನನ್ನ ನೋವೂ ಆಗಿದೆ. ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ. ಕಾರ್ಯಕರ್ತರೇ ನಮ್ಮ ಹೆಮ್ಮೆ” ಎಂದು ಹೇಳಿಕೊಂಡಿದ್ದಾರೆ. ಇದು ಉತ್ತರ ಪ್ರದೇಶ ರಾಜಕೀಯದಲ್ಲಿ ಬೀಸುವ ಬದಲಾವಣೆಯ ಗಾಳಿಯ ಸುಳಿವು ನೀಡಿದಂತಿದೆ.
ಅಲ್ಲದೆ ಕಾಕಾತಾಳೀಯವೆಂಬಂತೆ ಮೌರ್ಯ ಅವರು ಮಂಗಳವಾರದಂದು ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲದೆ ನಡ್ಡಾ ಅವರು ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದರ್ ಚೌಧರಿ ಅವರನ್ನು ಕೂಡ ಇದೇ ಸಂದರ್ಭದಲ್ಲಿ ಭೇಟಿ ಮಾಡಿದ್ದರು. ಈ ಭೇಟಿ ಬಳಿಕ ಕೇಶವ್ ಪ್ರಸಾದ್ ಮೌರ್ಯ ಈ ಪೋಸ್ಟ್ ಹಾಕಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿದ್ದು, ಈ ಕಾರಣಕ್ಕಾಗಿಯೇ ಯೋಗಿ ಆದಿತ್ಯನಾಥ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉತ್ತರ ಪ್ರದೇಶ ಸಿಎಂ ಸ್ಥಾನದಿಂದ ಯೋಗಿ ಆದಿತ್ಯನಾಥ್ ಅವರನ್ನು ಕೆಳಗಿಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದು, ಅದು ಈಗ ನಿಜವಾಗುತ್ತದಾ ಎಂಬ ಪ್ರಶ್ನೆ ಕೂಡ ಈಗ ರಾಜಕೀಯ ವಲಯದಲ್ಲಿ ಮೂಡಿದೆ.
ಆದರೆ ಯೋಗಿ ಆದಿತ್ಯನಾಥ್ ಅವರನ್ನು ಅಷ್ಟು ಸುಲಭವಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು ಸಾಧ್ಯವಾಗುತ್ತದಾ? ಮೋದಿ ಬಳಿಕ ಅವರೇ ದೇಶದ ಪ್ರಧಾನಿ ಆಗುತ್ತಾರೆ ಎಂದೆಲ್ಲಾ ಬಣ್ಣಿಸಲಾಗಿತ್ತು. ಹೀಗಾಗಿ ಹೈಕಮಾಂಡ್ ಈ ನಿರ್ಧಾರ ತಾಳಲು ಸಾಧ್ಯವೇ? ಎಂಬ ಪ್ರಶ್ನೆ ಸಹ ಕೇಳಿ ಬರುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA