ಬಿಗ್ ಸ್ಟೋರಿ/ತುಮಕೂರು: ಜಿಲ್ಲೆಯಲ್ಲಿ ಹಣ ಮತ್ತು ಮದ್ಯದ ಆಸೆಗಾಗಿ ನಡೆದಿದ್ದ ಮೂರು ಭೀಕರ ಕೊಲೆ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಅಶೋಕ್ ಕೆ.ವಿ ತಿಳಿಸಿದ್ದಾರೆ. ನಗರದ ಎಸ್ಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 7 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಕರಣ 1: 15 ಲಕ್ಷ ವಿಮೆ ಹಣಕ್ಕಾಗಿ ಸ್ವಂತ ತಮ್ಮನನ್ನೇ ಕೊಂದ ಅಣ್ಣ!
ರಸ್ತೆ ಅಪಘಾತದಂತೆ ಬಿಂಬಿಸಿ ಮುಚ್ಚಿಹಾಕಲು ಯತ್ನಿಸಿದ್ದ ಭೀಕರ ಕೊಲೆ ಪ್ರಕರಣವನ್ನು ಪಟ್ಟನಾಯಕನಹಳ್ಳಿ ಪೊಲೀಸರು ಕೇವಲ 12 ಗಂಟೆಗಳಲ್ಲಿ ಭೇದಿಸಿದ್ದಾರೆ. ಜೂನ್ 20ರಂದು ಹೊಸನಹಳ್ಳಿ-ಬಡೇನಹಳ್ಳಿ ಗೇಟ್ ಮಧ್ಯೆ ಬೈಕ್ ಸಮೇತ ರಮೇಶ್ (35) ಎಂಬುವವರ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಇದು ಅನುಮಾನಾಸ್ಪದ ಸಾವು ಎಂದು ದಾಖಲಾಗಿತ್ತು. ಆದರೆ ತನಿಖೆ ಮತ್ತು ಮರಣೋತ್ತರ ಪರೀಕ್ಷೆಯ ವರದಿಯಿಂದ ಇದು ಕೊಲೆ ಎಂಬುದು ಬೆಳಕಿಗೆ ಬಂದಿದೆ.
ಮೃತ ರಮೇಶ್ ಹೆಸರಿನಲ್ಲಿ 15 ಲಕ್ಷ ರೂ. ಎಲ್ಐಸಿ ವಿಮೆ ಮಾಡಿಸಲಾಗಿತ್ತು. ಅಪಘಾತದಲ್ಲಿ ಮೃತಪಟ್ಟರೆ ದ್ವಿಗುಣ (ಡಬಲ್) ಪರಿಹಾರ ಸಿಗುತ್ತದೆ ಎಂಬ ದುರಾಸೆಯಿಂದ ಸ್ವಂತ ಅಣ್ಣ ಹನುಮಂತರಾಜು ಕೊಲೆಗೆ ಸಂಚು ರೂಪಿಸಿದ್ದನು. ಈ ಸಂಬಂಧ ಹನುಮಂತರಾಜು, ಲಕ್ಷ್ಮೀಕಾಂತ್, ನವೀನ್ ಕುಮಾರ್ ಹಾಗೂ ಎಂ.ಡಿ. ಚೇಲಾನ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಪಿಎಸ್ಐ ಹರೀಶ್, ಸಿಪಿಐ ಶ್ರೀನಿವಾಸ್ ಇನ್ಚಾರ್ಜ್ ಪ್ರವೀಣ್ ಕುಮಾರ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.
ಪ್ರಕರಣ 2: ಮದ್ಯದ ಹಣ ನೀಡದಿದ್ದಕ್ಕೆ ವೃದ್ಧೆಯ ಭೀಕರ ಕೊಲೆ
ಗೌಡೇಟಿ ಗ್ರಾಮದಲ್ಲಿ 80 ವರ್ಷದ ವೃದ್ಧೆ ಗಂಗಮ್ಮ ಎಂಬುವವರನ್ನು ಮದ್ಯ ಸೇವಿಸಲು ಹಣ ನೀಡದ ಕಾರಣಕ್ಕೆ ಭೀಕರವಾಗಿ ಕೊಲೆ ಮಾಡಲಾಗಿತ್ತು. ಜೂನ್ 21ರಂದು ಹಣದ ವಿಚಾರವಾಗಿ ನಡೆದ ಜಗಳದಲ್ಲಿ ನರಸಿಂಹಮೂರ್ತಿ ಎಂಬಾತ ಗಂಗಮ್ಮ ಅವರ ತಲೆಯನ್ನು ಗೋಡೆಗೆ ಗುದ್ದಿ, ಕಬ್ಬಿಣದ ಹೆಂಚಿನಿಂದ ಹಲ್ಲೆ ನಡೆಸಿದ್ದನು. ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದರು. ಪಾವಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್ಪೆಕ್ಟರ್ ಸುರೇಶ ಕೆ., ಪಿಎಸ್ಐ ಸುನೀಲ ಇರೋಡಗಿ ಮತ್ತು ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪ್ರಕರಣ 3: ವೃದ್ಧೆಯನ್ನು ಉಸಿರುಗಟ್ಟಿಸಿ ಕೊಂದು ಚಿನ್ನ ದೋಚಿದ್ದ ಕಿರಾತಕರು ಅರೆಸ್ಟ್
ದಾಸಾಲುಕುಂಟೆ ಗ್ರಾಮದ ಜಮೀನಿನಲ್ಲಿ ಜೂನ್ 16ರಂದು 72 ವರ್ಷದ ರತ್ನಮ್ಮ ಎಂಬ ವೃದ್ಧೆಯ ಕೈ-ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿ, ಮೈಮೇಲಿದ್ದ ಚಿನ್ನಾಭರಣ ದೋಚಲಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡ ಕೊರಟಗೆರೆ ಪೊಲೀಸರು, ಕೇರಳ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ಗಂಗಾಧರ್ (24) ಮತ್ತು ಸೂರ್ಯ (25) ಎಂಬ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಪಿಎಸ್ಐಗಳಾದ ತೀರ್ಥೇಶ್, ಅಭಿಷೇಕ್, ಸುನೀಲ ಇರೋಡಗಿ, ರವೀಂದ್ರನಾಥ್, ಮುತ್ತುರಾಜು ಹಾಗೂ ಸಿಬ್ಬಂದಿ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
ಮಾದಕ ವಸ್ತುಗಳ ವಿರುದ್ಧ ವಿಶೇಷ ಜಾಗೃತಿ:
ಜನರಲ್ಲಿ ಡ್ರಗ್ಸ್ನ ದುಷ್ಪರಿಣಾಮಗಳು ಹಾಗೂ ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ಜೂನ್ 22ರಿಂದ 26ರವರೆಗೆ ಜಿಲ್ಲಾದ್ಯಂತ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದರು.
ಹಿರಿಯ ನಾಗರಿಕರ ರಕ್ಷಣೆಗಾಗಿ ‘ಆಸರೆ ಅಭಿಯಾನ’
ಸಾರ್ವಜನಿಕರ ಹಾಗೂ ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಜಿಲ್ಲಾ ಪೊಲೀಸ್ ಇಲಾಖೆ ‘ಆಸರೆ ಅಭಿಯಾನ’ವನ್ನು ಆರಂಭಿಸಿದೆ. ಒಂಟಿಯಾಗಿ ಜೀವಿಸುತ್ತಿರುವ ಹಿರಿಯ ನಾಗರಿಕರು ಮತ್ತು ವೃದ್ಧರ ನೆರವಿಗಾಗಿ ಒಬ್ಬೊಬ್ಬ ಕಾನ್ಸ್ಟೇಬಲ್ ರನ್ನು ನೇಮಿಸುವ ಮಹತ್ವದ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
ಸಾರ್ವಜನಿಕರಿಗೆ ಎಸ್ಪಿ ಅಶೋಕ್ ಕೆ.ವಿ. ಅವರ ಪ್ರಮುಖ ಮನವಿಗಳು:
ಸಾರ್ವಜನಿಕ ಸ್ಥಳಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಪ್ರದರ್ಶಿಸುವುದನ್ನು ತಪ್ಪಿಸಿ, ಜಾಗರೂಕತೆಯಿಂದ ಧರಿಸಿ.
ನಿಮ್ಮ ಗ್ರಾಮ ಅಥವಾ ಮನೆಯ ಸುತ್ತಮುತ್ತ ಯಾವುದೇ ಹೊಸ ಅಥವಾ ಅನುಮಾನಾಸ್ಪದ ವ್ಯಕ್ತಿ ಕಂಡುಬಂದರೆ, ತಕ್ಷಣ 112 ಕ್ಕೆ ಕರೆ ಮಾಡಿ ಮಾಹಿತಿ ನೀಡಿ.ಮಾಹಿತಿ ನೀಡಿದ ಕೇವಲ 10 ರಿಂದ 15 ನಿಮಿಷಗಳೊಳಗಾಗಿ ಪೊಲೀಸರು ಸ್ಥಳಕ್ಕೆ ಆಗಮಿಸುವ ವ್ಯವಸ್ಥೆ ಮಾಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




