ತಿಪಟೂರು: ತಾಲೂಕಿನ ಈರಲಗೆರೆ ಮತ್ತು ಕಿಬ್ಬನಹಳ್ಳಿ ಭಾಗದ ಖಾತೆದಾರರು ಹಾಗೂ ಬಗರ್ ಹುಕುಂ ಸಾಗುವಳಿದಾರ ರೈತರ ಮೇಲೆ ಅರಣ್ಯ ಇಲಾಖೆ ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ ಮತ್ತು ಬೆಸ್ಕಾಂ (BESCOM) ಇಲಾಖೆಯನ್ನು ಖಾಸಗೀಕರಣಗೊಳಿಸುತ್ತಿರುವುದನ್ನು ವಿರೋಧಿಸಿ ವಿವಿಧ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಕಸಬಾ ಹೋಬಳಿಯ ಈರಲಗೆರೆ ಗ್ರಾಮದಿಂದ ಉಪ ವಿಭಾಗಾಧಿಕಾರಿಗಳ (AC) ಕಚೇರಿಯವರೆಗೆ ನೂರಾರು ರೈತರು ಕಾಲ್ನಡಿಗೆ ಜಾಥಾ ನಡೆಸಿ, ತಾಲೂಕು ಕಚೇರಿ ಆವರಣದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಉಪ ವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಅರಣ್ಯ ಇಲಾಖೆಯಿಂದ ಅನಗತ್ಯ ಕಿರುಕುಳ: ದೇವರಾಜು ತಿಮ್ಮಾಪುರ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕು ಅಧ್ಯಕ್ಷ ದೇವರಾಜು ತಿಮ್ಮಾಪುರ ಅವರು, “ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಕೆಲವು ಹಳೆಯ ಭಾಗಗಳು, ಈರಲಗೆರೆ, ಕಾಗೇಹಳ್ಳಿ ಕಾವಲು, ಹಾಲ್ಕುರಿಕೆಯ ಅಮೃತ್ ಮಹಲ್ ಕಾವಲು, ರುದ್ರಾಪುರ ಮತ್ತು ಕೊಡಿಗೇಹಳ್ಳಿ ಗ್ರಾಮಗಳ ರೈತರು 30ರಿಂದ 40 ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದಾರೆ. ಬ್ಯಾಂಕುಗಳಿಂದ ಸಾಲ ಪಡೆದು ತೆಂಗು, ಅಡಕೆ ಬೆಳೆಸಿ ದಶಕಗಳಿಂದ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಈಗ ಅರಣ್ಯ ಇಲಾಖೆಯು ಒತ್ತುವರಿ ನೆಪದಲ್ಲಿ ಅನಾವಶ್ಯಕವಾಗಿ ನೋಟಿಸ್ ಜಾರಿ ಮಾಡಿ ಕಿರುಕುಳ ನೀಡುತ್ತಿದೆ. ತಾಲೂಕು ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಆಕ್ರೋಶ ಹೊರಹಾಕಿದರು.
“ರೈತರ ಮೇಲಿನ ದಬ್ಬಾಳಿಕೆ ಹೀಗೆ ಮುಂದುವರೆದರೆ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು. ಕೂಡಲೇ ಉಪ ವಿಭಾಗಾಧಿಕಾರಿಗಳು ರೈತರು ಮತ್ತು ರೈತ ಪರ ಸಂಘಟನೆಗಳ ಪದಾಧಿಕಾರಿಗಳ ಸಭೆ ಕರೆದು ಶೀಘ್ರ ಪರಿಹಾರ ದೊರಕಿಸಿಕೊಡಬೇಕು.”
— ದೇವರಾಜು ತಿಮ್ಮಾಪುರ, ತಾ. ಅಧ್ಯಕ್ಷರು, ರೈತ ಸಂಘ
ರೈತರ ಬದುಕಿನ ನೆಲೆ ನಾಶಕ್ಕೆ ಯತ್ನ: ಚನ್ನಬಸಣ್ಣ
ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಚನ್ನಬಸಣ್ಣ ಮಾತನಾಡಿ, “ಹೊನ್ನವಳ್ಳಿ ಹೋಬಳಿಯ ರುದ್ರಾಪುರ ಗ್ರಾಮದ ಸರ್ವೆ ನಂಬರ್ 114ರಲ್ಲಿ ಉಪ ವಿಭಾಗಾಧಿಕಾರಿಗಳು ನೀಡಿರುವ ಆದೇಶವನ್ನು ತಕ್ಷಣ ವಾಪಸ್ ಪಡೆಯಬೇಕು. ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯ, ನೋಟಿಸ್‌ಗಳು ರೈತರ ಬದುಕಿನ ನೆಲೆಯನ್ನೇ ನಿರ್ನಾಮ ಮಾಡಲು ಹೊರಟಂತಿದೆ. ಮತ್ತೊಂದೆಡೆ ಕೇಂದ್ರ ಸರ್ಕಾರ ಬೆಸ್ಕಾಂ ಇಲಾಖೆಯನ್ನು ಖಾಸಗೀಕರಣ ಮಾಡಲು ಹೊರಟಿರುವುದು ರೈತರ ಮೇಲೆ ಬರೆ ಎಳೆದಂತಾಗಿದೆ. ಇದರಿಂದ ರೈತರು ಕೃಷಿ ಬಿಟ್ಟು ವಲಸೆ ಹೋಗುವ ಪರಿಸ್ಥಿತಿ ಬಂದೊದಗಿದೆ. ಪ್ರಾಣ ಬೇಕಾದರೂ ಕೊಡುತ್ತೇವೆ ವಿನಃ ನಮ್ಮ ಜಮೀನುಗಳನ್ನು ಅರಣ್ಯ ಇಲಾಖೆಗೆ ಬಿಡುವುದಿಲ್ಲ” ಎಂದು ಎಚ್ಚರಿಸಿದರು.
ರೈತರ ಬೇಡಿಕೆಗಳು:
- ಅರಣ್ಯ ಇಲಾಖೆಯು ರೈತರಿಗೆ ನೀಡಿರುವ ಎಲ್ಲಾ ನೋಟಿಸ್‌ಗಳನ್ನು ತಕ್ಷಣವೇ ಹಿಂಪಡೆಯಬೇಕು.
- ಸಾಗುವಳಿ ಮಾಡುತ್ತಿರುವ ರೈತರ ಭೂ ಹಕ್ಕುಗಳನ್ನು ಕಾನೂನುಬದ್ಧವಾಗಿ ಮಾನ್ಯ ಮಾಡಬೇಕು.
- ಬಗರ್ ಹುಕುಂ ಸಾಗುವಳಿದಾರರಿಗೆ ತಕ್ಷಣವೇ ಶಾಶ್ವತ ಹಕ್ಕುಪತ್ರ ನೀಡಬೇಕು.
- ವಿವಿಧ ಕಾರಣಗಳಿಂದ ಬೆಳೆ ಹಾನಿಯಾದ ರೈತರಿಗೆ ವೈಜ್ಞಾನಿಕ ಪರಿಹಾರ ಒದಗಿಸಬೇಕು.
ಈ ಬೃಹತ್ ಪ್ರತಿಭಟನೆಯಲ್ಲಿ ಎಂಕೆಕೆಎಂಎಸ್‌ನ ಲೋಕೇಶ್ ಬೈರನಾಯಕನಹಳ್ಳಿ, ಬೆಲೆ ಕಾವಲು ಸಮಿತಿಯ ಶ್ರೀಕಾಂತ್ ಕೀಳಹಟ್ಟಿ, ರಾಜ್ಯ ರೈತ ಸಂಘ ಮತ್ತು ರೈತ ಶಕ್ತಿಯ ಜಿಲ್ಲಾಧ್ಯಕ್ಷ ಪದ್ಮಣ್ಣ, ಸೌಹಾರ್ದದ ಅಲ್ಲಾಬಕಾಶ್, ಬಗರ್ ಹುಕುಂ ಹೋರಾಟ ಸಮಿತಿಯ ಮಲ್ಲಿಕಾರ್ಜುನಯ್ಯ ಹಾಗೂ ರೈತ ಮುಖಂಡ ಸಿದ್ದಪ್ಪ ಬಳುವನೇರಲು ಸೇರಿದಂತೆ ರೈತಪರ ಸಂಘಟನೆಗಳ ನೂರಾರು ಪದಾಧಿಕಾರಿಗಳು ಮತ್ತು ರೈತರು ಪಾಲ್ಗೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




