ಕೊರಟಗೆರೆ: ವಿದ್ಯಾರ್ಥಿಗಳಲ್ಲಿ ವ್ಯಾಪಾರ ಮನೋಭಾವನೆ, ವ್ಯವಹಾರಿಕ ಜೀವನ ನಿರ್ವಹಣೆ ಮಹತ್ವ ತಿಳಿಸುವ ಉದ್ದೇಶದಿಂದ ಹೊಳವನಹಳ್ಳಿ ಹಿಂದೂಸ್ತಾನ್ ಇಂಟರ್ ನ್ಯಾಷನಲ್ ಶಾಲಾ ಆವರಣದಲ್ಲಿ ಎಲ್ ಕೆ ಜಿ, ಯಿಂದ 8 ನೇ ತರಗತಿ ವರೆಗಿನ ಮಕ್ಕಳಿಂದ ಮಕ್ಕಳ ಸಂತೆ ಏರ್ಪಡಿಸಲಾಗಿತ್ತು.
ಓದು, ಆಟ–ಪಾಠಕ್ಕೆ ಮೀಸಲಾಗಿದ್ದ ಶಾಲಾ ಆವರಣ ಸಂತೆಯ ರೀತಿ ಮಾರ್ಪಾಡಗಿತ್ತು. ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ತಂದಂತಹ ವಿವಿಧ ಬಗೆ ಬಗೆಯ ತಾಜಾ ತರಕಾರಿ, ಹೂವು, ಸೊಪ್ಪು, ಹಣ್ಣು-ಹಂಪಲು ಹಾಗೂ ತಿಂಡಿ ತಿನ್ನಿಸುಗಳು, ತಂಪು ಪಾನೀಯಗಳು ಸಂತೆಯಲ್ಲಿದ್ದವು. ಮೊದಲೇ ಹಳ್ಳಿ ಮಕ್ಕಳಾದ್ದರಿಂದ ಪೈಪೋಟಿಗೆ ಬಿದ್ದವರಂತೆ ಭರ್ಜರಿ ವ್ಯಾಪಾರ ಮಾಡಿ ಓದಕ್ಕೂ ಸೈ, ವ್ಯಾಪಾರಕ್ಕೂ ಜೈ ಎನಿಸಿಕೊಂಡರು.
ಶಾಲಾ ಮಕ್ಕಳ ವ್ಯಾಪಾರಕ್ಕೆ ಹಿರಿಯ ವಿದ್ಯಾರ್ಥಿಗಳು ಸಹಕಾರ ನೀಡಿದರು. ವ್ಯಾಪಾರ ಮಾಡುವ ಕೌಶಲ್ಯ ಹೇಳಿಕೊಟ್ಟರು, ಚಿಲ್ಲರೆ ಕೊಡುವ ಲೆಕ್ಕಚಾರ ಕಲಿಸಿದರು. ಒಟ್ಟಿನಲ್ಲಿ ಶಾಲೆಯ ಎಲ್ಲ ಮಕ್ಕಳಿಗೂ ಸಂತೆ ಮೇಳ ಹೊಸ ಕಲೆ ಕಲಿಸಿದಂತಿತ್ತು. ಈ ಮೇಳದಲ್ಲಿ ಶಿಕ್ಷಕರು, ಪೋಷಕರೇ ಗ್ರಾಹಕರಾಗಿ ತಮಗಿಷ್ಟವಾದ ವಸ್ತುಗಳನ್ನು ಖರೀದಿಸಿದರು. ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ವಿವಿಧ ರೀತಿಯ ತಿಂಡಿ ತಿನಿಸು, ತರಕಾರಿಗಳು ಹಾಗೂ ಇತರ ಪದಾರ್ಥಗಳನ್ನು ಮಾರಾಟ ಮಾಡಿದರು.
ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಜತೆಗೆ ಸಹಪಠ್ಯ ಚಟುವಟಿಕೆಗಳನ್ನು ನಡೆಸುವುದರಿಂದ ಅವರ ಬೌದ್ಧಿಕ ಜ್ಞಾನ ವಿಕಾಸ ಮತ್ತು ವ್ಯಕ್ತಿತ್ವ ರೂಪುಗೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಲೆಕ್ಕಾಚಾರ ಪ್ರವೃತ್ತಿ ಹಾಗೂ ಗ್ರಾಹಕರೊಂದಿಗೆ ವರ್ತಿಸುವ ಕೌಶಲ್ಯವನ್ನು ಬೆಳೆಸಲು ಮಕ್ಕಳ ಸಂತೆ ಆಯೋಜಿಸಲಾಗಿತ್ತು.
ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮಕ್ಕಳೂ ಸಹ ಲವಲವಿಕೆಯಿಂದ ಪಾಲ್ಗೊಂಡು ಶಾಲೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಠಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಫೈರೋಜ್ ಬೇಗಂ ಹಿಂದೂಸ್ತಾನ್ ಶಾಲೆಗೆ ಭೇಟಿ ನೀಡಿ ಸಂತೆ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳಿಂದ ತಿಂಡಿ ತಿನಿಸುಗಳನ್ನು ಖರೀದಿಸಿ ಸಂತೆ ಮೇಳಕ್ಕೆ ಮಕ್ಕಳ ತೋರುಸುತ್ತಿದ್ದ ಆಸಕ್ತಿ ಆಲಿಸಿದರು. ಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ನಡೆಸಿ ಮಕ್ಕಳ ಪ್ರತಿಭೆಗೆ ವೇದಿಕೆ ಸೃಷ್ಟಿಸಿದೆ. ಈ ಜೊತೆಗೆ ಮಕ್ಕಳಲ್ಲಿ ವ್ಯವಹಾರ ಜ್ಞಾನ ಬೆಳೆಸಲು ಸಂತೆ ಮೇಳ ನಡೆಸುತ್ತಿದ್ದು ಮಕ್ಕಳಿಗೆ ಶಾಲೆಯ ಹೊರತಾದ ಪ್ರಪಂಚ ಪರಿಚಯ ಮಾಡಲಾಗುತ್ತಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯಸ್ಥರಾದ ಯಾಸ್ಮಿನ್ ಸುಲ್ತಾನ ಮಾತನಾಡಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಆರ್ಥಿಕ ವ್ಯವಹಾರ ನಡೆಸುವುದು ಹೇಗೆ ಎಂಬ ಬಗ್ಗೆ ಈ ಸಂತೆ ಮೇಳದಿಂದ ಅರಿವು ಮೂಡುತ್ತದೆ. ಇದರಿಂದ ಮಕ್ಕಳಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಉಪಯೋಗ ಆಗಲಿದೆ ಎಂದು ಹೇಳಿದರು.
ಸಂತೆ ಮೇಳ ಕಾರ್ಯಕ್ರದಲ್ಲಿ ಮಕ್ಕಳು ತಂದಿದ್ದoತಹ ಆಹಾರ ಪದಾರ್ಥಗಳು, ತಿಂಡಿ, ನೀರು, ಜ್ಯೂಸ್ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಪೋಷಕರು ಖರೀದಿ ಮಾಡಿ ಸಂತೆ ಮೇಳ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಅಮೀನ್ ಖಾನ್, ಶಿಕ್ಷಕರುಗಳಾದ ಪಲ್ಲವಿ, ವನಜಾಕ್ಷಿ, ದೇವರಾಜ್, ರೇಷ್ಮಾಬಾನು,ರಾಬೀಯಾ ಬೇಗಂ, ಸೈಯಿದಾ ಬೇಗಂ,ಇನಿಸಿಯಾ ಫಾತಿಮಾ ಉಮೇ ಕುಲ್ಸುಮ್, ಸಮರ್ ಸೇರಿದಂತೆ ಪೋಷಕರು ಹಾಗೂ ಸಾರ್ವಜನಿಕರು ವಿದ್ಯಾರ್ಥಿಗಳು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


