ಕೊರಟಗೆರೆ : ನಮ್ಮ ದೇಶದ ಗ್ರಾಮೀಣ ಸಂಸ್ಕೃತಿಯ ಜೀವಾಳವೇ ನಾಗರಕಟ್ಟೆ. ಪ್ರತಿಯೊಂದು ಗ್ರಾಮದಲ್ಲೂ ನಾಗರಕಟ್ಟೆಯನ್ನು ನಮ್ಮ ಪೂರ್ವಿಕರು ವಿಶಿಷ್ಟವಾದ ಧಾರ್ಮಿಕ–ಸಾಂಸ್ಕೃತಿಕ ಅರ್ಥಪೂರ್ಣತೆಯೊಂದಿಗೆ ಇದರ ಹಿಂದೆ ವೈಜ್ಞಾನಿಕ ದೃಷ್ಟಿಕೋನವೂ ಅಡಗಿದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಬಸ್ ಸ್ಟ್ಯಾಂಡ್ ನಲ್ಲಿರುವ ನಾಗರಕಟ್ಟೆ ಸೇವಾ ಸಮಿತಿಯ ವತಿಯಿಂದ ಆಯೋಜಿಸಿದ್ದ 8 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ನಮ್ಮ ಪ್ರತಿಯೊಂದು ಧಾರ್ಮಿಕ ಆಚರಣೆಯೂ ಕೇವಲ ನಂಬಿಕೆಗೆ ಸೀಮಿತವಲ್ಲ; ಅದರಲ್ಲಿ ವೈಜ್ಞಾನಿಕ ತತ್ತ್ವಗಳು ಅಡಗಿವೆ. ಅರಳಿ ಮರದಿಂದ ಹೆಚ್ಚು ಆಮ್ಲಜನಕ ಉತ್ಪತ್ತಿಯಾಗುವುದರಿಂದ ಪ್ರತಿ ಗ್ರಾಮದಲ್ಲಿಯೂ ಅರಳಿ ಕಟ್ಟೆಯನ್ನು ನಿರ್ಮಿಸಿ, ಅದರ ಕೆಳಗೆ ನಾಗದೇವರನ್ನು ಪ್ರತಿಷ್ಠಾಪಿಸುವ ಪರಂಪರೆಯನ್ನು ನಮ್ಮ ಪೂರ್ವಿಕರು ರೂಪಿಸಿದ್ದರು. ಇದು ಪರಿಸರ ಸಂರಕ್ಷಣೆಗೂ ಮಾನಸಿಕ ಶಾಂತಿಗೂ ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಆಚರಣೆಗಳನ್ನು ಕೇವಲ ವಿಧಿವಿಧಾನಗಳಾಗಿ ಅಲ್ಲ, ಅದರಲ್ಲಿರುವ ಮೌಲ್ಯ ಮತ್ತು ಅರ್ಥವನ್ನು ಅರಿತು ಆಚರಿಸಬೇಕು. ನಾಗರಕಟ್ಟೆಯಲ್ಲಿ ಹೆಣ್ಣುಮಕ್ಕಳು ವಿಶೇಷ ಪೂಜೆ ಮಾಡುವ ಪರಂಪರೆ ನಮ್ಮ ಸಂಸ್ಕೃತಿಯಲ್ಲಿ ಮಹತ್ವ ಪಡೆದಿದೆ. ಇದು ಆರೋಗ್ಯ, ಮನಶ್ಶಾಂತಿ ಹಾಗೂ ಆತ್ಮವಿಶ್ವಾಸಕ್ಕೆ ಪೂರಕವಾಗುತ್ತದೆ ಎಂದು ಹೇಳಿದರು.
ನಾಗರಕಟ್ಟೆ ಜಾಗೃತ ಸ್ಥಳವಾಗಿದ್ದು, ಇಲ್ಲಿ ಬರುವ ಭಕ್ತರಿಗೆ ವಿಶೇಷವಾಗಿ ಮಹಿಳೆಯರಿಗೆ ಕೆಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ದೊರೆಯುವ ನಂಬಿಕೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಅಶ್ವತ್ ಕಟ್ಟೆಯ ಗೌರವಾಧ್ಯಕ್ಷ ಎಸ್. ಪವನ್ ಕುಮಾರ್, ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಕೆ.ಪಿ. ನಾರಾಯಣಪ್ಪ, ಕಾರ್ಯದರ್ಶಿ ಜಯರಾಮ್, ಖಜಾಂಚಿ ಕೆ.ಆರ್. ರಂಗರಾಜು, ಸದಸ್ಯರಾದ ಪರಶುರಾಮ್, ಮೋಹನ್, ನಂಜುಂಡ ಶೆಟ್ಟಿ, ಪದ್ಮಾ ರಮೇಶ್, ಅಶ್ವಥನಾರಾಯಣ್, ಹರೀಶ್ ಹಾಗೂ ಹನುಮಂತು ಸೇರಿದಂತೆ ಹಲವರು ಇದ್ದರು. ಕಾರ್ಯಕ್ರಮದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


