ಕುಣಿಗಲ್: ಮನೆಯ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿ, ಆ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಖತರ್ನಾಕ್ ಕಳ್ಳ ದಂಪತಿಯನ್ನು ಕುಣಿಗಲ್ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬೆಂಗಳೂರಿನ ರಾಮಚಂದ್ರಪುರ ನಿವಾಸಿಗಳಾದ ಮಂಜುನಾಥ್ ಅಲಿಯಾಸ್ ಕೋಳಿ ಫಯಾಜ್ (40) ಹಾಗೂ ಆತನ ಪತ್ನಿ ಅನಿತಾ (36) ಬಂಧಿತ ಆರೋಪಿಗಳು.
ಬಂಧಿತರಿಂದ 30 ಗ್ರಾಂ ಚಿನ್ನದ ಬಳೆಗಳು, ಒಂದು ಕಾರು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹೊಂಚು ಹಾಕಿ 30 ಲಕ್ಷ ರೂ. ದೋಚಿದ್ದ ಕಳ್ಳ!
ಕುಣಿಗಲ್ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲನಿಯ ನಿವಾಸಿ ರಿಜ್ವಾನ್ ಎಂಬುವವರ ಕುಟುಂಬವು ಮೇ 28ರ ಬಕ್ರೀದ್ ಹಬ್ಬ ಮುಗಿಸಿ, ಮೇ 29ರಂದು ಮಾಗಡಿ ತಾಲೂಕಿನ ಮರೂರು ಹ್ಯಾಂಡ್ ಪೋಸ್ಟ್ನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿತ್ತು. ಇದೇ ಸಮಯಕ್ಕಾಗಿ ಹೊಂಚು ಹಾಕುತ್ತಿದ್ದ ಮಂಜುನಾಥ್, ಕಾಲನಿಯಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಂಡಿದ್ದನು. ಮೇ 29ರ ರಾತ್ರಿ 11:30ರ ಸುಮಾರಿಗೆ ರಿಜ್ವಾನ್ ಅವರ ಮನೆಯ ಬೀಗ ಮುರಿದು, ಒಳಗಿದ್ದ 30 ಗ್ರಾಂ ಚಿನ್ನಾಭರಣ ಹಾಗೂ ನಿವೇಶನ (ಸೈಟು) ಖರೀದಿಸಲು ಇಟ್ಟಿದ್ದ ಬರೋಬ್ಬರಿ 30 ಲಕ್ಷ ರೂ. ನಗದನ್ನು ದೋಚಿ ಪರಾರಿಯಾಗಿದ್ದನು.
ಗಂಡನ ಕಳ್ಳತನಕ್ಕೆ ಹೆಂಡತಿ ಸಾಥ್!
ಪತಿಗೆ ಬುದ್ಧಿ ಹೇಳಬೇಕಾಗಿದ್ದ ಪತ್ನಿ ಅನಿತಾ, ಗಂಡ ಕದ್ದು ತರುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಗಿರವಿ ಅಂಗಡಿಯಲ್ಲಿ ಅಡಮಾನವಿಟ್ಟು ಹಣ ಪಡೆಯುತ್ತಿದ್ದಳು. ಇನ್ನು ಕದ್ದ ಹಣದಲ್ಲಿ ಮಂಜುನಾಥ್ ಹೊಸ ಕಾರು ಖರೀದಿಸಿದ್ದಲ್ಲದೆ, ಗೋವಾದ ಕ್ಯಾಸಿನೋ ಸೇರಿದಂತೆ ವಿವಿಧೆಡೆ ಸುತ್ತಾಡಿ ಮೋಜು-ಮಸ್ತಿ ಮಾಡಲು ಹಣವನ್ನು ನೀರಿನಂತೆ ಪೋಲು ಮಾಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿ ಮಂಜುನಾಥ್ ಅಲಿಯಾಸ್ ಕೋಳಿ ಫಯಾಜ್ ಸಣ್ಣಪುಟ್ಟ ಕಳ್ಳನಲ್ಲ. ಈತನ ವಿರುದ್ಧ ಬೆಂಗಳೂರಿನ ಸುಬ್ರಹ್ಮಣ್ಯಪುರ, ತಾವರೆಕೆರೆ, ಮಂಡ್ಯ, ಕುಣಿಗಲ್ ಸೇರಿದಂತೆ ವಿವಿಧ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ 35 ಕಳ್ಳತನ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 18 ಪ್ರಕರಣಗಳು ಸದ್ಯ ಚಾಲ್ತಿಯಲ್ಲಿವೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಹೆಚ್ಚುವರಿ ಎಸ್ ಪಿಗಳಾದ ಪುರುಷೋತ್ತಮ್ ಹಾಗೂ ಗೋಪಾಲ್, ಡಿವೈಎಸ್ಪಿ ಓಂಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಕುಣಿಗಲ್ ವೃತ್ತ ನಿರೀಕ್ಷಕ ಮಾದ್ಯಾನಾಯಕ್ ನೇತೃತ್ವದ ವಿಶೇಷ ಪೊಲೀಸ್ ತಂಡವು ಆರೋಪಿಗಳ ಪತ್ತೆಗೆ ಜಾಲ ಬೀಸಿತ್ತು. ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ ರಾಮಚಂದ್ರಪುರದಲ್ಲಿ ಅಡಗಿದ್ದ ದಂಪತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪತ್ನಿ ಅನಿತಾಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳ್ಳತನದ ಜಾಲದ ಕರಾಳ ಮುಖವನ್ನು ಪೂರ್ತಿಯಾಗಿ ಬಯಲಿಗೆಳೆಯಲು ಪ್ರಮುಖ ಆರೋಪಿ ಮಂಜುನಾಥನನ್ನು ಪೊಲೀಸರು ಹೆಚ್ಚಿನ ತನಿಖೆಗಾಗಿ ತಮ್ಮ ಕಸ್ಟಡಿಗೆ ಪಡೆದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




