ಕೊರಟಗೆರೆ: ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ನೀರು ಈ ವರ್ಷದ ಜೂನ್ ಅಥವಾ ಜುಲೈ ತಿಂಗಳ ವೇಳೆಗೆ ಅರಸೀಕೆರೆಗೆ ತಲುಪಲಿದ್ದು, ಶೀಘ್ರದಲ್ಲೇ ಜಿಲ್ಲೆಯ ಇತರ ಭಾಗಗಳಿಗೂ ಹರಿಯಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಸೋಮವಾರ ಕೊರಟಗೆರೆ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಅಂದಾಜು ₹40 ಕೋಟಿ ವೆಚ್ಚದ ಬ್ರಿಡ್ಜ್ ಕಂ ಬ್ಯಾರೇಜ್ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹೊಳವನಹಳ್ಳಿ ಮತ್ತು ಪುರವರ ಹೋಬಳಿ ವ್ಯಾಪ್ತಿಯಲ್ಲಿ 25ಕ್ಕೂ ಹೆಚ್ಚು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕಳೆದ ಬಜೆಟ್‌ನಿಂದ ಈವರೆಗೆ ಕ್ಷೇತ್ರಕ್ಕೆ ಒಟ್ಟು ₹218 ಕೋಟಿ ಅನುದಾನ ಮಂಜೂರಾಗಿದ್ದು, ಹಂತಹಂತವಾಗಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು.
ಕಳೆದ ಬಾರಿ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಸೇತುವೆಗಳನ್ನು ಕೇವಲ ಸಂಚಾರಕ್ಕಾಗಿ ಮಾತ್ರವಲ್ಲದೆ, ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ‘ಬ್ರಿಡ್ಜ್ ಕಂ ಬ್ಯಾರೇಜ್’ ಮಾದರಿಯಲ್ಲಿ ಮರುನಿರ್ಮಾಣ ಮಾಡಲಾಗುತ್ತಿದೆ ಅಂತ ತಿಳಿಸಿದರು.
ಅರಣ್ಯ ಪ್ರದೇಶದ ನಡುವೆ ಕಾಮಗಾರಿ ಇರುವುದರಿಂದ ತಾಂತ್ರಿಕ ತೊಡಕುಗಳು ಎದುರಾಗಿದ್ದವು. ಈ ಸಂಬಂಧ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು: ಕೊರಟಗೆರೆ ಆಸ್ಪತ್ರೆಗೆ ₹40 ಕೋಟಿ ಹಾಗೂ ತೋವಿನಕೆರೆ ಆಸ್ಪತ್ರೆಗೆ ₹36 ಕೋಟಿ ಅನುದಾನ ನೀಡಲಾಗಿದೆ. ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ತೋವಿನಕೆರೆಯಲ್ಲಿ ₹32 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿಲಯ ಸ್ಥಾಪಿಸಲಾಗುತ್ತಿದೆ.
ಮಕ್ಕಳಿಗೆ ಮೊಬೈಲ್ ನಿಷೇಧ: 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಮತ್ತು ಇಂಟರ್ನೆಟ್ ನಿಷೇಧಿಸುವ ಬಗ್ಗೆ ರಾಜ್ಯದಲ್ಲಿ ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಂಡರೆ ರಾಜ್ಯದಲ್ಲೂ ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


