ತುಮಕೂರು: ಕೊರಟಗೆರೆ ತಾಲ್ಲೂಕಿನ ಬೋರಪ್ಪನಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿ ಪುನೀತ್ ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಶಾಕ್ ಗೆ ಒಳಗಾಗಿ ದುರ್ಮರಣ ಹೊಂದಿರುವದು ಅತ್ಯಂತ ದುಃಖಕರ ಹಾಗೂ ಖಂಡನೀಯ ಸಂಗತಿಯಾಗಿದೆ. ಜಿಲ್ಲಾಡಳಿತ ಎಲ್ಲಾ ಶಾಲೆಗಳಲ್ಲೂ ವಿದ್ಯಾರ್ಥಿಗಳ ಸುರಕ್ಷತಾ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಬಿಜೆಪಿ ಎಸ್.ಸಿ. ಮೋರ್ಚಾ ಕಾರ್ಯದರ್ಶಿ ಓಂಕಾರ್ ಒತ್ತಾಯಿಸಿದ್ದಾರೆ.
ಪರಿಶಿಷ್ಟ ಜನಾಂಗದ ಭೋವಿ ಸಮುದಾಯದ ಅಮಾಯಕ ವಿದ್ಯಾರ್ಥಿ ಪುನೀತ್ ತನ್ನ ತಂದೆ ತಾಯಿಯ ಏಕೈಕ ಮಗನಾಗಿದ್ದ, ತಂದೆ ಕಟ್ಟಡ ಕಾರ್ಮಿಕರಾಗಿ ದಿನಗೂಲಿ ಮಾಡಿ ಕುಟುಂಬವನ್ನು ಸಾಗಿಸುತ್ತಿದ್ದು, ಮಗನನ್ನು ಉತ್ತಮ ಶಿಕ್ಷಣ ನೀಡಿ ಜೀವನದಲ್ಲಿ ಉನ್ನತ ಸ್ಥಾನಕ್ಕೆ ತಲುಪಿಸುವ ಕನಸು ಕಂಡಿದ್ದರು. ಭವಿಷ್ಯದಲ್ಲಿ ಕುಟುಂಬಕ್ಕೆ ಆಸರೆಯಾಗಬೇಕಿದ್ದ ಆ ಪುಟ್ಟ ಜೀವ ಇಂದು ನಿರ್ಲಕ್ಷ್ಯದ ಬಲಿಯಾಗಿರುವುದು ಕುಟುಂಬದ ಪಾಲಿಗೆ ಎಂದಿಗೂ ತುಂಬಲಾಗದ ನಷ್ಟವಾಗಿದೆ. ಘಟನೆ ಹಿನ್ನೆಲೆಯಲ್ಲಿ ಓಂಕಾರ್ ಅವರು ಡಿಡಿಪಿಐ ಹಾಗೂ ಬಿಇಒ ಅವರೊಂದಿಗೆ ಬೋರಪ್ಪನಹಳ್ಳಿಯ ಮೃತ ವಿದ್ಯಾರ್ಥಿ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಈ ಘಟನೆ ಕೇವಲ ಒಂದು ಅಫಘಾತವೆಂದು ಪರಿಗಣಿಸಿ ಮುಚ್ಚಿಹಾಕುವ ಪ್ರಯತ್ನವಾಗಬಾರದು. ಶಾಲಾ ಆವರಣದಲ್ಲಿ ವಿದ್ಯುತ್ ಸಂಪರ್ಕದಂತಹ ಅವಾಯಕಾರಿ ವ್ಯವಸ್ಥೆಗಳು ವಿದ್ಯಾರ್ಥಿಗಳ ಕೈಗೆಟುಕುವಂತಿದ್ದರೆ, ಅದರ ಹೊಣೆಗಾರಿಕೆ ಯಾರದು ಎಂಬುದು ಸಮಗ್ರ ತನಿಖೆಯಿಂದ ಬಹಿರಂಗವಾಗಬೇಕು. ಶಾಲೆಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗಿದ್ಗೆ ವಿದ್ಯುತ್ ವ್ಯವಸ್ಥೆಯನ್ನು ನಿಯಮಿತವಾಗಿ ಪರಿಶೀಲಿಸಲಾಗಿತ್ತೇ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆಯೇ ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕು.
ಶಿಕ್ಷಣ ಇಲಾಖೆ, ಬೆಸ್ಕಾಂ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಯಾವುದೇ ನಿರ್ಲಕ್ಷ್ಯ ಕಂಡುಬಂದಲ್ಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯದಿಂದ ಅಮಾಯಕ ವಿದ್ಯಾರ್ಥಿಯ ಜೀವ ಬಲಿಯಾದರೆ ಅದನ್ನು ಯಾವುದೇ ಕಾರಣಕ್ಕೂ ಕ್ಷಮಿಸಲಾಗದು ಎಂದು ಡಿಡಿಪಿಐಗೆ ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


