ತುಮಕೂರು: ಉರ್ದು ಮಾಧ್ಯಮ ಶಾಲೆಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಹೊರಗೆ ಉಳಿಯುತ್ತಿದ್ದು, ಆ ಮಕ್ಕಳನ್ನು ಶಾಲೆಗೆ ಮರಳಿ ಕರೆತರುವುದು ಆಯಾಯ ಶಾಲೆಗಳ ಶಿಕ್ಷಕರಿಗೆ ಸವಾಲಿನ ಕೆಲಸವಾಗಿದೆ ಎಂದು ಡಿಡಿಪಿಐ ರಘುಚಂದ್ರ ತಿಳಿಸಿದರು.
ನಗರದ ಧಾನ್ಯ ಪ್ಯಾಲೇಸ್ ನಲ್ಲಿ ತಹರೀಕ್ ಉರ್ದು–ಅದಬ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಕರು ಎಂಬ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಯ ಶಿಕ್ಷಕರು ಒಂದು ಮಾದರಿ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡರೆ, ಮಕ್ಕಳು ತಾನಾಗಿಯೇ ಶಾಲೆಗೆ ಪ್ರವೇಶ ಪಡೆಯುತ್ತಾರೆ. ಇಂದಿನ ಅಗತ್ಯಕ್ಕೆ ಅನುಗುಣವಾಗಿ, ಜ್ಞಾನದ ಜೊತೆಗೆ, ಮಾನವೀಯ ಗುಣಗಳನ್ನು ಕಲಿಸುವತ್ತ ಶಿಕ್ಷಕರು ಮುಂದಾಗಬೇಕೆಂದರು.
ಉರ್ದು ಶಾಲೆಗಳು ಪ್ರಮುಖವಾಗಿ ಶಿಕ್ಷಕರ ಕೊರತೆ ಎದುರಿಸುತ್ತಿದೆ. ಬಹುತೇಕ ಅತಿಥಿ ಉಪನ್ಯಾಸಕರಿಂದ ಶಾಲೆಗಳಲ್ಲಿ ಪಾಠ ಪ್ರವಚನ ನಡೆಯುತ್ತಿವೆ. ಉತ್ತಮ ಫಲಿತಾಂಶದ ಹಿನ್ನೆಲೆಯಲ್ಲಿ ಸ್ವಲ್ಪ ಒತ್ತಡ ಹಾಕಿದರೂ ಕೆಲಸಕ್ಕೆ ಬರುವುದಿಲ್ಲ. ಹಾಗಾಗಿ ಸಮುದಾಯದ ಮುಖಂಡರು ಹಾಗೂ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತಂದು ಖಾಯಂ ಉಪನ್ಯಾಸಕರ ನೇಮಕಕ್ಕೆ ಮುಂದಾಗಬೇಕೆಂದು ಡಿಡಿಪಿಐ ರಘುಚಂದ್ರ ಮನವಿ ಮಾಡಿದರು.
ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಕ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಸೈಯದ್ ಮುಮ್ತಾಜ್ ಮನ್ಸೂರ್, ಬದಲಾವಣೆ ಎಂಬುದು ಒಂದು ನಿರಂತರ ಪ್ರಕ್ರಿಯೆ. ಕೊರತೆಗಳನ್ನು ನೆಪದಲ್ಲಿ ಬದಲಾವಣೆಗೆ ತಕ್ಕಂತೆ ನಾವು ತಯಾರಾಗದಿದ್ದರೆ ಭವಿಷ್ಯದ ಪೀಳಿಗೆಗೆ ಅಧೋಗತಿಗೆ ಹೋಗಲಿದೆ. ಹಾಗಾಗಿ ಶಿಕ್ಷಕರು ಇರುವ ಸೌಕರ್ಯಗಳನ್ನು ಬಳಸಿಕೊಂಡೇ ಇಂದಿನ ಅಗತ್ಯಕ್ಕೆ ಅನುಗುಣವಾಗಿ ಜೆನ್–ಜಿ ಮತ್ತು ಆಲ್ಫಾ ಜೆನ್ ಯುಗದ ಮಕ್ಕಳಿಗೆ ಬೋಧನೆ ಮಾಡಬೇಕಾಗಿದೆ ಎಂದರು.
ತಹರೀಕ್ ಉರ್ದು ಅದಬ್ ಜಿಲ್ಲೆಯ ಉರ್ದು ಶಾಲೆಗಳಲ್ಲಿರುವ ಇರುವ ಕುಂದು, ಕೊರತೆಗಳ ಕುರಿತು ಸಮೀಕ್ಷೆ ನಡೆಸಿ, ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳ ಕುರಿತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಮೆಹಬೂಬ್ ಪಾಷ ವರದಿ ಮಂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯರಾದ ಡಾ.ಎಸ್. ಶಫಿ ಅಹಮದ್ ವಹಿಸಿದ್ದರು. ವೇದಿಕೆಯಲ್ಲಿ ತಹರೀಕ್ ಉರ್ದು-ಅದಬ್‌ನ ತುಮಕೂರು ಜಿಲ್ಲಾಧ್ಯಕ್ಷ ಹಾಗೂ ಉದ್ಯಮಿ ತಾಜುದ್ದೀನ್ ಶರೀಫ್, ಕವಿ ಹಾಗೂ ತಹರೀಕ್ ಉರ್ದು ಅದಬ್‌ನ ಮಾಜಿ ಅಧ್ಯಕ್ಷರಾದ ಮುನಾವರ್ ಮುಬೀನ್, ಉಬೇದುಲ್ಲಾ ಶರೀಫ್, ಕೆಎಂಡಿಸಿ ವ್ಯವಸ್ಥಾಪಕರಾದ ಆಲಿಂವುಲ್ಲಾ, ಖಜಾಂಜಾಧಿಕಾರಿ ಝಕೀಯಾವುಲ್ಲಾ, ವಿಷಯ ಪರಿವೀಕ್ಷಕರಾದ ಮಂಜುನಾಥ್ ಆಚಾರ್ಯ, ಮುಜಮಿಲ್ ಪಾಷ, ಮುಖ್ಯೋಪಾಧ್ಯಾಯರಾದ ಫೈರೋಜ್ ಪಾಷ ಮತ್ತಿತರರು ವೇದಿಕೆಯಲ್ಲಿದ್ದರು. ಕಾರ್ಯಗಾರದಲ್ಲಿ ಮೌಲಾನಾ ಶಾಲೆಯ ಶಿಕ್ಷಕರುಗಳು ಪಾಲ್ಗೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


