ಚಿಕ್ಕನಾಯಕನಹಳ್ಳಿ: ಕರ್ನಾಟಕ ಸರ್ಕಾರವು ಅಭಿವೃದ್ಧಿ ಕೆಲಸಗಳಿಗಿಂತ ಹೆಚ್ಚಾಗಿ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
ಸೋಮವಾರ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಆಯೋಜಿಸಲಾಗಿದ್ದ 100ನೇ ವಾರದ ‘ಜನಸ್ಪಂದನ’ ಕಾರ್ಯಕ್ರಮ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಜನರ ನೂರಾರು ಕೋಟಿ ರೂಪಾಯಿ ತೆರಿಗೆ ಹಣವನ್ನು ಕೇವಲ ಜಾಹೀರಾತುಗಳಿಗಾಗಿ ಪೋಲು ಮಾಡುತ್ತಿದೆ. ಅಭಿವೃದ್ಧಿ ಎಂಬುದು ಕೇವಲ ಪೇಪರ್ ಜಾಹೀರಾತುಗಳಲ್ಲಿ ಮಾತ್ರ ಕಾಣಿಸುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ರಾಜ್ಯವು ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ನಾನು ಹೇಳುವುದಿಲ್ಲ, ಆದರೆ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಬದಲು, ಅವರನ್ನು ದಿನನಿತ್ಯ ಇನ್ನೊಬ್ಬರ ಮುಂದೆ ಕೈಯೊಡ್ಡುವ ಸ್ಥಿತಿಗೆ ದೂಡಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
“ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದೆ, ಆದರೆ ಎಂದೂ ಪ್ರಚಾರಕ್ಕೆ ಹಪಹಪಿಸಲಿಲ್ಲ. ಈಗ ಕೆಲಸಕ್ಕಿಂತ ಪ್ರಚಾರವೇ ಜಾಸ್ತಿಯಾಗಿದೆ” ಎಂದು ಅವರು ಕಿಡಿಕಾರಿದರು.
ಜಾತಿ ರಾಜಕಾರಣ: ಸರ್ಕಾರವು ಪ್ರತಿ ಕಾರ್ಯಕ್ರಮದಲ್ಲೂ ಸಂವಿಧಾನದ ಪೀಠಿಕೆ ಓದಿ ನಾವು ಜಾತ್ಯತೀತರು ಎಂದು ಹೇಳಿಕೊಳ್ಳುತ್ತದೆ. ಆದರೆ ಅಧಿಕಾರದ ಲಾಭಕ್ಕಾಗಿ ಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಅವರು ಟೀಕಿಸಿದರು.
ಆಕಸ್ಮಿಕ ಮುಖ್ಯಮಂತ್ರಿ: ಇದೇ ಸಂದರ್ಭದಲ್ಲಿ ತಮ್ಮ ರಾಜಕೀಯ ಜೀವನವನ್ನು ಸ್ಮರಿಸಿದ ಅವರು, “ನಾನು ರಾಜ್ಯದ ಆಕಸ್ಮಿಕ ಮುಖ್ಯಮಂತ್ರಿ. ಜನರ ಆಶೀರ್ವಾದಕ್ಕಿಂತ ಹೆಚ್ಚಾಗಿ ದೈವ ಪ್ರೇರೇಪಣೆಯಿಂದ ನನಗೆ ಅಧಿಕಾರ ಸಿಕ್ಕಿತ್ತು. ಈಗ ಪ್ರಧಾನಿ ಮೋದಿ ಅವರು ಕೇಂದ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಾರೆ” ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ, ಶಾಸಕ ಸಿ.ಬಿ. ಸುರೇಶ್ ಬಾಬು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಜಿಲ್ಲಾ ಮತ್ತು ತಾಲ್ಲೂಕು ಆಡಳಿತದ ವತಿಯಿಂದ ಈ ಜನಸ್ಪಂದನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


