ಸರಗೂರು: ಇಲ್ಲಿನ ಪಟ್ಟಣದ ಬಸ್ ನಿಲ್ದಾಣದ ಮುಖ್ಯದ್ವಾರದಲ್ಲಿ ಸೋಮವಾರ ಸಂಜೆ ಕೆಎಸ್ಆರ್ಟಿಸಿ ಬಸ್ ಹರಿದು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಸಂಭವಿಸಿದೆ.
ಕಾಳಹುಂಡಿ ಗ್ರಾಮದ ಜಯಮ್ಮ ಗಾಯಗೊಂಡ ದುರ್ದೈವಿ. ಅಪಘಾತದ ಭೀಕರ ದೃಶ್ಯ ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ.
ಗಾಯಾಳು ಜಯಮ್ಮ ಅವರು ತಮ್ಮ ಸಂಬಂಧಿಕರೊಂದಿಗೆ ಬೆಂಗಳೂರಿನಲ್ಲಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಊರಿಗೆ ಮರಳುತ್ತಿದ್ದರು. ಸರಗೂರು ಬಸ್ ನಿಲ್ದಾಣದಿಂದ ಚಿಕ್ಕಬರಗಿ ಮಾರ್ಗವಾಗಿ ಕಾಳಹುಂಡಿ ಗ್ರಾಮಕ್ಕೆ ತೆರಳುವ ಬಸ್ ಹತ್ತಲು ಮುಂದಾಗಿದ್ದಾರೆ. ಈ ವೇಳೆ ಬಸ್ನಲ್ಲಿ ಸಾರ್ವಜನಿಕರ ದಟ್ಟಣೆ ಹೆಚ್ಚಾಗಿತ್ತು ಎನ್ನಲಾಗಿದೆ. ಪ್ರಯಾಣಿಕರು ಪೂರ್ಣವಾಗಿ ಹತ್ತುವ ಮುನ್ನವೇ ಚಾಲಕ ಅಜಾಗರೂಕತೆಯಿಂದ ಬಸ್ ಚಲಾಯಿಸಿದ್ದರಿಂದ, ಜಯಮ್ಮ ಅವರು ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಬಸ್ಸಿನ ಮುಂಭಾಗದ ಟೈರ್ ಜಯಮ್ಮ ಅವರ ಕಾಲಿನ ಮೇಲೆ ಹರಿದಿದ್ದು, ಚರ್ಮ ಹಾಗೂ ಮೂಳೆ ಸಂಪೂರ್ಣವಾಗಿ ಹೊರಬಂದು ಗಂಭೀರ ಸ್ವರೂಪದ ಗಾಯಗಳಾಗಿವೆ.
ಘಟನೆಗೆ ಬಸ್ ಚಾಲಕನ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯೇ ನೇರ ಕಾರಣ ಎಂದು ಆರೋಪಿಸಿ ಜಯಮ್ಮ ಅವರ ಪತಿ ಮಾದೇಗೌಡ ಅವರು ಸರಗೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಚಾಲಕನ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಒತ್ತಾಯಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾರದ ಅಂಬುಲೆನ್ಸ್!
ಅಪಘಾತ ನಡೆದು ಒಂದು ಗಂಟೆ ಕಳೆದರೂ 108 ಅಂಬುಲೆನ್ಸ್ ಸ್ಥಳಕ್ಕೆ ಆಗಮಿಸದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ತಾಲೂಕು ಕೇಂದ್ರದಲ್ಲೂ ಒಂದು ತುರ್ತು ವಾಹನ ಸಿಕದೇ ಇರುವುದಕ್ಕೆ ಬಸ್ ನಿಲ್ದಾಣದಲ್ಲಿದ್ದ ಸಾರ್ವಜನಿಕರು ಆಡಳಿತ ವ್ಯವಸ್ಥೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸದ್ಯ ಗಾಯಾಳು ಜಯಮ್ಮ ಅವರನ್ನು ಸ್ಥಳೀಯ ಸ್ವಾಮಿ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ.
ಸರಗೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




