ಸರಗೂರು: ಸ್ಥಳೀಯ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ತರಬೇತಿ ಕಾರ್ಯಕ್ರಮವು ಅತ್ಯುತ್ತಮ ಶೈಕ್ಷಣಿಕ ಬೆಂಬಲವನ್ನು ನೀಡುತ್ತದೆ ಎಂದು ಅದಿಕರ್ನಾಟಕ ಮಹಾಸಭಾದ ಮಾಜಿ ಅಧ್ಯಕ್ಷರಾದ ಸರಗೂರು ಶಿವಣ್ಣ ಅವರು ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣದ 4ನೇ ವಾರ್ಡಿನಲ್ಲಿರುವ ‘ವಿಶ್ವ ಜ್ಞಾನಿ ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘ’ದ ಕಚೇರಿಯಲ್ಲಿ 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಉಚಿತ ಟ್ಯೂಷನ್ ತರಬೇತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು. ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿ ಅವರು ಮಾತನಾಡಿದರು.
“ವಿದ್ಯಾರ್ಥಿ ನಿಲಯದ ಮಕ್ಕಳು ಹಾಗೂ ಸ್ಥಳೀಯ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉತ್ತಮ ಪ್ರಜೆಗಳಾಗಬೇಕು. ಮುಂದೆ ಒಳ್ಳೆಯ ಉದ್ಯೋಗವನ್ನು ಪಡೆದು, ಸಮಾಜದಲ್ಲಿ ಗೌರವಾನ್ವಿತ ಸ್ಥಾನ ಗಳಿಸಬೇಕು. ಪ್ರತಿಯೊಬ್ಬರೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಾಕಿಕೊಟ್ಟಿರುವ ಆದರ್ಶ ಮಾರ್ಗದಲ್ಲಿ ನಡೆಯಬೇಕು” ಎಂದು ಅವರು ಮಕ್ಕಳಿಗೆ ಕಿವಿಮಾತು ಹೇಳಿದರು. ಇದೇ ವೇಳೆ ಸಂಘದ ಸದಸ್ಯರ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು, ಮುಂದೆಯೂ ಇದೇ ರೀತಿಯ ಉತ್ತಮ ಸಾಮಾಜಿಕ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವಂತೆ ಸಲಹೆ ನೀಡಿದರು.
ಬಳಿಕ ಮಾತನಾಡಿದ ಮಾಜಿ ಯಜಮಾನರಾದ ಇಂದಿಯಪ್ಪ ಅವರು, “ಯುವಕರ ಸಂಘವು ನಿರಂತರವಾಗಿ ಉತ್ತಮ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಅದರಲ್ಲೂ ವಿಶೇಷವಾಗಿ ಎಸ್ಎಸ್ಎಲ್ಸಿ (SSLC) ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿರುವುದು ಮತ್ತು ಮಕ್ಕಳ ಮುಂದಿನ ಭವಿಷ್ಯ ಹಾಗೂ ಬೆಳವಣಿಗೆಗೆ ಪೂರಕವಾಗಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯ” ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬೆಟ್ಟಯ್ಯ, ಮಾದೇವ, ಎಸ್. ಬಿ. ಭೀಮಯ್ಯ, ಸಣ್ಣಸ್ವಾಮಿ, ಸಂಘದ ಅಧ್ಯಕ್ಷರಾದ ಶಿವರುದ್ರ ಎಂ., ಸದಸ್ಯರಾದ ಶಿವಕುಮಾರ್, ಬಾಲಕೃಷ್ಣ, ಭೀಮರಾಜ್, ಚಿಕ್ಕಣ್ಣ, ಹನುಮಂತ, ಪ್ರತಾಪ, ವಿಜಿ, ವಿಶ್ವ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




