ಮಧುಗಿರಿ : ಬಾಲ್ಯಾವಸ್ಥೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಇತರರಿಗೆ ರಕ್ತದಾನ ಮಾಡಲು ರಕ್ತ ಪರೀಕ್ಷೆ ಬಹಳ ಮುಖ್ಯ ಎಂದು ಮಾಜಿ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮಿಡಿಗೇಶಿಯ ಕೆಪಿಎಸ್ ಶಾಲೆಯಲ್ಲಿ ಸಾರ್ವಜನಿಕ ಆಸ್ಪತ್ರೆ ಮಧುಗಿರಿ, ಶ್ರೀ ರಾಘವೇಂದ್ರ ಆಸ್ಪತ್ರೆ, ಗುರುಶ್ರೀ ಆಸ್ಪತ್ರೆ, ಹಾಗೂ ಶ್ರೀ ಸತ್ಯಸಾಯಿ ಆಸ್ಪತ್ರೆ ಮಧುಗಿರಿ ಇವರ ಸಹಯೋಗದಲ್ಲಿ ಸುತ್ತಲಿನ ಹತ್ತಾರು ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ರಕ್ತ ಪರೀಕ್ಷೆ ನಡೆಸಿ ಮಾತನಾಡಿ, ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಶಿಕ್ಷಣದಲ್ಲಿ ಇನ್ನಷ್ಟು ಸಾಧನೆ ಮಾಡಲು ಪ್ರೇರೇಪಿಸುವ ಉದ್ದೇಶದಿಂದ ಇಂದು ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ಉಚಿತ ರಕ್ತ ಪರೀಕ್ಷಾ ಶಿಬಿರವನ್ನು ಆಯೋಜಿಸಲಾಗಿದೆ.
ರಕ್ತ ಪರೀಕ್ಷೆ ಉದ್ದೇಶವನ್ನು ನೀವು ತಿಳಿಯಬೇಕಿದ್ದು, ಅಪಘಾತ ಹಾಗೂ ಶಸ್ತ್ರಚಿಕಿತ್ಸೆ ಸಮಯದಲ್ಲಿ ಗಾಯಾಳುಗಳಿಗೆ ನೆರವಾಗಲು ಅಥವಾ ಸ್ವತಃ ನಿಮಗೇ ರಕ್ತದ ನೆರವು ಬೇಕಾದಲ್ಲಿ ರಕ್ತದ ಗುಂಪಿನ ಬಗ್ಗೆ ತಿಳಿದಿರಬೇಕು. ಇದು ಬಹಳ ಮುಖ್ಯ. ಹಾಗೂ ರಕ್ತದಾನ ಮಾಡಲು ನಿಮಗೆ ಇದು ಸಹಕಾರಿಯಾಗಲಿದೆ. ರಕ್ತ ದಾನಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಹಾಗೆಯೇ ರಕ್ತ ಉತ್ಪಾದನೆಯಾಗಲು ಪೌಷ್ಟಿಕಾಂಶ ಆಹಾರ ಸೇವಿಸಬೇಕು. ನೀವು ಆರೋಗ್ಯವಾಗಿದ್ದು, ಸಮಾಜವನ್ನು ಆರೋಗ್ಯಕರವಾಗಿ ಇಡಲು ರಕ್ತ ಬಹಳ ಮುಖ್ಯ. ಅಂತಹ ರಕ್ತದ ಬಗ್ಗೆ ನೀವು ತಿಳಿದಿರಬೇಕು. ಈ ವರ್ಷ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದು, ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಹಿಂದೆ ವಿದ್ಯಾರ್ಥಿಗಳಿಗೆ ಆರೋಗ್ಯದ ಮಾಹಿತಿಗಳು ಸುಲಭವಾಗಿ ತಿಳಿಯುತ್ತಿರಲಿಲ್ಲ. ಆದರೆ ಈಗ ರಕ್ತ ಪರೀಕ್ಷೆಯಂತಹ ಶಿಬಿರಗಳ ಮೂಲಕ ತಮ್ಮ ಆರೋಗ್ಯದ ಸ್ಥಿತಿಯನ್ನು ಕೆಲವೇ ನಿಮಿಷಗಳಲ್ಲಿ ತಿಳಿದುಕೊಳ್ಳುವ ಅವಕಾಶ ದೊರೆಯುತ್ತಿದೆ. ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡುವ ಗುರಿಯನ್ನು ಹೊಂದಬೇಕು ಎಂದು ಕರೆ ನೀಡಿದರು.
ಮೊಬೈಲ್ ಬಳಕೆ ಮಿತಿಗೊಳಿಸಿ, ದಿನಪತ್ರಿಕೆಗಳು ಹಾಗೂ ಪುಸ್ತಕಗಳ ಓದಿನ ಕಡೆ ಹೆಚ್ಚು ಗಮನ ಹರಿಸಬೇಕು. ಮುಂದೆ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ತಿಳಿಸಿದರು.
ಪಿಡಿಓ ರಂಗನಾಥ್ ಮಾತನಾಡಿ, ಅನೇಕ ವಿದ್ಯಾರ್ಥಿಗಳಿಗೆ ತಮ್ಮ ರಕ್ತದ ಗುಂಪಿನ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಈ ಶಿಬಿರದಿಂದ ಎಲ್ಲ ವಿದ್ಯಾರ್ಥಿಗಳಿಗೂ ತಮ್ಮ ರಕ್ತದ ಗುಂಪು ಹಾಗೂ ಆರೋಗ್ಯದ ಬಗ್ಗೆ ಅರಿವು ಮೂಡಲಿದೆ ಎಂದರು.
ಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕರು ಇಂದು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ನೀವು ಕೂಡ ಸರ್ಕಾರಿ ಶಾಲೆ ಎಂಬ ಕೀಳಿರಿಮೆ ತೊರೆದು ಸಾಧನೆಯತ್ತ ಗಮನಹರಿಸಿ ಎಂದರು.
ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಮಲ್ಲಿಕಾರ್ಜುನಯ್ಯ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣದ ಅವಕಾಶ ದೊರೆಯುತ್ತಿರುವುದು ಸರ್ಕಾರಿ ಶಾಲೆಗಳ ಮೂಲಕವೇ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಶಿಕ್ಷಣವೇ ಪ್ರಮುಖ ಸಾಧನವಾಗಿದೆ. ಹುಟ್ಟು ಮತ್ತು ಸಾವಿನ ನಡುವಿನ ಜೀವನದಲ್ಲಿ ನಾವು ಏನು ಸಾಧನೆ ಮಾಡಿದ್ದೇವೆ ಎಂಬುದೇ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಶಿವಕುಮಾರ್, ಮಧುಗಿರಿ ಸಾರ್ವಜನಿಕ ಆಸ್ಪತ್ರೆಯ ನಾಗೇಂದ್ರ, ಮುಖ್ಯಶಿಕ್ಷಕಿ ಹೇಮಾವತಿ, ಸತ್ಯಸಾಯಿ ಆಸ್ಪತ್ರೆಯ ರಘುನಂದನ್, ಶಾಲೆಯ ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




